ರಾಜ್ಯದಲ್ಲಿ ಸೆ.22 ರಿಂದ ಅ.7ನೇ ವರೆಗೆ ನಡೆಯುವ ಜಾತಿಗಣತಿ ಸಮೀಕ್ಷೆಯಲ್ಲಿ ದಲಿತ ಸಮುದಾಯದವರು ಧರ್ಮದ ಕಾಲಂನಲ್ಲಿ ಬೌದ್ಧ ಹಾಗೂ ಜಾತಿ ಕಾಲಂನಲ್ಲಿ ಹೊಲೆಯ, ಮಾದಿಗ, ಚಲವಾದಿ ಮುಂತಾದವರನ್ನು ದಾಖಲಿಸಬೇಕೆಂದು ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿ ಕರೆ ನೀಡಿದೆ.
ಶನಿವಾರ ಯಾದಗಿರಿ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಖಂಡ ಶ್ರೀಶೈಲ ಹೊಸ್ಮನಿ ಮಾತನಾಡಿ, ‘ಅಂಬೇಡ್ಕರ್ ಅನುಯಾಯಿಗಳು ಸಮೀಕ್ಷೆಯ ಧರ್ಮದ ಕಾಲಂ (6)ರಲ್ಲಿ ಬೌದ್ಧ ಧರ್ಮವನ್ನು ಮತ್ತು ಜಾತಿ ಕಾಲಂ (9)ರಲ್ಲಿ ಹೊಲೆಯ ಎಂದು ದಾಖಲಿಸಬೇಕು. 1990ರಲ್ಲಿ ಸಂವಿಧಾನ ತಿದ್ದುಪಡಿ ಮೂಲಕ ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ಶೈಕ್ಷಣಿಕ, ಉದ್ಯೋಗ ಹಾಗೂ ರಾಜಕೀಯ ಮೀಸಲಾತಿ ಹಕ್ಕುಗಳು ರದ್ದಾಗದೇ ಮುಂದುವರಿಯುತ್ತವೆʼ ಎಂದು ಹೇಳಿದರು.
ಬಾಬಾಸಾಹೇಬ ಅಂಬೇಡ್ಕರ್ ಅವರು 1935ರ ಅಕ್ಟೋಬರ್ 13ರಂದು ‘ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಆದರೆ ಹಿಂದೂ ಆಗಿ ಸಾಯುವುದಿಲ್ಲ’ ಎಂದು ಘೋಷಿಸಿದ್ದರು. ಅವರ ಆಶಯದಂತೆ ನಾವು ಬೌದ್ಧರು ಎಂದು ಘೋಷಿಸಿಕೊಂಡರೆ ಹಲವು ಶತಮಾನಗಳಿಂದಲೂ ನಡೆಯುತ್ತಿರುವ ಜಾತಿ ಮತ್ತು ಅಸ್ಪೃಶ್ಯತೆ, ದೌರ್ಜನ್ಯಗಳಿಂದ ಮುಕ್ತರಾಗಿ ಮುಂದಿನ ಪೀಳಿಗೆಯ ಗೌರವದ ಬದುಕಿಗೆ ದಾರಿ ತೆರೆದುಕೊಳ್ಳಬಹುದುʼ ಎಂದರು.
ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಮಾತನಾಡಿ, ‘ಹಿಂದಿನ ಒಳಮಿಸಲಾತಿ ಸಮೀಕ್ಷೆಯಲ್ಲಿ ಬಲಗೈ ಸಮುದಾಯದವರು ತಮ್ಮ ಜಾತಿ ತಿಳಿಸಲು ಹಿಂಜರಿದ ಕಾರಣ ಅನ್ಯಾಯ ಅನುಭವಿಸಬೇಕಾಯಿತು. ಈ ಬಾರಿ ಮತ್ತೆ ಅವಕಾಶ ದೊರೆತಿದ್ದು, ಪ್ರತಿಯೊಬ್ಬರೂ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ದಾಖಲಿಸಬೇಕು. ಹೀಗೆ ಬರೆಸುವುದರಿಂದ ಯಾವುದೇ ಸೌಲಭ್ಯ ಅಥವಾ ಮೀಸಲಾತಿ ಕಳೆದುಕೊಳ್ಳುವುದಿಲ್ಲʼ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಬೀದರ್ | ಚೆಂಡು ಹೂವು ಕೃಷಿಯಲ್ಲಿ ಖುಷಿ ಕಂಡ ಬಿಎಸ್ಸಿ ಪದವೀಧರ
ಸುದ್ದಿಗೋಷ್ಠಿಯಲ್ಲಿ ಭೀಮಣ್ದ ಹೊಸಮನಿ, ಗೋಪಾಲ, ಬುಕ್ಜಲ್ ನಾಗಣ್ಣ ಕಲ್ಲದೇವನಹಳಿ, ಡಾ. ಗಾಳೆಪ್ಪ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ, ಡಾ. ಭಗವಂತ ಅನ್ವಾರ, ನಾಗಣ್ಣ ಬಡಿಗೇರ, ಶರಣು ಎಸ್. ನಾಟೇಕಾರ್, ಹೊನ್ನಪ್ಪ ಗಂಗನಾಳ, ಶಿವಕುಮಾರ ತಳವಾರ, ಸೈದಪ್ಪ ಕೊಲ್ಲೂರುಕರ್, ಕಾಶಿನಾಥ ನಾಟೇಕಾರ್, ಸುರೇಶ್ ಬೊಮ್ಮನ್, ಚಂದ್ರಕಾಂತ ಚಲವಾದಿ, ಶರಣು ದೋರನಹಳ್ಳಿ, ಶಿವು ಪೋತೆ, ಬಲಭೀಮ, ವಿಶ್ವ ನಾಟೇಕರ್, ರಾಹುಲ್ ಹುಲಿಮನಿ ಸೇರಿದಂತೆ ಮತ್ತಿತರರು ಇದ್ದರು.