ಜಾನಪದ ತವರೂರು ಚಾಮರಾಜನಗರದಲ್ಲಿಲ್ಲ ಈ ಬಾರಿಯ ದಸರಾ; ಕಲಾವಿದರ ಮರೆತ ಸರ್ಕಾರ

Date:

Advertisements

ನಾಡಹಬ್ಬ ದಸರಾ ಸಡಗರದ ಸಮಯದಲ್ಲಿ ಕಳೆಗುಂದಿದ ಚಾಮರಾಜನಗರ. ಜಾನಪದ ತವರೂರು, ಕಲಾವಿದರ ನೆಲೆಬೀಡು. ಕಳೆದ ಬಾರಿಯ ಚೆಲುವ ಚಾಮರಾಜನಗರ ನಮ್ಮ ದಸರಾ ವೈಭವ ವರ್ಷ ಕಳೆಯುವ ಹೊತ್ತಿಗೆ ನಿರಾಶಾಬಾವ ಮೂಡಿಸಿದೆ. ಹಿಂದಿನ ವರುಷ ಕಲಾವಿದರು ಕುಣಿದು, ಕುಪ್ಪಳಿಸಿದ ಸಂತಸದ ಕ್ಷಣ ಇಂದಿಲ್ಲ. ಸರ್ಕಾರ ಕಲಾವಿದರನ್ನು ಅಕ್ಷರಶಃ ಮರೆತಿದೆ.

ನಾಡಹಬ್ಬ ಮೈಸೂರಿಗೆ ಸೀಮಿತ ಅಂತೇನು ಇಲ್ಲ. ವಿಜಯನಗರ ಸಾಮ್ರಾಜ್ಯದಾದಿಯಾಗಿ ರಾಜ್ಯದ ಹಲವೆಡೆ ನಡೆದುಕೊಂಡು ಬಂದಿದೆ. ಆದರೇ, ಹೆಚ್ಚಿನ ಮಹತ್ವ ಇರುವುದು ಮೈಸೂರಿನ ದಸರಕ್ಕೆ. ಅದರಂತೆಯೇ ಚಾಮರಾಜನಗರದಲ್ಲಿಯೂ ಸಹ ಇದುವರೆಗೆ ನಡೆದುಕೊಂಡು ಬಂದಿದೆ. ಆದರೇ, ಈ ಬಾರಿ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೂ ದಸರೆಗೂ ಏನು ಸಂಭಂದ ಎನ್ನುವ ಪ್ರಶ್ನೆ ಎತ್ತಿ, ಈ ಬಾರಿ ದಸರಾ ನಡೆಸಲ್ಲ ಎಂದಿರುವುದು ಕಲಾವಿದರಿಗೆ ನಿರಾಸೆ, ಜೊತೆ ಜೊತೆಗೆ ನೋವು. ಜಾನಪದ ಕಲೆಗಳ ತವರೂರಲ್ಲಿ ಕಾರ್ಯಕ್ರಮಗಳೇ ನಡೆಯದೇ ಬಡ ಕಲಾವಿದರು ಅವಕಾಶ, ಆರ್ಥಿಕ ನೆರವಿನಿಂದ ವಂಚಿತರಾಗಿ ಅಸಹಾಯಕರಾಗಿದ್ದಾರೆ.

ದಸರಾ ಸರ್ಕಾರಿ ಕಾರ್ಯಕ್ರಮ. ಸರ್ಕಾರ, ಜಿಲ್ಲಾಡಳಿತ, ಸ್ಥಳೀಯ ಆಡಳಿತ ಜವಾಬ್ದಾರಿಯಿಂದ ನಡೆಸುವ ಕಾರ್ಯಕ್ರಮ. ಹಿಂದೆಲ್ಲಾ ತಾಲ್ಲೂಕು ದಸರಾ ಸಹ ನಡೆದಿವೆ. ಆದರೇ, ಈ ಬಾರಿ ಆರ್ಥಿಕ ವೆಚ್ಚ ಹೆಚ್ಚಾಗುವ ಕಾರಣಕ್ಕೆ ಚಾಮರಾಜನಗರ ದಸರಾ ನಿಲ್ಲಿಸಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆ ನೆಟ್ಟಿಗರದ್ದು.

ದಸರಾ ಮಾಡಲೇಬೇಕು ಎನ್ನುವುದಕ್ಕಿಂತ, ಕಲಾವಿದರ ಮರೆತಿದ್ದು ಸರಿಯೇ? ಎನ್ನುವ ಪ್ರಶ್ನೆ. ಸಾಂಸ್ಕೃತಿಕವಾಗಿ, ಜಾನಪದ ಕಲಾವಿದರ ತವರೂರಿನಲ್ಲಿ ಅದ್ದೂರಿಯಾಗಿ ಅಲ್ಲದೆ ಇದ್ದರು, ಸರಳವಾಗಿ, ಸಾಂಕೇತಿಕವಾಗಿ ಕಲಾವಿದರ ಒಳಗೊಳ್ಳುವಿಕೆಯಲ್ಲಿ, ವಾರಗಟ್ಟಲೆ ಅಲ್ಲದೆ ಇದ್ದರು ಒಂದೆರಡು ದಿನ ನಡೆಸಬಹುದಿತ್ತು. ಜನರ ಪಾಲ್ಗೊಳ್ಳುವಿಕೆಗೆ ಹಾಗೆಯೇ, ಸಂಭ್ರಮಿಸಲು. ಇದರಿಂದ ಬಡ ಕಲಾವಿದರಿಗೆ ಜಿಲ್ಲಾಡಳಿತ, ಸರ್ಕಾರದಿಂದ ಅಲ್ಪಸ್ವಲ್ಪ ಆರ್ಥಿಕ ನೆರವು, ಪ್ರೋತ್ಸಾಹ, ವೇದಿಕೆ ದೊರೆತಿದ್ದರೆ ನಿಜಕ್ಕೂ ಸಾರ್ಥಕವಿರುತಿತ್ತು ಎನ್ನುತ್ತಾರೆ ಸಾರ್ವಜನಿಕರು.

ಇಲ್ಲಿ ಮಲತಾಯಿ ಧೋರಣೆ ಎಂತಲೋ, ನಿರ್ಲಕ್ಷ್ಯ ಎಂದೋ, ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ಷಮತೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯೊ. ಸಹಜವಾಗಿ ಸರ್ಕಾರದ ಮೇಲೆ ಒತ್ತಡ ತರಲು, ಕಾರ್ಯಕ್ರಮ ಆಯೋಜಿಸಲು ಆಗದೇ ಹೋಯಿತು ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಮೈಸೂರಿನಲ್ಲಿ ಅಷ್ಟೇ ಅಲ್ಲ ಶ್ರೀರಂಗಪಟ್ಟಣ, ನಂಜನಗೂಡು, ಕೊಡಗಿನ ಮಡಿಕೇರಿ, ವಿರಾಜಪೇಟೆ, ಗೋಣಿಕೊಪ್ಪಲಿನಲ್ಲಿ ದಸರಾ, ಮಂಡ್ಯ ಜಿಲ್ಲೆಯಲ್ಲಿ ಅದ್ದೂರಿ ಜಲಪಾತೋತ್ಸವ ನಡೆಯುತ್ತಿದೆ.

ಅದಕ್ಕೆಲ್ಲ ಹಣ ಬಿಡುಗಡೆಯಾಗಿದೆ. ದಸರಾ ಸಮಿತಿ ರಚಿಸಿ, ಮುಂದಿನ ರೂಪುರೇಷೆ ಸಿದ್ದಗೊಳ್ಳುತ್ತಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿದಿಗಳು ಇಂದಲ್ಲ, ಹಿಂದೆಯೇ ಒತ್ತಡ ತಂದು ಮುಂದಾಲೋಚನೆಯಲ್ಲಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದರು. ಆದರೇ, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದವರಾಗಿದ್ದರು ಗಮನ ಸೆಳೆಯಲು, ಕಾರ್ಯಕ್ರಮ ನಿಗದಿ ಪಡಿಸಲು ವಿಫಲರಾದರೇ?.

ಸರ್ಕಾರಕ್ಕೆ ಚಾಮರಾಜನಗರ ದಸರಾ ನಡೆಸುವುದರಿಂದ ಆಗುವಂತಹ ಆರ್ಥಿಕ ಹೊರೆಯಾದರು ಏನು?. ಇಲ್ಲಿರುವ ಕಲಾವಿದರ ಪಾಡೇನು?. ಸಿದ್ದರಾಮಯ್ಯನವರು ಸಹ ಜಿಲ್ಲೆಯವರೇ ಆಗಿದ್ದು, ಈ ರೀತಿ ಯಾಕೆ ಕಡೆಗಣಿಸಿದಿರಿ ಎನ್ನುವ ಪ್ರಶ್ನೆಗಳಿವೆ. ಅಲ್ಲದೇ, ಆಚರಣೆ ದೃಷ್ಟಿಯಿಂದಲ್ಲದೆ, ಕಲಾವಿದರ ಹಿತ ಕಾಯುವ ನಿಟ್ಟಿನಲ್ಲಿ ಸರಳ ಕಾರ್ಯಕ್ರಮವನ್ನಾದರೂ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡದಿರುವುದಕ್ಕೆ ಕಲಾವಿದರು ಬೇಸರದ ಜೊತೆಗೆ ಆಕ್ರೋಶ ಸಹ ವ್ಯಕ್ತ ಪಡಿಸುತಿದ್ದಾರೆ.

ಚಾಮರಾಜನಗರದ ಕಲಾವಿದರ ಪರಿಸ್ಥಿತಿ ಒಂದು ರೀತಿಯ ಅಯೋಮಯ. ಸಾವಿರಾರು ಸಂಖ್ಯೆಯಲ್ಲಿ ಕಲಾವಿದರಿದ್ದಾರೆ, ಪ್ರೋತ್ಸಾಹವಿಲ್ಲ. ಕಾರ್ಯಕ್ರಮಗಳು ಇಲ್ಲವೇ ಇಲ್ಲ. ಜಾನಪದ ಶ್ರೀಮಂತಿಕೆಯ ತವರಲ್ಲಿ ಮಲೆ ಮಹದೇಶ್ವರ, ಸೋಬಾನೆ ಪದಗಳು, ಸಿದ್ದಪ್ಪಾಜಿ, ಮಂಟೇದ ಲಿಂಗಯ್ಯ, ಬಿಳಿಗಿರಿ ರಂಗನಾಥ ಆಡು ಪದಗಳು, ಆದಿವಾಸಿಗಳ ವಿಶಿಷ್ಟ ಸಂಸ್ಕೃತಿಯ ಹಾಡುಗಾರಿಕೆ, ಕಂಸಾಳೆ, ಡೊಳ್ಳು ಕುಣಿತ, ಪಟ ಕುಣಿತ, ಸುಗ್ಗಿ ಕುಣಿತ, ವೀರಗಾಸೆ, ತತ್ವಪದ ಹೀಗೆ ನೋಡುತ್ತಾ ಹೋದರೆ ಕಲಾವಿದರ ನಾನಾ ಕಲೆಗಳ ದೊಡ್ಡ ಪಟ್ಟಿಯೇ ಬೆಳೆಯುತ್ತದೆ.

ಇಂತಹ ಕಲಾವಿದರಿಗೆ ಕಾರ್ಯಕ್ರಮ ರೂಪಿಸಿ, ಅದರಲ್ಲೂ ದಸರಾ ಮಾದರಿಯ ಜನ ಪಾಲ್ಗೊಳ್ಳುವಿಕೆಯ ಕಾರ್ಯಕ್ರಮಕ್ಕೆ ಅನುವು ಮಾಡಿದ್ದರೆ, ಇದಕ್ಕೊಂದು ಸಾರ್ಥಕತೆಯ ಅರ್ಥವಿರುತಿತ್ತು. ಬಡ ಕಲಾವಿದರನ್ನು ಈ ಪರಿಯಾಗಿ ಕಡೆಗಣಿಸುವುದು ಸರ್ಕಾರಕ್ಕೆ, ಜನ ಪ್ರತಿನಿದಿಗಳಿಗೆ, ಜಿಲ್ಲಾಡಳಿತಕ್ಕೆ ಶೋಭೆಯಲ್ಲ.

ಹಿರಿಯ ಸಾಹಿತಿ ಕೆ. ವೆಂಕಟರಾಜು ಈದಿನ.ಕಾಮ್ ಜೊತೆ ಮಾತನಾಡಿ, “ದಸರಾ ಬಗ್ಗೆ ನನ್ನ ಅಭಿಪ್ರಾಯ ಬೇರೆಯದ್ದೆ ಇದೇ. ಆದರೇ, ನನಗೆ ನಮ್ಮ ಜಿಲ್ಲೆಯಲ್ಲಿ ಕಲಾವಿದರಿಗೆ ಅವಕಾಶ ಸಿಗುವ ಸರ್ಕಾರಿ ಕಾರ್ಯಕ್ರಮ ಇಲ್ಲದಂತೆ ಮಾಡೋದು ತಪ್ಪು. ಅದರಲ್ಲಿ ದಸರಾ ಕೂಡ. ಆಚರಣೆ ಅಂತೇಳಿ ಹೇಳದೆ ಇದ್ದರು, ಕಲಾವಿದರಿಗೆ ಅಗತ್ಯ. ವೇದಿಕೆ ಕಲ್ಪಿಸಲು ಇದು ಬೇಕಿತ್ತು. ಹಾಗಂತ ಎಲ್ಲವೂ ಸರಿ ಇದಿಯಾ ಎಂದು ನೋಡುವುದಾದರೆ ಖಂಡಿತ ಇಲ್ಲ”.

“ಕಳೆದ ವರ್ಷದ ದಸರಾ ಒಂದು ಹಂತಕ್ಕೆ ಅದ್ದೂರಿಯಾಗಿ, ಅಚ್ಚುಕಟ್ಟಾಗಿ ನಡೆದಿದೆ. ಕಲಾವಿದರಿಗೆ ನೆರವು ಸಹ ಕಳೆದ ವರ್ಷವಷ್ಟೇ ಸರಿಯಾಗಿ ಲಭಿಸದ್ದು. ಅದರ ಹಿಂದಕ್ಕೆಲ್ಲ ಹೋದರೆ ಕಲಾವಿದರಿಗೆ ಹಣ ಕೊಟ್ಟೇ ಇಲ್ಲ. ಸಾಕಷ್ಟು ಅಲೆಸಿದ್ದಾರೆ. ಹಾಗೇ, ಅದರಲ್ಲೂ ಹಣ ಲೂಟಿ ಮಾಡಿದ್ದಾರೆ. ಮೂಗಿಗೆ ತುಪ್ಪ ಒರಿಸಿದಂತೆ ತಾನು ತಿಂದು, ಕಲಾವಿದರ ಮೂತಿಗೆ ಅಲ್ಪ ಹಣ ಒರೆಸಿದ್ದೇ ಹೆಚ್ಚು”.

“ಇನ್ನ ನಾವೇ ನೇರವಾಗಿ ಜಿಲ್ಲಾಡಳಿತದ ಜೊತೆಗಿದ್ದು. ದಸರಾ ಚಿತ್ರೋತ್ಸವದಲ್ಲಿ ಭಾಗಿಯಾಗುವ ಚಿತ್ರಗಳಿಗೆ (ನಿರ್ಮಾಪಕರಿಗೆ ) ಜಿಲ್ಲಾಡಳಿತ ದಸರಾ ವೆಚ್ಚದಲ್ಲಿ ಆರ್ಥಿಕ ನೆರವು ನೀಡುವಂತೆ ಕೋರಿದ್ದೆವು. ಅದರಂತೆ, ಚಿತ್ರಮಂದಿರಗಳು ಉಚಿತ ಜಿಲ್ಲಾಡಳಿತಕ್ಕೆ. ಹೊಸಬರು ಸ್ವಂತ ಬಂಡವಾಳ ಹೂಡಿ ನಿರ್ಮಿಸಿದ ಉತ್ತಮವಾದ ಚಿತ್ರಗಳನ್ನು, ಅಂದರೇ ಕೋಳಿ ಎಸ್ರು, ಡಿಎನ್ಎ, ಭಾರತದ ಪ್ರಜೆಗಳಾದ ನಾವು, ಅನ್ನ ಮೊದಲಾದ ಚಿತ್ರ ಪ್ರದರ್ಶನ ನಡೆಯಿತು. ಆದರೇ, ಮಾತುಕೊಟ್ಟಂತೆ ಅಧಿಕಾರಿಗಳು ನಡೆದುಕೊಳ್ಳಲಿಲ್ಲ. ಇದುವರೆಗೆ ನಯಾಪೈಸೆ ಕೊಡಲಿಲ್ಲ. ಇದು ಇವಾಗಿನ ಆಡಳಿತ ಮಾದರಿ. ಇದೆಲ್ಲಾ ಬದಲಾಗಬೇಕು. ಅರ್ಥಪೂರ್ಣವಾಗಿ, ಕ್ರಮಬದ್ದವಾಗಿ ಕಾರ್ಯಕ್ರಮಗಳು ನಡೆಯುವಂತೆ ಆಗಬೇಕು” ಎಂದು ಆಶಿಸಿದರು.

ಹಿರಿಯ ಸಾಹಿತಿ ಶಂಕನಪುರ ಮಹದೇವ ಮಾತನಾಡಿ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವಂತೆ ಮೈಸೂರು ದಸರಕ್ಕೂ, ಚಾಮರಾಜನಗರ ನಗರಕ್ಕೂ ಏನು ಸಂಭಂದ? ಎನ್ನೋದಕ್ಕೆ ಸಂಭಂದವಿದೆ. ಚಾಮರಾಜನಗರ ಮೈಸೂರು ಪ್ರಾಂತ್ಯದ ಅವಿಭಜಿತ ಜಿಲ್ಲೆ. ಚಾಮರಾಜ ಒಡೆಯರ್ ಅವರು ಇಲ್ಲಿಯೇ ಹುಟ್ಟಿದ್ದು. ಜನನ ಮಂಟಪದಿಂದ ಹಿಡಿದು, ಚಾಮರಾಜೇಶ್ವರ
ದೇವಾಲಯದವರೆಗೂ ಸಂಭಂದ ಏರ್ಪಟ್ಟಿವೆ. ಇಲ್ಲಿಯೂ ಸಹ ದಸರಾ ಭಾಗವಾಗಿ ಕಾರ್ಯಕ್ರಮಗಳು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈಗ ಪ್ರಶ್ನೆ ಮಾಡುತ್ತಿರುವುದು ಸಮಂಜಸವಲ್ಲ. ಕಳೆದ ವರ್ಷ ಅದ್ದೂರಿಯಾಗಿ ಮಾಡಿದ್ದೀರಿ.
ಇದು ಜಾನಪದ ಕಲಾವಿದರ ತವರು. ಸಾಹಿತ್ಯ, ಸಂಸ್ಕೃತಿ ಉಳಿಸಬೇಕಾದ ಸರ್ಕಾರ ಉತ್ತೇಜನ ನೀಡದೆ. ಕಾರ್ಯಕ್ರಮ ನಿಲ್ಲಿಸುವುದು ತರವಲ್ಲ. ಇದನ್ನ ಕಲಾವಿದರ ಮನದಲ್ಲಿಟ್ಟು ಮಾಡಬೇಕಿತ್ತು. ಆಚರಣೆ ಒಂದು ಕಡೆ ಇರಲಿ. ಕಲಾವಿದರಿಗೆ ಅನ್ಯಾಯ ಮಾಡುವುದು, ಕಾರ್ಯಕ್ರಮ ನಡೆಸದೆ ಇರುವುದು ಇಬ್ಬಂದಿಯ ನಿಲುವು. ಈಗಲಾದರೂ ಜಾನಪದ ಕಲಾವಿದರಿಗೆ ಅವಕಾಶ ಕಲ್ಪಿಸಿ. ಸರಳ ಕಾರ್ಯಕ್ರಮ ನಡೆಸಬೇಕು ಎನ್ನುವುದು ಜನಾಭಿಪ್ರಾಯ, ನಮ್ಮೆಲ್ಲರ ಆಗ್ರಹ. ಈ ನಿಟ್ಟಿನಲ್ಲಿ ಸರ್ಕಾರ, ಸ್ಥಳೀಯ ಆಡಳಿತ ಕ್ರಮವಹಿಸಬೇಕು” ಎಂದರು.

ಅಂತಾರಾಷ್ಟ್ರೀಯ ಜಾನಪದ ಕಲಾವಿದರಾದ ಸಿ. ಎನ್. ನರಸಿಂಹಮೂರ್ತಿ ಮಾತನಾಡಿ, “ಚಾಮರಾಜನಗರ
ಕಲಾವಿದರ ತವರು. ಇಲ್ಲಿ ಡಾ. ರಾಜಕುಮಾರ್ ಅವರಿಂದ ಹಿಡಿದು ಸಾವಿರಾರು ಸಂಖ್ಯೆಯಲ್ಲಿ ಕಲಾವಿದರು ಸಿಗುತ್ತಾರೆ. ದುರ್ದೈವ ಎಂದರೇ ಪ್ರೋತ್ಸಾಹದ ಕೊರತೆ. ಕಾರ್ಯಕ್ರಮಗಳು ಇಲ್ಲದೇ ಇರುವುದು. ಬಡ ಕಲಾವಿದ ತನ್ನ ಕಲೆಯನ್ನು ನಂಬಿರುವಾಗ ಆತನ ಬದುಕಿನ ಕಥೆ ಏನು?. ಕುಟುಂಬ ಉಳಿಯಬೇಕು, ತಾನು ಬದುಕಬೇಕು, ಕಲೆಯನ್ನು ಬೆಳೆಸಬೇಕು ಎಂದರೇ ಹೇಗೆ?.”

“ಕಳೆದ ಬಾರಿ ಅದ್ದೂರಿ ದಸರಾ ನಡೆಯಿತು. ಈ ಬಾರಿ ದಸರಾ ಕಾರ್ಯಕ್ರಮ ನಡೆಸುತಿಲ್ಲ. ಬೇರೆ ಜಿಲ್ಲೆಗಳಿಗೆ ಇರುವ ಮಾನ್ಯತೆ ನಮ್ಮ ಜಿಲ್ಲೆಗೆ ಏಕೆ ಇಲ್ಲ. ಮಂಡ್ಯ ಜಿಲ್ಲೆ, ಕೊಡಗಿನಲ್ಲಿ ಕಾರ್ಯಕ್ರಮ ನಡೆಯುತ್ತಿವೆ. ಅಲ್ಲಿಗೆ ದಸರಾ ಸಂಭಂದ ಏನು ಎಂತೇಳಿ ನಾವು ಕೇಳುವುದಿಲ್ಲ. ಎಲ್ಲಾ ಕಡೆಯು ನಡೆಯಲಿ ಕಲಾವಿದರು ಉಳಿಯಲಿ. ಇಲ್ಲಿಯೂ ಸಹ ಕಳೆದ ಬಾರಿಯಂತೆ ಅಲ್ಲದೇ ಇದ್ದರು, ಸರಳವಾಗಿ ಒಂದೆರೆಡು ದಿನ ಕಲಾವಿದರ ಕರೆಯಿಸಿ ಕಾರ್ಯಕ್ರಮ ಮಾಡಬಹುದಿತ್ತು. ಆದರೇ, ಇದನ್ಯಾವುದು ಮಾಡುತ್ತಾ ಇಲ್ಲ. ಇದರ ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇರಬೇಕಿತ್ತು. ಆದರೇ, ಅವರಿಗೆ ಜಿಲ್ಲೆಯ ಕಾಳಜಿಯೇ ಇಲ್ಲ. ಈಗಲೂ ಸಮಯ ಮೀರಿಲ್ಲ. ಈಗಲೂ ಮನಸು ಮಾಡಿದರೆ ಸರಳವಾಗಿಯಾದರೂ ದಸರಾ ಕಾರ್ಯಕ್ರಮ ನಡೆಸಿ ಕಲಾವಿದರಿಗೆ ಅವಕಾಶ ಕಲ್ಪಿಸಿ” ಎಂದು ಮನವಿ ಮಾಡಿದರು.

ಸಂಶೋಧನಾ ವಿದ್ಯಾರ್ಥಿ ಸಂಜಯ್ ಕುಮಾರ್ ಮಾತನಾಡಿ, “ಕಲಾವಿದರನ್ನ ಪ್ರೋತ್ಸಾಹಿಸಬೇಕು. ಕಲಾವಿದರಿಗೆ ಅವಕಾಶ ಸಿಗದೇ ಹೋದರೆ ಅವರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತೆ. ಹೀಗಾಗಿಯೇ, ಜಿಲ್ಲೆ ಜಾನಪದ ತವರು ಆಗಿದ್ದರು ಕ್ರಮೇಣ ಪ್ರೋತ್ಸಾಹ ಸಿಗದೇ ಕಲೆಗಳು ನಶಿಸಿ ಹೋಗುವ ಪರಿಸ್ಥಿತಿಗೆ ತಲುಪುತ್ತಿವೆ. ದಸರಾ ಅಂತೇಳಿ ಅಲ್ಲದೇ ಇದ್ದರು ವರ್ಷಾ ವರ್ಷದಂತೆ ಈ ವರ್ಷ ಸಹ ಕಾರ್ಯಕ್ರಮ ರೂಪಿಸಿದ್ದರೆ ಕಲಾವಿದರಿಗೆ ಸ್ವಲ್ಪವಾದರೂ ನೆರವು ಸಿಗುತಿತ್ತು. ಅದರಿಂದ ಅವರಿಗೆ ಜಿಲ್ಲಾಡಳಿತ ಪ್ರೋತ್ಸಾಹ ನೀಡಿದಂತೆ ಭಾಸವಾಗುತಿತ್ತು. ಆದರೇ, ಇಂತಹ ತೀರ್ಮಾನ ತೆಗೆದುಕೊಳ್ಳದೆ ತಪ್ಪೆಸಗಿದೆ” ಎಂದು ವಿಶಾಧ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ನಯನ ಮಾತನಾಡಿ, “ನಮ್ಮ ಜಿಲ್ಲೆ ಒಂದು ರೀತಿಯಲ್ಲಿ ತಬ್ಬಲಿ ಇದ್ದಂತೆ. ಯಾವುದರಲ್ಲೂ ಸಹ ಮಾನ್ಯತೆ ಇಲ್ಲ. ಇಲ್ಲಿರುವ ಜನಪ್ರತಿನಿಧಿಗಳಿಗೆ ಅಂತಹ ಶಕ್ತಿಯು ಇಲ್ಲ, ಸಾಮರ್ಥ್ಯ ಇಲ್ಲವೇ ಇಲ್ಲ. ಇದು ಕಲಾವಿದರ ತವರೂರು. ಕಲಾವಿದರಿಗೆ ಎಂತೇಳಿ ಏನು ಮಾಡಿದ್ದಾರೆ?. ಡಾ. ರಾಜಕುಮಾರ್ ಅವರೇ ಹುಟ್ಟಿದ ಊರಿನಲ್ಲಿ ಸ್ಮಾರಕ ಮಾಡಲಾರದೇ ಇರೋ ಇವರಿಗೆ ಕಲಾವಿದರ ಕಾಳಜಿ ಎಲ್ಲಿಂದ ಬರಬೇಕು. ದಸರಾ ನಡೆಸೋದು ಸರ್ಕಾರ. ಸ್ವಲ್ಪನಾದರೂ ನಮ್ಮ ಜಿಲ್ಲೆಯ ಕಲಾವಿದರ ಅನುಕೂಲಕ್ಕೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಗಮನ ಸೆಳೆಯಬಹುದಿತ್ತು ಅಂತಹ ಜನಪ್ರತಿನಿದಿಗಳು ಸಧ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಮನೆ ಮನೆಗೂ ಸಂವಿಧಾನ ಪೀಠಿಕೆ ತಲುಪುವಂತಾಗಬೇಕು : ಸಚಿವ ಮಹದೇವಪ್ಪ

ಈಗಲಾದರೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಹಾಗೂ ಜಿಲ್ಲಾಡಳಿತ ಸಿಎಂ ಸಿದ್ದರಾಮಯ್ಯ ಅವರ ಗಮನ
ಸೆಳೆದು ಚೆಲುವ ಚಾಮರಾಜನಗರ ನಗರ ಶೀರ್ಷಿಕೆಯ ಸರಳ ದಸರಾ ನಡೆಸುವುದೇ ಕಾದು ನೋಡಬೇಕಿದೆ.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X