ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಸಾಹಿತಿ ಹಾಗೂ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಉದ್ಘಾಟಿಸಿದರು. ಇದಕ್ಕೂ ಮೊದಲು ನಾಡದೇವತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಬಾನು ಮುಷ್ತಾಕ್ ಪೂಜೆ ಸಲ್ಲಿಸಿ, ನಮಸ್ಕರಿಸಿದರು.
ನವರಾತ್ರಿಯ ಮೊದಲ ದಿನವಾದ ಇಂದು ಬೆಳಗ್ಗೆ 10:10 ರಿಂದ 10:40ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ವೇದಿಕೆಯಲ್ಲಿ ಬೆಳ್ಳಿಯ ರಥದಲ್ಲಿ ಇರುವ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಮತ್ತು ಗಣ್ಯರು ಪುಪ್ಪಾರ್ಚನೆ ನೆರವೇರಿಸುವ ಮೂಲಕ ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದಾರೆ.
ಇಂದಿನಿಂದ 11 ದಿನಗಳ ಕಾಲ ನಾಡಹಬ್ಬ ದಸರಾ ಮಹೋತ್ಸವದ ಕಾರ್ಯಕ್ರಮಗಳು ನಡೆಯಲಿವೆ. ಉದ್ಘಾಟನೆ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್, ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವರಾದ ನಿರ್ಮಲ ಸೀತಾರಾಮನ್, ಹೆಚ್. ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಶಾಸಕ ಜಿ. ಟಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.
ಇದೇ ವೇಳೆ ಬಾನು ಮುಷ್ತಾಕ್ ಅವರ ಬದುಕು-ಬರಹ ಪುಸ್ತಕ ಬಿಡುಗಡೆಯಾಗಲಿದೆ. ಜೊತೆಗೆ ದಸರಾ ಮಹೋತ್ಸವ ಉದ್ಘಾಟನೆ ನಂತರ ಮೈಸೂರು ನಗರದಲ್ಲಿ ಇಂದು ವಿವಿಧ ದಸರಾ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.