ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಎರಡು ಸಮುದಾಯಗಳ ಯುವಕ-ಯುವತಿಯ ಮೇಲೆ ಹಲ್ಲೆಗೈದು, ಅವರ ತಲೆಬೋಳಿಸಿ ದೌರ್ಜನ್ಯ ಎಸಗಿರುವ ಅನೈತಿಕ ಪೊಲೀಸ್‌ಗಿರಿ ಘಟನೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಕನಕಪುರ ಕ್ಷೇತ್ರದಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಇಂದಿರಾನಗರದಲ್ಲಿ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ನವಾಜ್, ಕಬೀರ್, ಸುಯೋಲ್, ನಯಾಜ್ ಹಾಗೂ ಓರ್ವ ಮಹಿಳೆ ಬಂಧಿತರು.
ಹಿಂದು ಸಮುದಾಯದ ಮಹೇಶ್ ಮತ್ತು ಮುಸ್ಲಿಂ ಸಮುದಾಯದ ಹಸೀನಾ ಬಾನು ಎಂಬವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದು, ಇಬ್ಬರ ತಲೆ ಬೋಳಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ಇಬ್ಬರೂ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ, ಅವರ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಮಹೇಶ್ ಮತ್ತು ಹಸೀನಾ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಲೇಖನ ಓದಿದ್ದೀರಾ?: ಮೋದಿ ಈಗ ‘ಭಯೋತ್ಪಾದಕರು ಅಳುತ್ತಿದ್ದಾರೆ’ ಎಂದು ಹೇಳುತ್ತಿರುವುದೇಕೆ?
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ದಕ್ಷಿಣ ಎಸ್‌ಪಿ ಶ್ರೀನಿವಾಸ್ ಗೌಡ, “ಸಂತ್ರಸ್ತರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ತಿಳಿದ ಯುವತಿಯ ಕುಟುಂಬಸ್ಥರು ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಹೇಳಿದ್ದಾರೆ.