ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರು ಸೋಮವಾರ (ಸೆ.22) ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಮೈಸೂರು ದಸರಾ ಉದ್ಘಾಟನೆಗೆ ಮುಸ್ಲಿಂ ಮಹಿಳೆಯನ್ನು ಸರ್ಕಾರ ಆಯ್ಕೆ ಮಾಡಿರುವುದು ಇದೇ ಮೊದಲು. ಬಾನು ಮುಷ್ತಾಕ್ ಅವರ ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಆಕ್ಷೇಪ ವ್ಯಕ್ತಪಡಿಸಿ, ಬಿಜೆಪಿ ನಾಯಕರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಎರಡೂ ಕೋರ್ಟ್‌ಗಳು ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿದವರಿಗೆ ಕಪಾಳಮೋಕ್ಷ ಮಾಡಿವೆ.
ದಸರಾ ಉದ್ಘಾಟಿಸಲಿರುವ ಬಾನು ಮುಷ್ತಾಕ್ ಅವರು ಖಾಸಗಿ ಹೋಟೆಲಿನಲ್ಲಿ ವಾಸ್ತವ್ಯ ಹೊಂದಿದ್ದು, ಸರ್ಕಾರ ಬಿಗಿ ಭದ್ರತೆ ನೀಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರಿಂದ ಭಾರಿ ಭದ್ರತೆ ನೀಡಲಾಗಿದೆ.
ಸ್ಥಳದಲ್ಲಿ 3 ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಿದ್ದು, ಬೆಳಗ್ಗೆ 9:30ಕ್ಕೆ ಹೋಟೆಲಿನಿಂದ ಬಾನು ಮುಷ್ತಾಕ್ ಪೊಲೀಸ್ ಎಸ್ಕಾರ್ಟ್ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ. ಮೂರು ಕಡೆ ಚೆಕ್ಕಿಂಗ್ ಪಾಯಿಂಟ್ ಇದ್ದು ಆಗಮಿಸುವ ಪ್ರತಿಯೊಬ್ಬರನ್ನು ಪರಿಶೀಲಿಸಿದ ಬಳಿಕವಷ್ಟೇ ಬೆಟ್ಟಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ.
ಉದ್ಘಾಟಕರ ಸ್ವಾಗತಕ್ಕೆ ಚಾಮುಂಡಿ ಬೆಟ್ಟ ಸಿದ್ಧವಾಗಿದ್ದು ಮಹಿಷಾಸುರ ಮೂರ್ತಿಯಿಂದ ದೇವಾಲಯದವರೆಗೆ ಸಾಂಪ್ರಾದಾಯಿಕ ಸ್ವಾಗತ ನೀಡಲಾಗುತ್ತದೆ. ರಸ್ತೆ ಉದ್ದಕ್ಕೂ ರಂಗೋಲಿ ಬಿಡಿಸಿ, ಬಾಳೆ ಕಂಬ ಕಟ್ಟಿ ಸ್ವಾಗತಿಸಲು ತಯಾರಿ ನಡೆದಿದೆ.
ಸೆ.22ರಿಂದ ಅ.2ರವರೆಗೆ ನಡೆಯುವ ಉತ್ಸವ ಇಂದು ಬೆಳಿಗ್ಗೆ ಬೆಟ್ಟದಲ್ಲಿ ಬೆಳಿಗ್ಗೆ 10.10ರಿಂದ 10.40ರೊಳಗೆ ನಾಡದೇವತೆ ಚಾಮುಂಡೇಶ್ವರಿ ದೇವಿಯ ‘ಅಗ್ರಪೂಜೆ’ಯೊಂದಿಗೆ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು.