ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸರಪಂಚ್‌ವೊಬ್ಬ ತನಗೆ ಮತ ಹಾಕಿರಲಿಲ್ಲ ಎಂಬ ಕಾರಣಕ್ಕೆ ಕುಟುಂಬವೊಂದರ ಮನೆಯನ್ನು ಧ್ವಂಸಗೊಳಿಸಿ, ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಛತ್ತೀಸ್‌ಗಢದ ಬೆಮೆತಾರಾ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗದಾಮೋಡ್ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸರಪಂಚ್ ತಮಗೆ ನಾವು ಮತ ಹಾಕಿಲ್ಲ ಎಂಬ ಕಾರಣಕ್ಕೆ, ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಅವರ ನಿರ್ದೇಶನದ ಮೇರೆಗೆ ತಮಗೆ ಸಾಮಾಜಿಕ ಬಹಿಷ್ಕರ ವಿಧಿಸಲಾಗಿದ್ದು, ತಮ್ಮ ಮನೆಯನ್ನು ಕೊಡವಿದ್ದಾರೆ ಎಂದು ಸಂತ್ರಸ್ತ ಕುಟುಂಬವು ಆರೋಪಿಸಿದೆ.
ಸಂತ್ರಸ್ತ ಕುಟುಂಬ ಮತ್ತು ಸರಪಂಚ್ ಇಬ್ಬರೂ ಸತ್ನಾಮಿ ಸಮುದಾಯಕ್ಕೆ ಸೇರಿದವರು ಎಂದು ವರದಿಯಾಗಿದೆ. ಸಂತ್ರಸ್ತ ಕುಟುಂಬದ ಸದಸ್ಯೆ ವಿಜಯ ಲಕ್ಷ್ಮಿ ಮನ್ಹಾರೆ ಅವರು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್, ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. ತಮಗೆ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.
“ನಮ್ಮದು 10 ಸದಸ್ಯರ ಕುಟುಂಬ. ಕಳೆದ 25 ವರ್ಷಗಳಿಂದ ವಾಸಿಸುತ್ತಿದ್ದ ನಮ್ಮ ಮನೆಯನ್ನು ಸರಪಂಚ್ ಮಹಾಜನ್ ಮನ್ಹಾರೆ ಅವರ ಸೂಚನೆಯ ಮೇರೆಗೆ ತಹಶೀಲ್ದಾರ್ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿಯಲ್ಲಿ ಧ್ವಂಸಗೊಳಿಸಿದ್ದಾರೆ. ಸರಪಂಚ್ ಆದೇಶವನ್ನು ಪ್ರಶ್ನಿಸಲು ನಮಗೆ ಅವಕಾಶವನ್ನೂ ನೀಡಲಿಲ್ಲ” ಎಂದು ವಿಜಯ ಲಕ್ಷ್ಮಿ ಮನ್ಹಾರೆ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ ಈಗ ‘ಭಯೋತ್ಪಾದಕರು ಅಳುತ್ತಿದ್ದಾರೆ’ ಎಂದು ಹೇಳುತ್ತಿರುವುದೇಕೆ?
“ಈ ಹಿಂದೆಯೂ, ಮನೆ ಖಾಲಿ ಮಾಡುವಂತೆ ಸರಪಂಚ್ ನೋಟಿಸ್ ನೀಡಿದ್ದರು. ಆದರೆ, ಅವರ ನೋಟಿಸ್ ವಿರುದ್ಧ ನವಗಢ ತಹಶೀಲ್ದಾರ್ ಮತ್ತು ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ, ಅವರು ನಮ್ಮ ದೂರು ಸ್ವೀಕರಿಸಲಿಲ್ಲ. ಅಧಿಕಾರಿಗಳು ಸರಪಂಚ್‌ಗೆ ಸಹಕಾರ ನೀಡುತ್ತಿದ್ದಾರೆ. ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಊಟವೂ ದೊರೆಯಂತೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬೆಮೆತಾರ ಜಿಲ್ಲಾಧಿಕಾರಿ ರಣವೀರ್ ಶರ್ಮಾ, “ಗ್ರಾಮಸಭೆಯು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡವನ್ನು ಕೆಡವಲು ಅಧಿಕಾರ ಹೊಂದಿದೆ. ಆದಾಗ್ಯೂ, ಈ ಘಟನೆಯ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸಂತ್ರಸ್ತ ಕುಟುಂಬಕ್ಕೆ ಸಾಮಾಜಿಕವಾಗಿ ಬಹಿಷ್ಕರಿಸಿದ್ದರೆ, ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.