ಸಮೀಪದಲ್ಲಿ ಕೊಳೆಗೇರಿ ಇರುವುದು ದೇವಾಲಯದ ಪಾವಿತ್ರ್ಯ ಮತ್ತು ಪ್ರಶಾಂತತೆಗೆ ಭಂಗ ತರುತ್ತದೆಂಬ ವಾದವನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದೆಯೆಂದು ‘ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ.
ಪಕ್ಕದಲ್ಲೇ ಕೊಳೆಗೇರಿಗೆ ಅವಕಾಶ ನೀಡಿರುವುದು ದೇವಾಲಯದ ಪಾವಿತ್ರ್ಯ ಮತ್ತು ಪ್ರಶಾಂತತೆಗೆ ಭಂಗ ಉಂಟು ಮಾಡಿದೆ ಎಂಬುದಾಗಿ ಮಂಡ್ಯದ ಶ್ರೀ ಕಾಳಿಕಾಂಬ ಸೇವಾ ಸಮಿತಿಯು ಹೈಕೋರ್ಟ್ ಮೆಟ್ಟಿಲೇರಿತ್ತು. “ಸಮಾನತೆಗೆ ಬಡತನ ಸಿರಿತನದ ಭೇದ ಭಾವಗಳಿಲ್ಲ. ಇಂತಹ ವಾದ ಅಸಮರ್ಥನೀಯ. ವಿಧಾತನ ಬಡ ಮಕ್ಕಳು ಸಂದರ್ಭವಶಾತ್ ನೆರೆಹೊರೆಯಲ್ಲಿ ಬದುಕಿ ಬಾಳಿದಾಕ್ಷಣ ಭಂಗಗೊಳ್ಳುವಷ್ಟು ನಾಜೂಕು ಅಲ್ಲ ದೇವಾಲಯವೊಂದರ ಪಾವಿತ್ರ್ಯ. ಭಂಗ ಬರುತ್ತದೆಂದು ಆಕ್ಷೇಪಿಸುವುದು ನಮ್ಮ ಸಂವಿಧಾನ ಸಾರಿರುವ ಸಾರ್ವತ್ರಿಕ ಮೌಲ್ಯಗಳ ತಿರಸ್ಕಾರವೇ ಸರಿ” ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ತೀರ್ಪು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ಹೈಕೋರ್ಟ್ ಆದೇಶದಂತೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬಾಸ್ಟ್: ಕೃಷಿ ಸಚಿವ
ಕೊಳೆಗೇರಿ ನಿವಾಸಿಗಳಿಗೆ ಮನೆಗಳನ್ನು ಕಟ್ಟಿಸಿಕೊಡಲು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗಾಗಿ ದೇವಸ್ಥಾನದ ಸನಿಹದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಸೂಚನೆಯನ್ನು ಮಂಡ್ಯ ಜಿಲ್ಲಾಧಿಕಾರಿ 2018ರಲ್ಲಿ ಹೊರಡಿಸಿದ್ದರು. ಕಾಳಿಕಾಂಬ ಸೇವಾ ಸಮಿತಿಯು ಈ ಅಧಿಸೂಚನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ‘ಸದರಿ ಜಮೀನಿನಲ್ಲಿ ಕೊಳೆಗೇರಿ ನಿವಾಸಿಗಳಿಗೆ ಮನೆಗಳನ್ನು ಕಟ್ಟಿಸಿದರೆ ದೇವಸ್ಥಾನದ ಪಾವಿತ್ರ್ಯ ಮತ್ತು ಪ್ರಶಾಂತತೆ ಹಾಳಾಗುತ್ತದೆ ಎಂದಿತ್ತು. ಕಾಳಿಕಾಂಬ ದೇವಾಲಯದ ಬಹುಸಂಖ್ಯೆಯ ಭಕ್ತಾದಿಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತದೆ. ಸಂವಿಧಾನದ 29ನೆಯ ಕಲಮಿನ ಉಲ್ಲಂಘನೆಯಿದು’ ಎಂದು ಆಕ್ಷೇಪ ಎತ್ತಿತ್ತು.
‘ಸಮಿತಿ ಎತ್ತಿರುವ ತಕರಾರುಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಆಳವಾಗಿ ಘಾಸಿಗೊಳಿಸಿವೆ. ಕೊಳೆಗೇರಿ ನಿವಾಸಿಗಳು ಕೀಳು ಜನ ಎಂಬ ಭಾವನೆಯನ್ನು ಸಮಿತಿ ಮುಂದೆ ಮಾಡಿದೆ. ಪೂಜಾಸ್ಥಳದ ನೆರೆಹೊರೆಯಲ್ಲಿ ಮನೆ ಕಟ್ಟಿಕೊಂಡು ವಾಸಿಸುವ ಬಡಜನರ ಹಕ್ಕುಗಳನ್ನು ಬೀಳುಗಳೆದಿದೆ. ಸಮಾಜ ಪ್ರಗತಿ ಸಾಧಿಸಿರುವ ಈ ದಿನಗಳಲ್ಲಿ ಇಂತಹ ಭಾವನೆ ಆಘಾತಕಾರಿ. ಕೊಳೆಗೇರಿ ನಿವಾಸಿಗಳು ಪ್ರವೇಶದಿಂದಾಗಿ ದೇವಾಲಯದ ದಿವ್ಯ ಪ್ರಭಾವಳಿಯು ಮಲಿನಗೊಳ್ಳುತ್ತದೆ ಎಂಬ ತಿಳಿವಳಿಕೆಯು ಪೂರ್ವಗ್ರಹಪೀಡಿತವೂ ಮತ್ತು ಒಂದು ವರ್ಗದ ಜನರನ್ನು ಸಮಾಜದಿಂದ ಹೊರಗಿಡುವ ಮನೋಭಾವದಿಂದ ಕೂಡಿದ್ದೂ ಆಗಿದೆ. ಇಂತಹ ನಿಲುವು ಸಮಾಜವನ್ನು ಜಾತಿ, ವರ್ಗಗಳ ಆಧಾರದ ಮೇಲೆ ಒಡೆಯುವುದೇ ಆಗಿದೆ’ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಟೀಕೆ-ಟಿಪ್ಪಣಿ ಮಾಡಿದ್ದಾರೆ.
