ಗ್ರಾಮವೇ ದೇಶದ ಬೆನ್ನೆಲುಬು, ರೈತನೇ ಆರ್ಥಿಕತೆಯ ಆಧಾರ. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳನ್ನು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಗೆ ಸೇರಿಸುವ ಕ್ರಮದಿಂದ ಗ್ರಾಮೀಣ ಜೀವನ ಹಾಳಾಗುತ್ತಿದೆ ಎಂಬ ಆತಂಕ ರೈತರಲ್ಲಿ ಆವರಿಸಿದೆ. ಪಟ್ಟಣ ಪಂಚಾಯಿತಿಗೆ ಸೇರಿದಾಗ, ಹಳ್ಳಿಗಳ ವೈಶಿಷ್ಟ್ಯವೇ ಬದಲಾಗುತ್ತದೆ. ಹಳ್ಳಿಯ ಕೃಷಿ ಭೂಮಿಗೆ ಹೆಚ್ಚುವರಿ ತೆರಿಗೆ, ಕಟ್ಟಡ ನಿಯಮ, ಅಭಿವೃದ್ಧಿ ಶುಲ್ಕ ಸೇರಿದಂತೆ ಹಲವು ಬಾಧ್ಯತೆಗಳು ಬರುತ್ತವೆ. ರೈತರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಬಹುದು. “ನಾವು ಕೃಷಿ ಮಾಡಿ ಬದುಕುತ್ತಿದ್ದೇವೆ, ಪಟ್ಟಣದ ನಿಯಮ-ಶುಲ್ಕ ನಮಗೆ ಹೊರೆ. ಹಳ್ಳಿಯನ್ನು ಹಳ್ಳಿ ಆಗಿಯೇ ಉಳಿಸಿ” ಎಂಬುದು ರೈತರ ಬೇಡಿಕೆ.

ಹಳ್ಳಿಗಳನ್ನು ಪಟ್ಟಣ ಪಂಚಾಯಿತಿಗೆ ಸೇರಿಸುವುದರಿಂದ ಗ್ರಾಮೀಣ ಸಂಸ್ಕೃತಿ, ರೈತರ ಬದುಕು ಹಾಗೂ ಕೃಷಿ ಆಧಾರಿತ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ರೈತರು ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಲು ಪ್ರತಿಭಟನೆ, ರಸ್ತೆ ತಡೆ, ಮನವಿ ಪತ್ರಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯ ರೈತರು ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಅಕ್ರೋಶ ಹೊರಕಾಕಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೆ ಬೈಂದೂರಿನಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ರೈತರು ಒಮ್ಮತದ ತೀರ್ಮಾನವನ್ನು ಸಹ ಮಾಡಿದ್ದಾರೆ.

ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಈದಿನ.ಕಾಮ್ ಜೊತೆ ಮಾತನಾಡಿ, ಬೈಂದೂರು ವ್ಯಾಪ್ತಿಯಲ್ಲಿ ಹಲವಾರು ಕುಗ್ರಾಮಗಳಿದ್ದು, ಅಲ್ಲಿನ ಜನರಿಗೆ ಕೃಷಿಯೇ ಜೀವನಾಧಾರವಾಗಿದೆ. ಅಭಿವೃದ್ದಿ ಹೆಸರಿನಿಂದ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ. ಮೂಲಸೌಕರ್ಯಗಳು ಸಿಗುತ್ತಿಲ್ಲ. ಐದು ವರ್ಷಗಳ ಹಿಂದೆ ಸ್ಥಳೀಯರು ಹಾಗೂ ವಿವಿಧ ಪಕ್ಷಗಳೊಂದಿಗೆ ಚರ್ಚಿಸದೆ ಅಧಿಕಾರಿಗಳು ಪಟ್ಟಣ ಪಂಚಾಯಿತಿ ರಚಿಸಿದ್ದು, ಇದುವರೆಗೆ ಚುನಾವಣೆ ನಡೆದು ಅದು ಅಸ್ತಿತ್ವಕ್ಕೆ ಬಂದಿಲ್ಲ ಎಂದರು. ಬೈಂದೂರು ಪಟ್ಟಣ ಪಂಚಾಯಿತಿ 54 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು, ಅದರಲ್ಲಿ ಶೇ 47ರಷ್ಟು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿದೆ. ಇದರಿಂದ ಅಲ್ಲಿನ ಜನರು ಸರ್ಕಾರದ ವಿವಿಧ ಯೋಜನೆಗಳಿಗಿಂತ ವಂಚಿತರಾಗಿದ್ದಾರೆ. ಅಕ್ರಮ–ಸಕ್ರಮ, ಕೃಷಿ ಸೌಲಭ್ಯಗಳೂ ದೊರೆಯದೆ ತೊಂದರೆಯಾಗುತ್ತಿದೆ ಎಂದು ದೂರಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿ 11 ವಾರ್ಡ್‌ಗಳಿರುವ ಹೊಸ ಬೈಂದೂರು ಪಟ್ಟಣ ಪಂಚಾಯಿತಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ರೈತ ಹೋರಾಟಗಾರ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸುಭಾಷ್ ಚಂದ್ರ ಮಾತನಾಡಿ, ಪಟ್ಟಣ ಪಂಚಾಯಿತಿ ನಿಯಮಗಳಿಂದಾಗಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ. ಅಡಿಕೆ ಕೊಳೆರೋಗ ಬಂದಿದ್ದೆ ಅದಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಲ್ಲದಕ್ಕೂ ಪಟ್ಟಣ ಪಂಚಾಯತಿ ನಮಗೆ ಅಡ್ಡಿಯಾಗಿದೆ. ನಮ್ಮ ಯಾವುದೇ ರೈತರಿಗೆ ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ. ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಬೇರ್ಪಡಿಸಿ ಗ್ರಾಮ ಪಂಚಾಯಿತಿಯಾಗಿ ಮಾರ್ಪಡಿಸಬೇಕು ಎಂಬುದು ನಮ್ಮ ಆಗ್ರಹ ಎಂದು ಹೇಳಿದರು.
ಕೆಲವರು ನಮ್ಮ ಹೋರಾಟವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಕೆಲವರಿಗೆ ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಇದು ಯಾವುದಕ್ಕೂ ನಾವು ಬಗ್ಗುವುದಿಲ್ಲ. ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ಬೈಂದೂರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ. ಬೈಂದೂರಿನ ಹಳ್ಳಿಗಳ ಪಾಲಿಗೆ ಪಟ್ಟಣ ಪಂಚಾಯತ್ ನಿರ್ಧಾರ ಸಮಸ್ಯೆಯ ಸುಳಿಯಲ್ಲಿ ಸಿಲುಕಿಸಿದೆ. ಅರಣ್ಯ ಪ್ರದೇಶಗಳನ್ನು ಸೇರಿಸಿ ಅವೈಜ್ಞಾನಿಕ ವಿಂಗಡನೆ ಮಾಡಿದ್ದು ಜನಪ್ರತಿನಿಧಿಗಳು ಸ್ವಲ್ಪ ಪ್ರಾಮಾಣಿಕವಾಗಿ ಗಮನಹರಿಸಿದರೆ ಪರಿಹಾರ ಸಾಧ್ಯ ಎಂದು ಉದ್ಯಮಿ ನಿತಿನ್ ನಾರಾಯಣ ತಳಿರು ಕಟ್ಟುವ ಮೂಲಕ ಧರಣಿಗೆ ಚಾಲನೆ ನೀಡಿದ್ದಾರೆ.

ಗ್ರಾಮಗಳ ಸ್ವರೂಪ ಕಾಪಾಡುವುದು ಮಾತ್ರವಲ್ಲ, ರೈತರ ಬದುಕು ಉಳಿಸುವ ಕಾರ್ಯವೂ ಸರ್ಕಾರದ ಕರ್ತವ್ಯ. ಪಟ್ಟಣ ಪಂಚಾಯಿತಿಯಿಂದ ಹಳ್ಳಿಗಳನ್ನು ಕೈಬಿಡಿ ಎಂಬ ರೈತರ ಕೂಗು ಈಗ ಜನಆಂದೋಲನವಾಗಿ ರೂಪಾಂತರಗೊಳ್ಳುತ್ತಿದೆ. ಇನ್ನಾದರೂ ರೈತರ ಕೂಗನ್ನು ಸರ್ಕಾರ ಆಲಿಸಿ ಇದಕ್ಕೊಂದು ಶಾಶ್ವತ ಅಂತ್ಯ ಮಾಡಬೇಕಾಗಿದೆ.
