ಎಂಎಸ್‌ಪಿಎಲ್ ಬಲ್ದೋಟ ಕಾರ್ಖಾನೆ ವಿಸ್ತರಣೆಯಾದರೆ ಇಪ್ಪತ್ತೇಳು ಹೊಗೆ ಕೊಳವೆಗಳು ಬರುತ್ತವೆ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಕಳವಳ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಸೆಪ್ಟೆಂಬರ್ 18 ರಿಂದ 24ರವರೆಗೆ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆ ವಿರೋಧಿಸಿ ಹಮ್ಮಿಕೊಂಡ ಪರಿಸರ ಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ನಾವು ಯಾರು ಉಸಿರಾಡುತ್ತೇವೆಯೋ ಅವರೆಲ್ಲ ಎಚ್ಚರಗೊಳ್ಳಬೇಕಾದ ಕಾಲ ಬಂದಿದೆ. ಎಂಎಸ್‌ಪಿಎಲ್ ವಿಸ್ತರಣೆ ಜತೆಗೆ ಸುಮಿ ಎನ್ನುವಂತಹ ಜಪಾನಿನ ಇನ್ನೊಂದು ಕಂಪನಿಯೂ ಕೂಡ ಬರಲಿದೆ. ಇದರ ಹೊಗೆ ಬೂದಿಯಿಂದ ಇನ್ನಷ್ಟು ಪರಿಸರ ಹಾಳಾಗಲಿದೆ. ಗಿಣಿಗೇರಾ, ಅಲ್ಲಾನಗರ, ಬಗನಾಳ, ಕಾಸನಕಂಡಿ ಮುಂತಾದ ಗ್ರಾಮಗಳು ಈಗಾಗಲೇ ಹೊಗೆ ಬೂದಿಯಿಂದ ಹಾಳಾಗಿವೆ. ಅಲ್ಲಿಯ ಜನರಿಗೆ ಟಿಬಿ, ಕ್ಯಾನ್ಸರ್‌ನಂತ ಬೇರೆಬೇರೆ ಮಾರಕ ಖಾಯಿಲೆಗಳು ಬಂದಿವೆ. ಗವಿಶ್ರೀ ನಗರ, ಕಾಳಿದಾಸ ನಗರ, ಜಿಲ್ಲಾ ಕಚೇರಿಗೂ ಹೊಗೆ ಬರುತ್ತಿದೆ” ಎಂದು ಹೇಳಿದರು.
“ಈಗಾಗಲೇ 20ಕ್ಕೂ ಹೆಚ್ಚು ಹಳ್ಳಿಗಳು ಬಾಧಿತವಾಗಿವೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಎಂ ಬಿ ಪಾಟೀಲ್ ಜಪಾನಿನ ಕಂಪನಿ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಕೊಪ್ಪಳ ಪುರಾತನವಾದಂತಹ ನಗರ. ಇದಕ್ಕೆ ದೊಡ್ಡ ಇತಿಹಾಸವಿದೆ. ತಿರುಳ್ಗನ್ನಡ ನಾಡು ಅಂತ ಕರೆದಂತಹ ಇತಿಹಾಸವಿದೆ. ಕೊಪ್ಪಳದಲ್ಲಿ ಅಶೋಕನ ಎರಡು ಶಾಸನ ಇರುವಂತಹ ನಗರ. ಪ್ರಾಚೀನವಾದ ಐತಿಹಾಸಿಕ ನಗರಕ್ಕೆ ಇಂದು ಇಪ್ಪತ್ತೇಳು ಹೊಗೆ ಕೊಳವೆಗಳು ಬಂದರೆ ತೋರಣಗಲ್ಲ ಹರಿಹರದಂತಾಗುತ್ತದೆ. ಉಸಿರಾಡುವಂತಹ ಜನರೇ ನಿಮಗೆ ಒಳ್ಳೆಯ ಗಾಳಿ ಸಿಗುವುದಿಲ್ಲ. ಕೊಪ್ಪಳಕ್ಕೆ ಇಂಥ ಸ್ಥಿತಿ ಬರಬಾರದೆಂದರೆ ಯಾರೆಲ್ಲಾ ಉಸಿರಾಡುತ್ತಿದ್ದೆವೋ ನಾವೆಲ್ಲರೂ ಈ ಹೋರಾಟದಲ್ಲಿ ತೊಡಗಬೇಕು” ಎಂದು ಕರೆ ನೀಡಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಬಸವರಾಜ್ ಶೀಲವಂತರ್ ಮಾತನಾಡಿ, “ಯಾವುದೇ ಕಾರಣಕ್ಕೂ ಎಮ್ಎಸ್‌ಪಿಎಲ್ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳು ಬರಬಾರದೆಂದು ನಿರಂತರ ಹೋರಾಟ ಮಾಡುತ್ತಿದ್ದೇವೆ. ಕಾರ್ಖಾನೆಗಳು ಹೊರಸೂಸುವ ಮಾಲಿನ್ಯದಿಂದ ಹೊಗೆ ಮತ್ತು ಧೂಳಿನಿಂದ ಸುಮಾರು ಇಪ್ಪತ್ತೈದರಿಂದ ಮೂವತ್ತು ಹಳ್ಳಿಗಳ ರೈತರು ಬದುಕಲು ಸಾಧ್ಯವಾಗುತ್ತಿಲ್ಲ, ಆ ಭಾಗದ ಗ್ರಾಮಗಳ ರೈತರ ಪ್ರತಿ ಕುಟುಂಬದಲ್ಲಿ ಒಂದಿಲ್ಲ ಒಂದು ರೋಗರುಜಿನಗಳು ಆವರಿಸಿವೆ. ಸಾವುಗಳು ಸಂಭವಿಸುತ್ತಿವೆ” ಎಂದು ಹೇಳಿದರು.
“ಎಂಎಸ್‌ಪಿಎಲ್ ಬಲ್ಡೋಟ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳು ಸ್ಥಾಪನೆಯಾದರೆ ಕೊಪ್ಪಳ ಭಾಗ್ಯನಗರದ ಲಕ್ಷಾಂತರ ಜನರು ಹಾಗೂ ಸಾವಿರಾರು ಕುಟುಂಬಗಳಿಗೆ ಕಂಟಕವಾಗುತ್ತದೆ. ಈಗಾಗಲೇ ಶಾಸಕರು, ಸಂಸದರು ಹಾಗೂ ಸಚಿವರಿಗೆ ಮನವಿ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗಳು ಬೇಡವೆಂದು ಹೇಳಿದ್ದೇವೆ” ಎಂದರು.
ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಮಾತನಾಡಿ, “ಬೆಳಿಗ್ಗೆ ನೋಡಿದರೆ ಈಗಿರುವ ಬೃಹತ್ ಕಾರ್ಖಾನೆಗಳಿಂದ ನಮ್ಮ ಗವಿಶ್ರೀ ನಗರದ ಮನೆಗಳೆಲ್ಲ ಹೊಗೆ, ಧೂಳು ಆಕ್ರಮಿಸಿಕೊಂಡಿರುತ್ತದೆ. ಮತ್ತೆ ಬೃಹತ್ ಕಾರ್ಖಾನೆ ಬರುತ್ತಿದೆ. ಆಗ ನಮ್ಮ ಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟ. ಕೊಪ್ಪಳ ತಿರುಳುಗನ್ನಡ ನಾಡು ಹೋಗಿ ಹೊಗೆ ಉಗುಳುವ ನಗರವಾಗಲಿದೆ. ನಾವೆಲ್ಲರೂ ಹೋರಾಟಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.
ಅಹಿಂದ ಮುಖಂಡ ಕರೀಮ್ ಪಾಷಾ ಎಂ ಗಚ್ಚಿನಮನಿ ಮಾತನಾಡಿ, “ಎಂಸ್‌ಪಿಎಲ್ ಬಲ್ಡೋಟ ಕಾರ್ಖಾನೆ ವಿಸ್ತರಣೆ ವಿರುದ್ದ ಕೆಲವಷ್ಟೇ ಜನರಿದ್ದಾರೆಂದು ತಿಳಿದಿರಬಹುದು, ಹೋರಾಟಕ್ಕೆ ಇನ್ನೂ ನೂರಾರು, ಸಾವಿರಾರು, ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತಾರೆ. ನಾವು ಒಟ್ಟಾದರೆ ಮಾತ್ರ ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳು ಗಮನ ಹರಿಸುತ್ತಾರೆ” ಎಂದು ಹೇಳಿದರು.
ಕೆ ಬಿ ಗೋನಾಳ ಮಾತನಾಡಿ, “ಇಲ್ಲಿಯ ಜನರು ರೋಗಗ್ರಸ್ಥರಾಗುತ್ತಿದ್ದಾರೆ. ಇಲ್ಲಿ ಇರುವ ಮಕ್ಕಳು ಹಾಗೂ ಗರ್ಭಿಣಿಯರಿಗೆ ಕುಪ್ಪಸದ ರೋಗದ ಮಾರಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಆ ಕಾರಣಕ್ಕಾಗಿ ನಾವು ಕೊಪ್ಪಳ ನಗರದ, ಭಾಗ್ಯನಗರದ ಸುತ್ತಮುತ್ತಲಿನ ಒಂದೂವರೆ ಲಕ್ಷ ಜನರ ಭವಿಷ್ಯ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ಫೆಬ್ರವರಿಯಲ್ಲಿ ಸರ್ಕಾರ ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಿದ ಸಂದರ್ಭದಲ್ಲಿ ಜಾಗೃತರಾದಂತಹ ನಾವೆಲ್ಲರೂ ಎಂಎಸ್‌ಪಿಎಲ್ ಬಲ್ದೋಟದ ಒಂದು ಕೊಳವೆಯಿಂದ ಇಷ್ಟೊಂದು ಹಾಳು ಮಾಡಿರಬೇಕಾದರೆ 54 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿದ ಕಂಪೆನಿ ಮತ್ತೊಂದು ಕಂಪೆನಿ ಬಂದರೆ, ಖಂಡಿತವಾಗಿ ಧೂಳಲ್ಲ, ಸ್ಮಶಾನವಲ್ಲ ಸಂಪೂರ್ಣ ಸರ್ವನಾಶದ ಅಂಚಿಗೆ ತಲುಪುತ್ತದೆ. ಕೊಪ್ಪಳ ಭಾಗ್ಯನಗರದ ಸುತ್ತಮುತ್ತಲಿನ ಜನರು ಹೋರಾಟಕ್ಕೆ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ನಿಮಿಷಾಂಬ ದೇವಸ್ಥಾನಕ್ಕೆ ರೋಟರಿ ಕ್ಲಬ್‌ನಿಂದ ಶಿಶು ಸ್ತನ್ಯಪಾನ ಕೇಂದ್ರ ಕೊಡುಗೆ
ಎಸ್ ಎ ಗಫಾರ್ ಮಾತನಾಡಿ, “ಜಿಲ್ಲೆಯ ಅವಳಿ ನಗರದ ಜನರು ಜಾಗೃತರಾಗಬೇಕು. ಕಾರ್ಖಾನೆಗಳ ವಿಸ್ತರಣೆ ಮತ್ತು ಹೊಸ ಕಾರ್ಖಾನೆಗಳ ಸ್ಥಾಪನೆ ಮಾಡುತ್ತಿದ್ದಾರೆ. ಅವೆಲ್ಲವೂ ಸ್ಥಗಿತಗೊಳ್ಳಬೇಕು. ಇಲ್ಲದಿದ್ದರೆ ಕೊಪ್ಪಳ ಭಾಗ್ಯನಗರದ ಜನರ ಮತ್ತು ಜಾನುವಾರುಗಳ ಆರೋಗ್ಯ ಹಾಳಾಗಿ ಜೀವಕ್ಕೆ ಅಪಾಯ ತಪ್ಪಿದ್ದಲ್ಲ. ನಾವೆಲ್ಲರೂ ಒಂದಾಗಿ ಕಾರ್ಖಾನೆಗಳ ವಿಸ್ತರಣೆ ವಿರುದ್ಧ ನಡೆಯುವ ಆಂದೋಲನಕ್ಕೆ ಎಲ್ಲರೂ ಬೆಂಬಲ ಕೊಟ್ಟು ಮುಂದೆ ಬರುವ ಪೀಳಿಗೆಯ ಭವಿಷ್ಯಕ್ಕಾಗಿ ಹೋರಾಟಕ್ಕೆ ಮುನ್ನುಗೋಣ” ಎಂದು ಹೇಳಿದರು.
ಗವಿಶ್ರೀ ನಗರ, ಬಸವೇಶ್ವರ ವೃತ್ತ, ಅಶೋಕ ವೃತ್ತದಲ್ಲಿ ಹಿರಿಯ ಮುಖಂಡ ಡಿ ಹೆಚ್ ಪೂಜಾರ, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ, ಗುಡದಪ್ಪ ಭಂಗಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹಂಚಳಪ್ಪ ಇಟಗಿ ಹಾಗೂ ಇತರರು ಇದ್ದರು.