ಕೇಂದ್ರ ಸರ್ಕಾರವು ಯಾವ ರಾಜ್ಯದ ಮೇಲೂ ಭಾಷಾ ಹೇರಿಕೆಯನ್ನು ಮಾಡುತ್ತಿಲ್ಲ. ಕೇಂದ್ರವು ರಾಜ್ಯಗಳ ಮೇಲೆ ತ್ರಿಭಾಷಾ ನೀತಿಯನ್ನು ಹೇರುತ್ತಿದೆ ಎಂದು ಹೇಳುವವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭಾನುವಾರ ಹೇಳಿದ್ದಾರೆ.
‘ಥಿಂಕ್ ಇಂಡಿಯಾ ದಕ್ಷಿಣಪಥ ಶೃಂಗಸಭೆ 2025’ ರಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಪ್ರಧಾನ್ ಐಐಟಿ ಮದ್ರಾಸ್‌ನ ನಿರ್ದೇಶಕ ಪ್ರೊಫೆಸರ್ ವಿ ಕಾಮಕೋಟಿ ಅವರ ಸಮ್ಮುಖದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಶಾಲೆಗಳಲ್ಲಿ ಹಿಂದಿ ಹೇರಿಕೆಗೆ ವಿರೋಧ: ಮತ್ತೆ ಒಂದಾದ ರಾಜ್, ಉದ್ಧವ್ ಠಾಕ್ರೆ
“ನಾವು ಯಾರ ಮೇಲೂ ಯಾವುದೇ ಭಾಷೆಯನ್ನು ಹೇರುತ್ತಿಲ್ಲ. 1 ಮತ್ತು 2ನೇ ತರಗತಿಗಳಿಗೆ ಎರಡು ಭಾಷಾ ಸೂತ್ರ ಇರುತ್ತದೆ. ಒಂದು ಮಾತೃಭಾಷೆ ಇರುತ್ತದೆ. ಇಲ್ಲಿ ಅದು ತಮಿಳು ಭಾಷೆಯಾಗಿರುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನೀವು ತಮಿಳಿನಲ್ಲಿ ಕಲಿಸಬೇಕು ಎಂಬುದು ಭಾರತ ಸರ್ಕಾರದ ಷರತ್ತು. ನಿಮ್ಮ ಆಯ್ಕೆಯ ಇನ್ನೊಂದು ಭಾಷೆಯನ್ನು ನೀವು ಕಲಿಸಬಹುದು” ಎಂದು ಹೇಳಿದರು.
“ಆರರಿಂದ ಹತ್ತನೇ ತರಗತಿಯವರೆಗೆ ತ್ರಿಭಾಷಾ ಸೂತ್ರವಿದೆ. ಒಂದು ಭಾಷೆ ಮಾತೃಭಾಷೆಯಾಗಿರುತ್ತದೆ. ಉಳಿದ ಎರಡು ನಿಮ್ಮ ಆಯ್ಕೆಯಾಗಿರುತ್ತದೆ. ಯಾವುದೇ ರಾಜ್ಯದ ಮೇಲೆ ಭಾರತ ಸರ್ಕಾರವು ಯಾವುದೇ ಭಾಷೆಯನ್ನು ಹೇರುವುದಿಲ್ಲ” ಎಂದು ತಿಳಿಸಿದರು.
ಇನ್ನು ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ತ್ರಿಭಾಷಾ ನೀತಿಯನ್ನು ಹೇಗೆ ಜಾರಿಗೆ ತರಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನ್, “ನಾವು ಆ ರಾಜ್ಯದಲ್ಲೂ ಜಾರಿಗೆ ತರುತ್ತಿದ್ದೇವೆ. ಬಿಜೆಪಿ ಆಡಳಿತದ ರಾಜ್ಯಗಳನ್ನು ಮರೆತು ಅನೇಕ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಶಿಕ್ಷಣ ನೀತಿಗೆ ಮುಂಚಿತವಾಗಿ ತ್ರಿಭಾಷಾ ನೀತಿಯನ್ನು ಜಾರಿಗೆ ತರುತ್ತಿವೆ” ಎಂದು ಹೇಳಿದರು.
“ಉತ್ತರ ಪ್ರದೇಶದಲ್ಲಿ, ಒಬ್ಬ ವಿದ್ಯಾರ್ಥಿ ಹಿಂದಿಯನ್ನು ಮಾತೃಭಾಷೆಯಾಗಿ ಕಲಿಯುತ್ತಾನೆ. ನಂತರ ಮರಾಠಿ ಮತ್ತು ತಮಿಳು ಕಲಿಯುವ ಆಯ್ಕೆ ಮಾಡಬಹುದು. ಯುಪಿಯಲ್ಲಿ ಕೆಲವು ವಿದ್ಯಾರ್ಥಿಗಳು ತಮಿಳನ್ನು ಮೂರನೇ ಭಾಷೆಯಾಗಿ ತೆಗೆದುಕೊಳ್ಳಬಹುದು. ಯುಪಿ ಸರ್ಕಾರ ತಮಿಳು ಕಲಿಸಲು ಸೌಲಭ್ಯವನ್ನು ಒದಗಿಸಬೇಕು” ಎಂದರು.
ಕೇಂದ್ರ ಸರ್ಕಾರವು ತ್ರಿಭಾಷಾ ನೀತಿಯಡಿಯಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿದೆ ಎಂದು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಆರೋಪಿಸಿದೆ.
