ಸೆಪ್ಟೆಂಬರ್ 30ರೊಳಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ(SIR) ಸಿದ್ದರಾಗಿ ಎಂದು ಚುನಾವಣಾ ಆಯೋಗವು ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ. ಅಕ್ಟೋಬರ್-ನವೆಂಬರ್ ಆರಂಭದಲ್ಲಿಯೇ ಮತದಾರರ ಪಟ್ಟಿ ಪರಿಷ್ಟಕರಣೆ ಕಾರ್ಯ ಆರಂಭವಾಗಬಹುದು. ದೆಹಲಿಯಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ (ಸಿಇಒ) ಸಮ್ಮೇಳನದಲ್ಲಿ ಈ ಸೂಚನೆ ನೀಡಲಾಗಿದೆ, ಆದರೆ ಸೆಪ್ಟೆಂಬರ್ 30ರವರೆಗೆ ಗಡುವು ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.
ಹಾಗೆಯೇ ಕೊನೆಯ ಎಸ್‌ಐಆರ್ ನಂತರ ಪ್ರಕಟವಾದ ತಮ್ಮ ರಾಜ್ಯಗಳ ಮತದಾರರ ಪಟ್ಟಿಗಳನ್ನು ಸಿದ್ಧವಾಗಿಡಲು ಸಿಇಒಗಳಿಗೆ ತಿಳಿಸಲಾಗಿದೆ. ಇನ್ನು ಹಲವು ರಾಜ್ಯದ ಸಿಇಒಗಳು ಈಗಾಗಲೇ ಪಟ್ಟಿಗಳನ್ನು ಸಿದ್ದಪಡಿಸಿದ್ದಾರೆ, ವೆಬ್‌ಸೈಟ್‌ಗಳಲ್ಲಿದೆ. ದೆಹಲಿ ಸಿಇಒ ವೆಬ್‌ಸೈಟ್‌ನಲ್ಲಿ 2008ರ ಮತದಾರರ ಪಟ್ಟಿ ಇದೆ ಎಂದು ವರದಿಯಾಗಿದೆ. ಇನ್ನು ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004ರಲ್ಲಿ ಕೊನೆಯ ಬಾರಿಗೆ ಎಸ್‌ಐಆರ್ ಪ್ರಕ್ರಿಯೆ ನಡೆದಿದೆ.
ಇದನ್ನು ಓದಿದ್ದೀರಾ? ಎಸ್‌ಐಆರ್ ವಿರೋಧಿಸಿ ಸೋನಿಯಾ ನೇತೃತ್ವದಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಸಂಸದರಿಂದ ಪ್ರತಿಭಟನೆ
ಉತ್ತರಾಖಂಡದಲ್ಲಿ ಕೊನೆಯ ಬಾರಿಗೆ 2006ರಲ್ಲಿ ಎಸ್‌ಐಆರ್ ನಡೆದಿದ್ದು, ಆ ವರ್ಷದ ಮತದಾರರ ಪಟ್ಟಿ ಈಗ ರಾಜ್ಯ ಚುನಾವಣಾ ಆಯೋಗ ವೆಬ್‌ಸೈಟ್‌ನಲ್ಲಿದೆ. ಈಗಾಗಲೇ ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆದಿದ್ದು, ಲಕ್ಷಾಂತರ ಮತದಾರರ ಹೆಸರುಗಳನ್ನು ಅಳಿಸಿ ಹಾಕಲಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಹಾರ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ತರಾತುರಿಯಲ್ಲಿ ನಡೆಸಲಾದ ಈ ಪ್ರಕ್ರಿಯೆಯ ಬಗ್ಗೆ ವಿಪಕ್ಷಗಳು ಪ್ರಶ್ನೆ ಎತ್ತಿವೆ. ಹಾಗೆಯೇ ಸಾಮಾನ್ಯವಾಗಿ ಬಡ, ಮಧ್ಯಮ ವರ್ಗದ ಜನರಲ್ಲಿ ಇಲ್ಲದ ದಾಖಲೆಗಳನ್ನೇ ಪುರಾವೆಯಾಗಿ ಪರಿಗಣಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆಯನ್ನು ಇತರೆ ರಾಜ್ಯಗಳ್ಲಲಿಯೂ ನಡೆಸಲು ಮುಂದಾಗಿದೆ.
2026ರಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
