ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಗೆ ವಪತ್ತೇಶ್ವರ ಕೆರೆಯ ತಡೆಗೋಡೆ ಒಡೆದು ಗ್ರಾಮಕ್ಕೆ ನೀರು ನುಗ್ಗಿದ ಹಿನ್ನೆಲೆ ಜನರ ಜನಜೀವನ ಅಸ್ತವ್ಯಸ್ತಗೊಂಡು, ಅನೇಕ ಮನೆಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.
ಕೆರೆಯ ತಡೆಗೋಡೆ ಒಡೆದು ಮನೆಗಳಿಗೆ ನೀರು ನುಗ್ಗಿದರಿಂದ ಮನೆಯಲ್ಲಿ ಸಂಗ್ರಹಿಸಿದ್ದ ದವಸ ಧಾನ್ಯ, ಬಟ್ಟೆ, ಪೀಠೋಪಕರಣಗಳು ಸೇರಿದಂತೆ ಇತರ ಅಗತ್ಯ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನೀರಿನ ರಭಸಕ್ಕೆ ಗ್ರಾಮದ ಕೆಲವು ಮನೆಗಳಿಗೆ ಹಾನಿ ಉಂಟಾಗಿದರಿಂದ ಗ್ರಾಮಸ್ಥರು ಆತಂಕಗೊಂಡರು.
ಗ್ರಾಮಕ್ಕೆ ನೀರು ನುಗ್ಗಿದ ಹಿನ್ನೆಲೆ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಗೆ ಒಳಗಾದವರಿಗೆ ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಇಒ ಮಾನಪ್ಪ ಕಟ್ಟಿಮನಿ, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.