ರಾಜ್ಯದ 53 ಪ್ರಯೋಗಾಲಯಗಳಿಗೆ NABL ಮಾನ್ಯತೆ ದೊರೆತಿದೆ. ಯಾವುದೇ ಸರ್ಕಾರಗಳು ಬರಲಿ ಕೃಷಿ ಅಧಿಕಾರಿಗಳು ಪ್ರಾಮಾಣಿಕವಾಗಿ ರೈತರ ಪರವಾದ ಕೆಲಸಗಳನ್ನು ಮಾಡಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಬೆಂಗಳೂರು ನಗರದ ಕೃಷಿ ಆಯುಕ್ತಾಲಯದಲ್ಲಿರುವ ಸಂಗಮ ಸಂಭಾಗಣದಲ್ಲಿ, NABL(ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿ) ಮಾನ್ಯತೆ ಪಡೆದಿರುವ ಪ್ರಯೋಗಾಲಯಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮತನಾಡಿದರು.
“ಕೃಷಿ ಇಲಾಖೆಯ ಯೋಜನೆಗಳು ರೈತರಿಗೆ ತಲುಪಬೇಕು. ಇದಕ್ಕಾಗಿ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಉತ್ತಮ ಫಲಿತಾಂಶ ಹೊರಬರಲಿದೆ. ಕೃಷಿ ಇಲಾಖೆಯ 29, ತೋಟಗಾರಿಕೆ ಇಲಾಖೆಯ 6, ರೇಷ್ಮೆ ಇಲಾಖೆಯ 1, ಕೃಷಿ ವಿಶ್ವವಿದ್ಯಾಲಯಗಳ 3 ಮತ್ತು ಕೃಷಿ ವಿಜ್ಞಾನ ಕೇಂದ್ರಗಳ 5 ಮಣ್ಣು ಪರೀಕ್ಷಾ ಪ್ರಯೋಗಾಲಗಳು ಸೇರಿದಂತೆ ಒಟ್ಟು 44 ಮಣ್ಣು ಪರೀಕ್ಷಾ ಪ್ರಯೋಗಾಲಯಗಳು NABL Recognition ಪಡೆದಿರುವುದು ಅಭಿನಂದನೀಯ” ಎಂದು ಸಂತಸ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯ 6 ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಗಳು, 2 ರಾಜ್ಯ ಕೀಟನಾಶಕ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಕರ್ನಾಟಕ ರಾಜ್ಯ ಬಿತ್ತನೆಬೀಜ ಹಾಗೂ ಸಾವಯವ ಪ್ರಮಾಣ ಸಂಸ್ಥೆಯ 1 ಬಿತ್ತನೆಬೀಜ ಪರೀಕ್ಷಾ ಪ್ರಯೋಗಾಲಯ ಸೇರಿ 9 ಪ್ರಯೋಗಾಲಯಗಳು NABL Accreditation ಪಡೆದಿರುತ್ತವೆ. ಈ ಹಿನ್ನಲೆಯಲ್ಲಿ, NABL ಸಹಯೋಗದೊಂದಿಗೆ ʼNABL ಮಾನ್ಯತೆ ಪಡೆದಿರುವ ಪ್ರಯೋಗಾಲಯʼಗಳ ಅಧಿಕಾರಿಗಳಿಗೆ ಸಚಿವರು ಅಭಿನಂದಿಸಿ ಪ್ರಶಸ್ತಿ ಪತ್ರ ನೀಡಿದರು..
ಕಾರ್ಯಕ್ರಮದಲ್ಲಿ NABL ಮಾನ್ಯತೆ ಪಡೆದ ವಿವಿಧ 53 ಪ್ರಯೋಗಾಲಯಗಳನ್ನು ಸನ್ಮಾನಿಸುವ ಜತೆಗೆ ಇತರೆ ಪ್ರಯೋಗಾಲಯಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳನ್ನೂ ಕೂಟ ನಡೆಸಲಾಯಿತು.
ಕೃಷಿ ಸಚಿವರು ಎಲ್ಲ NABL ಮಾನ್ಯತೆ ಪಡೆದ ಪ್ರಯೋಗಾಲಯಗಳನ್ನು ಅಭಿನಂದಿಸುತ್ತ, “ರಾಜ್ಯದ ರೈತರ ಏಳಿಗೆಗೆ ಗುಣಮಟ್ಟದ ಪರಿಕ್ಷಾ ಫಲಿತಾಂಶ ನೀಡುವಲ್ಲಿ ಮತ್ತು ಗುಣಮಟ್ಟವನ್ನು Lab to Landಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯು ಕಾರ್ಯ ನಿರ್ವಹಿಸುವ ಜವಾಬ್ದಾರಿ ಹೊಂದಿದ್ದು, ಈ ನಿಟ್ಟಿನಲ್ಲಿ ʼNABL ಮಾನ್ಯತೆʼ ಅತ್ಯಂತ ಅವಶ್ಯವಾಗಿರುತ್ತದೆ” ಎಂದು ತಿಳಿಸಿದರು.
NABL ಮಾನ್ಯತೆ ಪಡೆಯುವಲ್ಲಿ ಶ್ರಮಿಸಿದ ಎಲ್ಲ ಹಂತದ ಇಲಾಖಾ ಅಧಿಕಾರಿಗಳು/ಸಿಬ್ಬಂದಿಗಳ ಪ್ರಯತ್ನ ಪ್ರಶಂಸನೀಯ ಎಂದು ಹೇಳಿದರು.
NABL ಎಂದರೆ?
National Accreditation Board for Testing and Calibration Laboratories, ಈ ಸಂಸ್ಥೆಯ ಪ್ರಯೋಗಾಲಯಗಳ ಪರೀಕ್ಷೆ, ಮಾಪನಾಂಕ ನಿರ್ಣಯ ಮತ್ತು ಇತರ ತಾಂತ್ರಿಕ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ನಿರ್ಣಯಿಸುವುದು ಹಾಗೂ ಗುರುತಿಸುವುದು ಪ್ರಮುಖ ಉದ್ದೇಶವಾಗಿರುತ್ತದೆ. NABL ಮಾನ್ಯತೆ ಪ್ರಕ್ರಿಯೆಯು ಕಠಿಣ ಮೌಲ್ಯಮಾಪನಗಳನ್ನು ಒಳಗೊಂಡಿದ್ದು, ಪ್ರಯೋಗಾಲಯಗಳು ನಿರಂತರ ವಿಶ್ವಾಸ ಮತ್ತು ನಿಖರವಾದ ಫಲಿತಾಂಶ ನೀಡುವುದನ್ನು ಖಚಿತಪಡಿಸುತ್ತವೆ. NABL ಮಾನ್ಯತೆ ಪಡೆದ ಪ್ರಯೋಗಾಲಯಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನು ಒಳಗೊಂಡಂತೆ ನಿಖರ ಹಾಗೂ ವಿಶ್ವಾಸಾರ್ಹವಾಗಿರುತ್ತವೆ. NABL ಮಾನದಂಡಗಳಿಗೆ ಅನುಗುಣವಾಗಿ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಇತರೆ ಇಲಾಖೆಗಳ ಪ್ರಯೋಗಾಲಯಗಳನ್ನು ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಾದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(RKVY), SMSP ಹಾಗೂ ರಾಜ್ಯ ವಲಯ ಯೋಜನೆಗಳಡಿ ಅನುದಾನ ಒದಗಿಸಿ ಬಲವರ್ಧನೆಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಅರ್ಹ ಪಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಿಸಲು ಸರ್ಕಾರಕ್ಕೆ ಮನವಿ: ವಿ ಎಂ ಮುನಿಯಪ್ಪ
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, NABL ಸಿಇಒ ವೆಂಕಟೇಶ್ವರನ್, ಕೃಷಿ ಇಲಾಖೆ ಆಯುಕ್ತ ವೈ ಎಸ್ ಪಾಟೀಲ್, ನಿರ್ದೇಶಕ ಡಾ. ಜಿ ಟಿ ಪುತ್ರ, ಸೆಕೆಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣರೆಡ್ಡಿ, ಕರ್ನಾಟಕ ರಾಜ್ಯ ಬಿತ್ತನೆಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನೂಪ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಇದ್ದರು.