ಬಿಂಬ-ಬಿಂಬನ: ಗಿರೀಶ್ ಕಾಸರವಳ್ಳಿ ಅವರ ಚಿತ್ರಗಳ ಆತ್ಮಕತೆ

Date:

Advertisements
ಗಿರೀಶ್ ಕಾಸರವಳ್ಳಿಯವರು ತಮ್ಮ ಕೃತಿಯುದ್ದಕ್ಕೂ ಚರ್ಚಿಸಿರುವುದು ಬಿಂಬ ಮತ್ತು ಬಿಂಬನ ಹಾಗೂ ಅದು ಹುಟ್ಟುಹಾಕುವ ವಿಷುವಲ್ ಫಿಲಾಸಫಿ. ಸಿನೆಮಾಗಳನ್ನು ನೋಡುವ ಆಸಕ್ತಿಯನ್ನು ಮೀರಿ ಸಿನೆಮಾದ ಬಗ್ಗೆ ತುಡಿಯುವರೆಲ್ಲರೂ ಅವಶ್ಯವಾಗಿ ಓದಬೇಕಾದ ಕೃತಿ ಇದು.

ಭಾರತದಲ್ಲಿ ಸಿನೆಮಾ ಒಂದು ಮಾಧ್ಯಮವಾಗಿ ಬೆಳೆದ ಹಾಗೆ ಅದರ ಬಗೆಗಿನ ಮೀಮಾಂಸೆ ಮತ್ತು ಗಂಭೀರವಾದ ವಿಮರ್ಶೆ ಬೆಳೆಯದಿರುವುದು ಒಂದು ದೊಡ್ಡ ಕೊರಗು. ಕನ್ನಡದಲ್ಲಿ ಸಿನೆಮಾಗಳ ಬಗ್ಗೆ, ಕಲಾವಿದರ, ತಂತ್ರಜ್ಞರ, ನಿರ್ದೆಶಕರ ಬಗ್ಗೆ ವಿಫುಲವಾದ ಬರವಣಿಗೆ ಇದೆ, ನಿಜ. ಆದರೆ ಸಿನೆಮಾ ಕಟ್ಟುವಿಕೆ ಕುರಿತಂತೆ ಅದರ ತಾತ್ವಿಕತೆಯನ್ನು ಚರ್ಚಿಸುವ ಮತ್ತು ಸಿನಿಮಾ ಒಂದು ಕಲೆಯಾಗಿ ಬೆಳೆದಂತೆ ಅದನ್ನು ವ್ಯಾಖ್ಯಾನಿಸುವ, ವಿಸ್ತರಿಸುವ, ಮೌಲ್ಯಮಾಪನ ಮಾಡುವ ಒಂದು ಸಿನೆಮಾಭಾಷೆ (cinematic lingo) ಸೂಕ್ತ ರೀತಿಯಲ್ಲಿ ವಿಕಸನಗೊಂಡಿಲ್ಲ.

ಸಾಹಿತ್ಯ ಕ್ಷೇತ್ರದಲ್ಲಿ ಇರುವಂತೆ ಸಿನೆಮಾವನ್ನು ಅರ್ಥೈಸುವ ನುಡಿಗಟ್ಟು ಅಥವಾ ವಿಮರ್ಶಾ ಸಾಧನಗಳು ಪ್ರತ್ಯೇಕವಾಗಿ ಇಲ್ಲಿ ಅಭಿವೃದ್ಧಿಯಾಗಿಲ್ಲ. ಅದರಿಂದಾಗಿಯೇ ಸಾಹಿತ್ಯದ ವಿಮರ್ಶೆಯ ಹತಾರುಗಳನ್ನೇ ಸಿನೆಮಾ ವಿಶ್ಲೇಷಣೆಗೆ ಬಳಸುವ ಕ್ರಮದಲ್ಲೇ ನಾವು ಮುಂದುವರೆದಿದ್ದೇವೆ. ಕಥೆಯನ್ನು ಪ್ರಮಾಣವಾಗಿ ಇಟ್ಟುಕೊಂಡು ಬರೆದಿರುವಂಥ ವಿಮರ್ಶೆಯನ್ನೇ ಹೆಚ್ಚು ಕಾಣುತ್ತಿರುವುದು ಇದೇ ಕಾರಣಕ್ಕಿರಬಹುದು. ಅಲ್ಲದೆ ಸಿನೆಮಾ ಗುಣಗ್ರಹಣವನ್ನು ಬರಹದಲ್ಲಿ ಸಿದ್ಧಿಸಿಕೊಂಡವರು ಕಡಿಮೆ ಸಂಖ್ಯೆಯಲ್ಲಿ ಇರುವುದರಿಂದ ಈ ಪರಿಸ್ಥಿತಿ ಇರಬಹುದು. ಇದು ಒಟ್ಟಾರೆಯಾಗಿ ಕನ್ನಡವೂ ಸೇರಿದಂತೆ ಭಾರತದ ಎಲ್ಲಾ ಭಾಷೆಗಳ ಸಿನೆಮಾಗಳಿಗೂ ಅನ್ವಯಿಸುವ ಸಂಗತಿ.

ಸಿನೆಮಾಗಳ ತಾತ್ವಿಕತೆ, ಅವುಗಳ ಕಟ್ಟುವಿಕೆ ಮತ್ತು ಅದರ ಮೀಮಾಂಸೆ ಕುರಿತ ಬರಹಗಳು ಚಿತ್ರೋದ್ಯಮವನ್ನು ಬೆಳೆಸುತ್ತವೆ ಎನ್ನುವ ಮಾತಿದೆ. ಫ್ರೆಂಚ್ ವಿಮರ್ಶಕ ಆಂದ್ರೆ ಬಾಜಿನ್ ಮತ್ತು ಅವರ ಸಂಗಡಿಗರು ಹುಟ್ಟುಹಾಕಿದ ಸಿನೆಮಾ ಬರವಣಿಗೆ ಜಗತ್ತಿನ ಚಿತ್ರಗಳನ್ನು ಅರಿಯಲು ಮಾಡಿದ ನೆರವು ಈಗ ಇತಿಹಾಸ. ಅವರ ತೀಕ್ಷ್ಣ ವಿಮರ್ಶೆಗಳಿಂದಲೇ ಫ್ರೆಂಚ್‌ನ ಹೊಸ ಅಲೆ ಪಂಥದ ಹುಟ್ಟಿಗೆ ಕಾರಣವಾಯಿತು. ಸಿನೆಮಾ ಬಗೆಗಿನ ಬರಹಗಳು ಹೊಸ ನಿರ್ದೇಶಕರ ಹುಡುಕಾಟಕ್ಕೆ ನೆರವಾಗುವುದರ ಜೊತೆಗೆ ಪ್ರೇಕ್ಷಕನ ಅರಿವನ್ನು ಹೆಚ್ಚಿಸುತ್ತವೆ; ಅಭಿರುಚಿಗಳನ್ನು ಸ್ವೋಪಜ್ಞಗೊಳಿಸುತ್ತವೆ; ಚಿತ್ರವನ್ನು ನೋಡುವ ದೃಷ್ಟಿಕೋನವನ್ನು ತಿದ್ದುತ್ತವೆ; ಆನಂದವನ್ನು ವೃದ್ಧಿಸುತ್ತವೆ. ಆ ನಿಟ್ಟಿನಿಂದ ಸಿನೆಮಾದ ಬರವಣಿಗೆಗೆ ಹೆಚ್ಚಿನ ಮಹತ್ವ್ವವಿದೆ.

ಇದನ್ನು ಓದಿದ್ದೀರಾ?: ವಿಷ್ಣುವರ್ಧನ್ @75 | ಕಾಲಧರ್ಮ ಕಡೆದು ನಿಲ್ಲಿಸಿದ ಕಲಾವಿದ

ಈ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಮತ್ತು ಸಾಹಿತಿ ಗೋಪಾಲಕೃಷ್ಣ ಪೈ ಅವರು ಜೊತೆಗೂಡಿ ರಚಿಸಿರುವ ‘ಬಿಂಬ-ಬಿಂಬನ’ ಕೃತಿಯು ಚಲನಚಿತ್ರ ಕುರಿತ ಬರವಣಿಗೆಯಲ್ಲಿ ವಿಶಿಷ್ಟ ಪ್ರಯತ್ನವಾಗಿ ಗಮನ ಸೆಳೆಯುತ್ತದೆ. ಸಿನೆಮಾಭಾಷೆಯ ನುಡಿಗಟ್ಟಿನಲ್ಲಿಯೇ ರಚನೆಯಾಗಿರುವ ಇದು ಭಾರತದ ಸಂದರ್ಭದಲ್ಲಿ ನಿರ್ದೇಶಕರೊಬ್ಬರು ತಮ್ಮ ಚಿತ್ರಗಳ ಬಗ್ಗೆ ತಾವೇ ಮಾತನಾಡಿರುವ ಮೊದಲ ಸಂಕಥನವಾಗಿ ದಾಖಲೆಯನ್ನೂ ಬರೆದಿದೆ. ಜಾಗತಿಕ ಚಿತ್ರರಂಗದಲ್ಲಿ ಅಭಿಜಾತ ನಿರ್ದೇಶಕರೆನಿಸಿಕೊಂಡವರು ತಮ್ಮ ಚಿತ್ರಗಳ ಬಗ್ಗೆ ತಾವೇ ವ್ಯಾಖ್ಯಾನ ಮಾಡಿರುವ Directors on Directors ಸರಣಿಯೇ ತಮ್ಮ ಪುಸ್ತಕ ರಚನೆಗೆ ಮೂಲ ಪ್ರೇರಣೆ ಎಂದು ಗಿರೀಶ್ ಅವರು ತಮ್ಮ ಮುನ್ನುಡಿಯಲ್ಲಿ ನೆನೆದಿದ್ದಾರೆ.

ಪ್ರಖ್ಯಾತ ನಿರ್ದೇಶಕರಾದ ಫೆಲಿನಿ, ಕುರಸೋವ, ಬರ್ಗ್ಮನ್, ಗೊಡಾರ್ಡ್, ತರ್‍ಕೋವಸ್ಕಿ, ಸ್ಕಾರ್ಸೆಸಿ ಮೊದಲಾದವರು ಚಿತ್ರ ನಿರ್ಮಿತಿಯಲ್ಲಿ ತಾವು ಅನುಸರಿಸಿದ ವಿಧಾನ, ತಮ್ಮ ಚಿತ್ರಗಳ ವಸ್ತು, ತಾತ್ವಿಕತೆ ಮತ್ತು ಚಿತ್ರಜೀವನದ ಹಲವು ವೃತ್ತಾಂತಗಳನ್ನು ಸಂಕಲಿಸಿ ಪ್ರಕಟಿಸಿರುವ Directors on Directors ಸರಣಿಯ ಪುಸ್ತಕಗಳು ಚಲನಚಿತ್ರಾಸಕ್ತರಿಗೆ ಬಹು ದೊಡ್ಡ ಆಕರವೆನಿಸಿವೆ. ನಮ್ಮಲ್ಲಿ ಸತ್ಯಜಿತ್ ರೇ ಅವರು ಸಿನೆಮಾ ಕ್ಷೇತ್ರದ ತಮ್ಮ ಒಡನಾಟವನ್ನು ಕುರಿತು ಬರೆದಿರುವ ಹಲವು ಕೃತಿಗಳಲ್ಲಿ ತಮ್ಮ ಕೆಲವು ಸಿನೆಮಾಗಳ ಬಗ್ಗೆ ಸಾಂದರ್ಭಿಕವಾಗಿ ಬರೆದಿದ್ದಾರೆ. ಆದರೆ ಭಾರತದಲ್ಲಿ ನನಗೆ ತಿಳಿದ ಮಟ್ಟಿಗೆ ತಮ್ಮ ಸಮಗ್ರ ಚಿತ್ರಗಳ ಬಗ್ಗೆ ನಿರ್ದೇಶಕರೊಬ್ಬರು ತಾವೇ ಚಿಂತಿಸಿ ಬರೆದ ಮೊದಲ ಪ್ರಯತ್ನವಿದು. ಈ ಪುಸ್ತಕ ನೀಡುವ ಹಲವು ಕಾಣ್ಕೆಗಳ ಕಾರಣಗಳಿಂದಾಗಿ ಸಿನೆಮಾ ಬರವಣಿಗೆಯ ವಿಶಿಷ್ಟ ಕೃತಿಯೆನಿಸಿದೆ.

ಸಾಹಿತಿ ಗೋಪಾಲಕೃಷ್ಣ ಪೈ ಅವರು ಪ್ರತಿಯೊಂದು ಚಿತ್ರದ ವಿಶಿಷ್ಟತೆಯ ಬಗ್ಗೆ ಎತ್ತಿರುವ ಪ್ರಶ್ನೆಗಳಿಗೆ ಉತ್ತರ, ವಿವರಣೆ ನೀಡುವ ಮಾದರಿಯಲ್ಲಿ ಕಾಸರವಳ್ಳಿಯವರು ತಮ್ಮ ಚಿತ್ರಗಳ ಬಗ್ಗೆ ಮಾಡುವ ವ್ಯಾಖ್ಯಾನ ಮತ್ತು ಕಟ್ಟುವ ಮೀಮಾಂಸೆಯೇ ಈ ಕೃತಿಯ ತಿರುಳು. ಆದರೆ ಇದೊಂದು ಕೇವಲ ಪ್ರಶ್ನೋತ್ತರ ಸರಣಿಯಲ್ಲ. ಅವರ ಮಾತುಕತೆಯು ಕಾಸರವಳ್ಳಿ ಅವರ ಒಟ್ಟು ಚಲನಚಿತ್ರಗಳ ಬಗೆಗಿನ ಅವಲೋಕನಕ್ಕೆ ಮಾತ್ರ ಸೀಮಿತವಾಗದೆ ಸಿನೆಮಾ ಸಂಸ್ಕೃತಿಯ ಸಮಗ್ರ ಜಿಜ್ಞಾಸೆಯ ಸಂಕಥನದ ರೂಪವನ್ನು ಪಡೆಯುತ್ತದೆ. ಆ ಮೂಲಕ ಕಾಸರವಳ್ಳಿ ಅವರು ಓರ್ವ ಉತ್ತಮ ಚಲನಚಿತ್ರ ವ್ಯಾಕರಣದ ಟೀಕಾಕಾರರಾಗಿಯೂ ಹೊಮ್ಮಿದ್ದಾರೆ. ತಮ್ಮ ಚಿತ್ರಗಳ ಬಗ್ಗೆ ಮಾತನಾಡಿದರೂ ಆತ್ಮಪ್ರಶಂಸೆ, ಗುಣವಾಚಕಗಳಿಂದ ಮುಕ್ತಗೊಳಿಸಿರುವುದು ಈ ಕೃತಿಯ ಬರವಣಿಗೆಯ ವಿಶೇಷ.

ಒಟ್ಟು ಕೃತಿಯಲ್ಲಿ ಸಿಗುವುದು ಕಾಸರವಳ್ಳಿ ಅವರು ತಮ್ಮ ಸಿನೆಮಾಗಳ ಬಗ್ಗೆ, ಸಿನೆಮಾ ರೂಪುಗೊಂಡದ್ದರ ಬಗ್ಗೆ, ತಾವು ಪಡೆದ ಅನುಭವಗಳು, ತಮ್ಮ ಓದು, ಕಲಿಕೆ, ಸಿದ್ಧತೆ ಇತ್ಯಾದಿಗಳ ಬಗ್ಗೆ ನೀಡಿರುವ ವಸ್ತುನಿಷ್ಠವಾದ ಹೇಳಿಕೆಗಳು. ಆದುದರಿಂದ ಇದು ಕಾಸರವಳ್ಳಿಯವರ Biography of a Filmography, ಅಂದರೆ, ಕಾಸರವಳ್ಳಿ ಅವರ ಒಟ್ಟು ಚಲನಚಿತ್ರಗಳ ಜೀವನಗಾಥೆಯಂತೆ ಕಾಣುತ್ತದೆ. 

ಆದರೆ ಕೃತಿ ಆ ಉದ್ದೇಶವನ್ನು ಮೀರಿ ಬೆಳೆಯುವುದು ಅದರ ಸೊಗಸನ್ನು ಹೆಚ್ಚಿಸಿದೆ. ತಾವು ನಿರ್ದೆಶಿಸಿದ ಒಂದು ಕಿರುಚಿತ್ರ ಮತ್ತು ಹದಿನೈದು ಕಥಾಚಿತ್ರಗಳಿಗೆ ಮರುಭೇಟಿ ನೀಡಿರುವ ಗಿರೀಶ್ ಅವರು ಪ್ರತಿ ಚಿತ್ರಗಳ ಸಂದರ್ಭಗಳನ್ನು ಮರುಜೀವಿಸಿದ್ದಾರೆ. ತಾವು ನಿರ್ದೇಶಿಸಲು ಆರಿಸಿಕೊಂಡ ಕೃತಿಗಳಿಗೆ ಮಾಡಿದ ಪೂರ್ವಸಿದ್ಧತೆ, ಅವುಗಳನ್ನು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಭಿತ್ತಿಯಲ್ಲಿಟ್ಟು ನೋಡಿದಾಗ ಅವು ದಕ್ಕಿಸುವ ಕಾಣ್ಕೆ ಮತ್ತು ಸಾಂದರ್ಭಿಕವಾಗಿ ಜಗತ್ತಿನ ಶ್ರೇಷ್ಠ ಚಿತ್ರಗಳ ವಿವಿಧ ಅಂಶಗಳ ಬಗೆಗೆ ನೀಡಿರುವ ವಿವರಣೆಗಳ ಮೂಲಕವೇ ಅವರು ಸಿನೆಮಾ ಮೀಮಾಂಸೆಯೊಂದನ್ನು ಕಟ್ಟುತ್ತಾರೆ. ಅಥವಾ ಸಿನೆಮಾ ಮೀಮಾಂಸೆಯೊಂದು ತನಗೆ ತಾನೇ ಇಲ್ಲಿ ಸಂಶ್ಲೇಷಣೆಗೊಳ್ಳುತ್ತದೆ ಎಂದು ಕರೆಯುವುದು ಸೂಕ್ತ ಎನಿಸುತ್ತದೆ.

ಇದನ್ನು ಓದಿದ್ದೀರಾ?: ಭಾರತೀಯ ತೆರೆಯನ್ನು ಆಳಿದ ತಾರೆ: ಬಿ. ಸರೋಜಾದೇವಿ

ಅವರ ಮಾತುಗಳು ಕೇವಲ ತಮ್ಮ ಚಿತ್ರಗಳಿಗೆ ಮಾತ್ರ ಮಿತಿಗೊಳ್ಳದೆ ಜಾಗತಿಕ ಚಿತ್ರರಂಗದಲ್ಲಿ ನಡೆದ ಪ್ರಯೊಗಗಳು, ಸಿನೆಮಾ ಆಂದೋಲನಗಳ ಸ್ವರೂಪಗಳು, ಭಿನ್ನ ಭಿನ್ನ ನಿರ್ದೇಶಕರ ಬದ್ಧತೆಗಳ ಕುರಿತ ವ್ಯಾಖ್ಯಾನಗಳೂ, ಬಿಂಬ, ದೃಶ್ಯ ಸಂಯೋಜನೆ, ಸಂಗೀತ, ಸಂಕಲನ, ಚಿತ್ರಿಕೆ ಇತ್ಯಾದಿ ವಿವರಗಳು ಇರುವುದರಿಂದ ಚಲನಚಿತ್ರಗಳ ರಸಗ್ರಹಣದ ಅನುಭವವೊಂದನ್ನೂ ನೀಡುತ್ತದೆ. ಚಲನಚಿತ್ರಗಳನ್ನು ಕುರಿತ ಪಠ್ಯವಾಗಿಯೂ ಇದನ್ನು ನೋಡಬಹುದು. ಆದರೆ ಶೈಕ್ಷಣಿಕ ಪಠ್ಯದ ಶುಷ್ಕತೆಯನ್ನು ಮೀರಿದ ರಸಾನುಭವ ಈ ಕೃತಿಯ ಓದಿನಿಂದ ದಕ್ಕುತ್ತದೆಂದು ಖಾತ್ರಿಯಾಗಿ ಹೇಳಬಹುದು. ಈ ಎಲ್ಲ ಗುಣಗಳಿಂದಾಗಿ ಇದು ಸಿನೆಮಾಸಕ್ತರು, ಮಾಧ್ಯಮದವರು ಮತ್ತು ಚಿತ್ರ ನಿರ್ದೇಶನದ ವಿದ್ಯಾರ್ಥಿಗಳಿಗೆ ಸಿನೆಮಾ ಎಂಬ ಮಾಧ್ಯಮದ ಬಗ್ಗೆ ಹಲವು ಒಳನೋಟಗಳನ್ನು ನೀಡುತ್ತದೆ.

ಇಡೀ ಕೃತಿಯಲ್ಲಿ ಗಿರೀಶ್ ಅವರು ತಮ್ಮ ಚಿತ್ರಗಳ ನಿರ್ಮಾಣ, ನಿರ್ದೇಶನ, ಅನುಸರಿಸಿದ ತಾಂತ್ರಿಕ ವಿಧಾನಗಳ ಬಗ್ಗೆ ಸುದೀರ್ಘವಾದ ಚರ್ಚೆ ಮಾಡಿದ್ದಾರೆ. ಅವರು ತಮ್ಮ ಚಿತ್ರಗಳ ನಿರ್ದೇಶನಕ್ಕೆ ಬಗ್ಗೆ ಈ ವ್ಯಾಖ್ಯಾನಗಳನ್ನು ಕಟ್ಟುವಾಗ ತಾವು ಅನುಸರಿಸಿದ ಮಾರ್ಗವೇ ಸರಿ ಅಥವಾ ಅದೇ ಒಂದು ಎಂದು ‘ಪ್ರಮಾಣು’ ಎಂದು ಹೇಳುವುದಿಲ್ಲ. ಅಥವಾ ತಾನೊಂದು ಶ್ರೇಷ್ಠ ಚಿತ್ರ ನಿರ್ಮಾಣಕ್ಕೆ ಅಗತ್ಯವಾದ ಸೂತ್ರವೊಂದನ್ನು ನೀಡುತ್ತಿದ್ದೇನೆಂದೂ ಸೂಚಿಸುವುದಿಲ್ಲ. ಈ ಚರ್ಚೆಯಲ್ಲಿ ಅವರು ತಮ್ಮದೇ ಸಿನೆಮಾ ನುಡಿಗಟ್ಟೊಂದನ್ನು (Idiom) ಕಂಡುಕೊಳ್ಳಲು ನಡೆಸಿದ ಹುಡುಕಾಟವನ್ನು ವಿವರಿಸುತ್ತಾರೆ. ಪ್ರತಿಯೊಬ್ಬ ನಿರ್ದೇಶಕನೂ, ಚಿತ್ರ ನಿರ್ಮಾಣದ ತಂತ್ರಜ್ಞತೆ ಗೊತ್ತಿದ್ದರೂ, ಆ ಅರಿವನ್ನು ತನ್ನದೊಂದು ವೈಯಕ್ತಿಕ ನುಡಿಗಟ್ಟಿನ ಹುಡುಕಾಟದಲ್ಲಿ ತೊಡಗಿಸಿ ದಕ್ಕಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎನ್ನುತ್ತಾರೆ. ಎಲ್ಲ ಅಭಿಜಾತ ನಿರ್ದೇಶಕರು ಮಾಡಿರುವುದೂ ಇಂಥದ್ದೊಂದು ಹುಡುಕಾಟವನ್ನೇ ಎನ್ನುವುದು ಅವರ ಚರ್ಚೆಯಲ್ಲಿ ಸ್ಪಷ್ಟವಾಗುತ್ತದೆ. 

ತಮ್ಮ ಕಲಿಕೆಯ ಭಾಗವಾಗಿ ನಿರ್ದೇಶಿಸಿದ ‘ಅವಶೇಷ್’ ಕಿರುಚಿತ್ರದ ಬಗ್ಗೆ ಮಾತುಕತೆಯ ಸಮಯದಲ್ಲಿ ಗಿರೀಶ್ ಅವರು ತಾನು ಯಾವ ಬಗೆಯ ನಿರ್ದೇಶಕ ಎಂದು ಸ್ಪಷ್ಟಡಿಸುತ್ತಾರೆ. ಸಾಮಾನ್ಯವಾಗಿ ಜಗತ್ತು ಮಾನ್ಯ ಮಾಡಿದ, ಸಿನಿಮಾ ವ್ಯಾಕರಣವನ್ನು ವಿಸ್ತರಿಸಿದ ಚಿತ್ರಗಳ ನಿರ್ದೇಶಕರ ಒಂದು ವರ್ಗವನ್ನು Masters (ಸಿನೆಮಾ ಮಾಧ್ಯಮವನ್ನು ಕರಗತ ಮಾಡಿಕೊಂಡವರು ಎಂಬರ್ಥದಲ್ಲಿ) ಎಂದು ಹೇಳುತ್ತಾರೆ. ಇವರು ಪ್ರತಿ ಚಿತ್ರವೂ ವಸ್ತು, ನಿರೂಪಣೆ ಮತ್ತು ದೃಶ್ಯಸಂವಿಧಾನ ಒಂದಕ್ಕಿಂತ ಒಂದು ಭಿನ್ನವಾಗಿ ಇರಬೇಕೆಂದು ಬಯಸುತ್ತಾರೆ. ಡೇವಿಡ್ ಲೀನ್, ಕಪ್ಪೋಲಾ, ಜಾನ್ ಫೋರ್ಡ್, ಶಾಂತಾರಾಂ, ಪುಟ್ಟಣ್ಣ, ಬಾಲಚಂದರ್… ಈ ಮಾದರಿಯವರು.

ಮತ್ತೊಂದು ಪಂಥದ ನಿರ್ದೇಶಕರು ಫ್ರೆಂಚ್ ಆವಾಂತ್‌ಗಾರ್ಡ್ ನಿರ್ದೇಶಕರು ಹೇಳುವ ‘ಆಟಿಯರ್’ಗಳು. ಅವರು ಪ್ರತಿ ಚಿತ್ರದಲ್ಲೂ ತಮ್ಮ ಶೈಲಿಗೇ ಬದ್ಧವಾಗಿದ್ದುಕೊಂಡು ಅವರಿಗೇ ವಿಶಿಷ್ಟವಾದ ವೈಯಕ್ತಿಕ ನುಡಿಗಟ್ಟಿನ ಮೂಲಕ ಚಿತ್ರ ಕಟ್ಟುತ್ತಿರುತ್ತಾರೆ. ನಿರ್ದೇಶಕನ ವ್ಯಕ್ತಿವಿಶಿಷ್ಟತೆಯ ಸ್ಪರ್ಶ ಪ್ರತೀ ಚಿತ್ರದಲ್ಲಿ ಇರಬೇಕು ಎನ್ನುವುದು ಅವರ ವಾದ. ಈ ಆಟಿಯರ್ ಸಿದ್ಧಾಂತದ ಪ್ರಕಾರ ಚಿತ್ರನಿರ್ದೇಶಕನೇ ಕೃತಿಕಾರ. ಅವನಿಗೆ ಕ್ಯಾಮೆರಾ ಸ್ವತಃ ಲೇಖನಿಯಾಗುತ್ತದೆ. ಆಟಿಯರ್‌ಗಳು ಬೇರೆ ಬೇರೆ ಚಿತ್ರಗಳನ್ನು ರೂಪಿಸಿದರೂ ಮೂಲದಲ್ಲಿ ಅವರ ತಾತ್ವಿಕ ತಳಹದಿಯಲ್ಲಿ ಗಮನಾರ್ಹ ಭಿನ್ನತೆ ಇರುವುದಿಲ್ಲ. ಓಜೂ, ಫೆಲಿನಿ, ಗೊಡ್ಡಾರ್ಡ್, ಪಾಸಲೋನಿ, ಆಂಟೋಂನಿಯಾನಿ, ಮೃಣಾಲ್ ಸೇನ್ ಈ ವರ್ಗಕ್ಕೆ ಸೇರಿದವರು. ಓಜು ಅವರಂತೂ ತಾನು ನಿರ್ದೆಶಿಸಿರುವ ಚಿತ್ರಗಳ ಸಂಖ್ಯೆ ಹೆಚ್ಚಿದ್ದರೂ ಮೂಲದಲ್ಲಿ ಒಂದೇ ತಾತ್ವಿಕತೆಯನ್ನು ಹೇಳುವ ಭಿನ್ನ ರೂಪಗಳು ಎನ್ನುತ್ತಾರೆ. ತಮ್ಮ ಆಶಯಗಳು, ಕಾಳಜಿಗಳು, ನುಡಿಗಟ್ಟುಗಳು, ಬಿಂಬಗಳು ತಮ್ಮ ಸಿನಿಮಾಗಳಲ್ಲಿ ಮತ್ತೆ ಮತ್ತೆ ಹೇಗೆ ಮುನ್ನೆಲೆಗೆ ಬಂದಿವೆ ಎಂಬುದನ್ನು ತಮ್ಮ ಸುದೀರ್ಘ ಮಾತುಕತೆಯಲ್ಲಿ ವಿಷದಪಡಿಸುವ ಕಾಸರವಳ್ಳಿಯವರು ಎರಡನೇ ಪಂಥದ ನಿರ್ದೇಶಕರಾಗಿ ಸ್ಪಷ್ಟವಾಗುತ್ತಾರೆ.

Girish Kasaravalli movies

ಕಾಸರವಳ್ಳಿಯವರು ತಮ್ಮ ಕೃತಿಯುದ್ದಕ್ಕೂ ಚರ್ಚಿಸಿರುವುದು ಬಿಂಬ ಮತ್ತು ಬಿಂಬನ ಹಾಗೂ ಅದು ಹುಟ್ಟುಹಾಕುವ ವಿಷುವಲ್ ಫಿಲಾಸಫಿ. ಒಂದು ಸಿನೆಮಾದ ಪ್ರಧಾನ ಧಾತುವೇ ಬಿಂಬ ಎಂಬುದು ಅವರ ಅಭಿಮತ. ಚಲನಚಿತ್ರವು ಬಿಂಬದ ಭಾಷೆ. ಸಾಹಿತ್ಯವು ರೂಪಕಗಳಲ್ಲಿ ಕತೆಯನ್ನು ಹೇಳುವ ಹಾಗೆ ಸಿನೆಮಾ ಬಿಂಬದ ಮೂಲಕ ಅನುಭವ ದಾಟಿಸುತ್ತದೆ. ಬಿಂಬ ಎಂದರೆ ತೆರೆಯ ಮೇಲಿನ ದೃಶ್ಯ. ಅದರಲ್ಲಿ ಶಬ್ದ, ಸಂಕಲನ, ಕಲಾವಿದನ ಅಭಿನಯ, ಧ್ವನಿ, ಸಂಗೀತ, ಚಲನೆ ಮತ್ತೆಲ್ಲವೂ ಕೂಡಿ ಪ್ರೇಕ್ಷಕನ ಮನಸ್ಸಿನಲ್ಲಿ ಸೃಷ್ಟಿಸುವ ಪ್ರಕ್ರಿಯೆಯೇ ಬಿಂಬನ. ಹಾಗೆ ಮೂಡುವ ಬಿಂಬನವು ಯಂತ್ರಗಳ ಸೃಜನೆಯೇ ಆದರೂ ಹೇಳುವ ವಿಷಯ, ಧ್ವನಿಸುವ ರಾಜಕೀಯ, ಸಾಮಾಜಿಕ ಪರಿಣಾಮಗಳು, ನಿರ್ದೆಶಕನ ಲೋಕದೃಷ್ಟಿಯನ್ನು ದಾಟಿಸುತ್ತವೆ. ಅವರ ಪ್ರಕಾರ ಬಿಂಬನದ ಮೂಲಕ ಕತೆ ಅನುಷಂಗಿಕವಾಗಿ ವ್ಯತ್ಪತ್ತಿಯಾಗಬೇಕೇ ಹೊರತು ಕತೆಯೇ ಪ್ರಧಾನವಲ್ಲ. “ಸಾಮಾನ್ಯವಾಗಿ ನಮ್ಮಲ್ಲಿನ ಚಿತ್ರವಿಮರ್ಶೆಯು ಮೊದಲು ಕತೆ ಹೇಳಿ ನಂತರ ವಿವರ ಹೇಳುತ್ತದೆ. ಯುರೋಪ್ ಮತ್ತು ಅಮೆರಿಕದ ಚಿತ್ರ ವಿಮರ್ಶಕರು ಸಿನೆಮಾವನ್ನು ವ್ಯಾಖ್ಯಾನಿಸುವಾಗ ಚಿತ್ರದ ಬಿಂಬಗಳಿಂದ ಆರಂಭಿಸಿ ನಂತರ ಕತೆಗೆ ಬರುತ್ತಾರೆ. ಅಂದರೆ ವಿವರಗಳ ಮೂಲಕವೇ ಚಿತ್ರದ ಭಿತ್ತಿಯನ್ನು ಮತ್ತು ಚಿತ್ರದ ದರ್ಶನವನ್ನು ಅರಿಯಲು ಪ್ರಯತ್ನಿಸುತ್ತಾರೆ. ಸಿನಿಮಾ ಕೃತಿಯೊಂದಕ್ಕೆ ಪ್ರವೇಶ ಪಡೆಯುವ ಎರಡು ಭಿನ್ನ ಮಾರ್ಗಗಳು ಇವು” ಎಂದು ಕೃತಿಯಲ್ಲಿ ಅವರು ವಿವರಣೆ ನೀಡಿದ್ದಾರೆ. ದೃಶ್ಯ ಅಲ್ಲಿನ ಪರಿಕರ, ಶಬ್ದ, ಸಂಕಲನ, ಎಲ್ಲವೂ ಪ್ರೇಕ್ಷಕನಲ್ಲಿ ಮೂಡಿಸುವ ಬಿಂಬ. ತಮ್ಮ ಪ್ರತಿಯೊಂದು ಚಿತ್ರಗಳಲ್ಲಿ ಕಥಾವಸ್ತುವನ್ನು ದೃಶ್ಯರೂಪಕ್ಕೆ ಮಾರ್ಪಡಿಸಲು ಅಗತ್ಯವಾದ ಸೂಕ್ತ ವಿನ್ಯಾಸ ಹುಡುಕುವ ಸವಾಲನ್ನು ಎದುರಿಸಿದ ಬಗೆಯನ್ನು ವಿವರಿಸುತ್ತಾರೆ. ಈ ವಿವರಗಳೆಲ್ಲವೂ ಇಮೇಜ್ ಮತ್ತು ಇಮೇಜಿಂಗ್‌ನ ಅರ್ಥ ಸಾಧ್ಯತೆಗಳ ಜೊತೆಗೆ ಅದರ ರಾಜಕೀಯತೆಯನ್ನೂ ಚರ್ಚಿಸುತ್ತಾರೆ. ಜೊತೆಗೆ ಪ್ರೊಪಗಾಂಡಿಸ್ಟಟರ ಕೈಗೆ ಸಿಗುವ ಬಿಂಬನ ರಾಜಕೀಯವಾಗಿ ಅನರ್ಥಕಾರಿಯಾಗುವ ಅಪಾಯವನ್ನು ಇಲ್ಲಿ ವಿಶ್ಲೇಷಿಸುತ್ತಾರೆ.

ಗಿರೀಶರು ನಿರ್ದೇಶಿಸಿರುವ ಪ್ರತಿ ಚಿತ್ರದ ಬಗೆಗೂ ದೀರ್ಘ ವಿಶ್ಲೇಷಣೆಗಳಿವೆ. ಅಲ್ಲಿನ ದೃಶ್ಯ ಸಂವಿಧಾನ, ಅನುಭವ ಮತ್ತು ಅರ್ಥ ಸಾಧ್ಯತೆಯನ್ನು ಹೆಚ್ಚಿಸಲು ಮಾಡಿರುವ, ಕತೆಯನ್ನು ಆಯ್ಕೆ ಮಾಡಿಕೊಂಡ ಹಿನ್ನೆಲೆ, ಅದರ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ವಿನ್ಯಾಸ; ನೆರಳು ಬೆಳಕಿನ ಸಂಯೋಜನೆ ಮೂಲಕ ಕಥನ ಕಟ್ಟುವ ಸಿದ್ಧತೆ, ಚಿತ್ರದಲ್ಲಿ ಬಳಸುವ ಬಣ್ಣ, ಪೋಷಾಕು, ಪರಿಸರ, ಋತುಮಾನ, ಧ್ವನಿ ವಿನ್ಯಾಸದ ಅಳವಡಿಕೆ; ವಸ್ತು, ಪಾತ್ರವರ್ಗದ ಆಯ್ಕೆ ಮತ್ತು ಕತೆಯ ಆಶಯಕ್ಕೆ ಸಮುಚಿತವಾಗಿ ಸಂಗೀತದ ಅಳವಡಿಕೆ, ಸಂಕಲನ ಸ್ವರೂಪ ಇತ್ಯಾದಿ ಚಿತ್ರ ನಿರ್ಮಾಣದ ಸಕಲವನ್ನೂ ಇಲ್ಲಿ ಚರ್ಚಿಸಿ ಒಂದು ಸಾವಯವ ಶಿಲ್ಪವನ್ನು ಕಡೆಯಲು ಸಾಧ್ಯವಾದದ್ದರ ಬಗ್ಗೆ ಹೇಳುತ್ತಾರೆ. ಇದಲ್ಲದೆ ನಿಸರ್ಗದ ಸದಾ ಚಲನಶೀಲ ಎಲಿಮೆಂಟ್ಸ್ ಅಥವಾ ಪಂಚಭೂತಗಳು ಅಂದರೆ ಮಳೆ ಗಾಳಿ, ಬಿಸಿಲು, ಚಳಿ, ಮಳೆ ಹೇಗೆ ಪಾತ್ರಗಳ ಒಳತೋಟಿಯನ್ನು, ಕಥೆಯ ಆಶಯವನ್ನು ವಿಸ್ತರಿಸುವ ಘಟಕಗಳಾಗಿ ಅಥವಾ ಜೀವನ ವೈರುಧ್ಯಗಳಾಗಿ ಅವರ ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿವೆ ಎಂಬುದರ ಬಗೆಗೂ ವ್ಯಾಪಕ ಚರ್ಚೆ ಇದೆ. ಇನ್ನೂ ಮುಂದೆ ಹೋಗಿ ಚಿತ್ರದಲ್ಲಿ ಬಳಸುವ ಬಣ್ಣ, ವಾಸನೆ, ಶಬ್ದ ಸಹ ಒಂದು ಸಶಕ್ತ ಘಟಕವಾಗಬಲ್ಲ ವಿವರಗಳೂ ಇವೆ. ಉದಾ: ತಾಯಿ ಸಾಹೇಬದಲ್ಲಿ ಬಳಕೆಯಾಗುವ ಅತ್ತರಿನ ಘಮಲು ಊಳಿಗಮಾನ್ಯ ಬದುಕನ್ನು ಪ್ರತಿನಿಧಿಸಿದರೆ ಕನಸೆಂಬೋ ಚಿತ್ರದ ಅತ್ತರು ಮತ್ತು ಧೂಪ ಸತ್ಯವನ್ನು ಮರೆಮಾಚುವ ಸಾಧನವಾಗಿದೆ. ಚಿತ್ರದ ತೆರೆಯ ಮೇಲೆ ಕಾಣಿಸದ ಗುಲಾಬಿ ಟಾಕೀಸಿನ ಸುಲೇಮಾನ್ ಬ್ಯಾರಿಯ ಪ್ರಸ್ತಾಪ (ಗುಲಾಬಿ ಟಾಕೀಸ್) ಮತ್ತು ಶಬ್ದ ಮಾತ್ರವಾಗಿ ತಲ್ಲಣ ಸೃಷ್ಟಿಸುವ ಹುಲಿಯ ಕೂಗು (ದ್ವೀಪ), ಮನುಷ್ಯನ ಅಂತರಂಗದ ಭಯ ಅಸೂಯೆಯನ್ನು ಶೋಧಿಸುವ, ಹೊರಹಾಕುವ ಮಾರ್ಗಗಳನ್ನು ತೆರೆಯಿಸುತ್ತದೆ. ಹೀಗೆ ಚಿತ್ರದಲ್ಲಿ ಬಳಕೆಯಗುವ ಎಲ್ಲ ಘಟಕಗಳ ಬಗೆಯ ಚರ್ಚೆಯ ವಿವರಗಳು ಸಿನೆಮಾ ನೋಡುವ… ಅನುಭವಿಸುವ… ಕಂಡುಕೊಳ್ಳುವ… ವಿಧಾನಗಳ ಹತಾರುಗಳನ್ನು ನೀಡುತ್ತವೆ. ಆದರೆ ಅದು ಕೇವಲ ಅವರ ಚಿತ್ರಗಳ ಮನನಕ್ಕೆ ಮಾತ್ರ ಸೀಮಿತವಾದ ಸೂಚಕಗಳಲ್ಲ. ಯಾವುದೇ ಚಿತ್ರವನ್ನು ಬಗೆದು ನೋಡಲು ಉಪಯೋಗಿಸಬಹುದಾದ ಸಾಧನಗಳು.

ಕೆಲವು ಸಾಹಿತ್ಯಕ ವಿಮರ್ಶಾ ಪರಿಕಲ್ಪನೆಗಳು ಸಿನೆಮಾದಲ್ಲಿ ಭಿನ್ನವಾಗಿ ಬಳಕೆಯಾಗಿರುವ ಬಗೆಯನ್ನು ಗಿರೀಶ್ ಅವರು ವಿಶ್ಲೇಷಿಸಿರುವುದು ಸಹ ಕುತೂಹಲಕಾರಿಯಾಗಿದೆ. ಸಾಹಿತ್ಯದಲ್ಲಿ ಯುಗ್ಮ ವೈರುಧ್ಯ(ಬೈನರಿ ಆಪೋಸಿಟ್)ವನ್ನು ಸಂಘರ್ಷ ಹುಟ್ಟುಹಾಕಲು ಅಥವಾ ಸಾಮಾಜಿಕ ವೈರುಧ್ಯದ ನೆಲೆಗಳನ್ನು ಗುರುತಿಸಲು ಬಳಸುತ್ತಾರೆ(ಹಳ್ಳಿ-ನಗರ, ಬಡವ-ಶ್ರೀಮಂತ, ಪುರುಷ –ಮಹಿಳೆ ಇತ್ಯಾದಿ). ಕಾಸರವಳ್ಳಿ ಅವರ ಪಾಲಿಗೆ ಈ ಯುಗ್ಮ ವೈರುಧ್ಯವು ಸಾಮಾಜಿಕ ಸಂಕಥನಕ್ಕೆ ಸೂಕ್ತವಾಗಿ ಒದಗಿಬರುವ ಪರಿಕಲ್ಪನೆ. ಇದು ತಮ್ಮ ಸಿನಿಮಾಗಳ ಸ್ಥಾಯಿಭಾವ ಎಂದು ಕಾಸರವಳ್ಳಿ ಅವರು ಹೇಳುತ್ತಾರೆ. ಆದರೆ ಇದು ಸಾಹಿತ್ಯದಲ್ಲಿ ಬಳಕೆಯಾಗುವಂತೆ ಸಂಘರ್ಷದಿಂದ ಹುಟ್ಟಿದರೂ ತಮ್ಮ ಚಿತ್ರಗಳಲ್ಲಿ ಯುಗ್ಮ ವೈರುಧ್ಯದಿಂದಾಗುವ ಸೋಲು ಗೆಲುವುಗಳನ್ನು ಸೀಮಿತ ಅರ್ಥದಲ್ಲಿ ಬಿಂಬಿಸುವುದು ತಮ್ಮ ಶೈಲಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದ್ವೀಪ ಚಿತ್ರದ ಉದಾಹರಣೆ ನೀಡುತ್ತಾ, ಅಭಿವೃದ್ಧಿಯು ಹಲವು ವೈರುಧ್ಯಗಳನ್ನು ಹುಟ್ಟು ಹಾಕಿದರೂ ಸಾಮಾಜಿಕ ಅವನತಿಯ ಜೊತೆಯಲ್ಲಿಯೇ ಮನುಷ್ಯನ ವಿಮೋಚನೆಯ ದಾರಿಗಳನ್ನು ತೆರೆಯುವುದನ್ನೂ ಅವರು ಗುರುತಿಸುತ್ತಾರೆ. ಯುಗ್ಮ ವೈರುಧ್ಯಗಳಾಗಿಯೇ ನೋಡುತ್ತಿದ್ದ ನಂಬಿಕೆ-ಮೂಢನಂಬಿಕೆ, ಆಚರಣೆ-ಕಂದಾಚಾರ, ಕ್ರಿಯಾವಿಧಿ-ಧರ್ಮಾಚರಣೆ ಇವುಗಳಲ್ಲಿ ಬೇರೆಯೇ ಆದ ಅರ್ಥವನ್ನು ನಾಯಿ ನೆರಳು ಚಿತ್ರದಲ್ಲಿ ನೋಡಲು ಸಾಧ್ಯವಾದುದ್ದನ್ನು ದಾಖಲಿಸಿದ್ದಾರೆ. ಎಲ್ಲ ಆಚರಣೆಗಳ, ಕ್ರಿಯಾ ವಿಧಿಗಳ ಉದ್ದೇಶಗಳೂ ಒಂದೇ ಆಗಿರುವುದಿಲ್ಲ ಎಂದು ಅಲ್ಲಿ ತಿಳಿಯುವ ಪ್ರಯತ್ನ ಇದೆ.

ತಮ್ಮ ಮೊದಲ ಕಿರುಚಿತ್ರ ಅವಶೇಷ್‌ನಿಂದಲೇ ಇದನ್ನು ಬಳಕೆ ಮಾಡಿರುವ ಅವರು ಅಲ್ಲಿ ಸಂಕಲನದ ವ್ಯಾಕರಣವನ್ನು ಮುರಿಯುವ ಮೂಲಕ ವೈರುಧ್ಯವನ್ನು ಕಟ್ಟಿದರೆ, ಘಟಶ್ರಾದ್ದ, ತಬರನ ಕಥೆ, ದ್ವೀಪ ಮತ್ತು ನಾಯಿ ನೆರಳು ಚಿತ್ರಗಳಲ್ಲಿ ಆಚರಣೆ, ಕ್ರಿಯೆಗಳ ಬಿಂಬ ಸಂಯೋಜನೆಯಿಂದ ಕಟ್ಟಿದ್ದಾರೆ.

ಅದೇ ರೀತಿ ತಮ್ಮ ಚಿತ್ರಗಳಲ್ಲಿ ಪಾತ್ರಗಳನ್ನು ಎಂದೂ ಒಂದು ಸ್ಥಾಯಿಗುಣದ ಪ್ರತಿನಿಧಿಯಂತೆ ಚಿತ್ರಿಸದಿರಲು ಕಾರಣಗಳನ್ನು ಹೇಳುತ್ತಾರೆ. ‘ವ್ಯಕ್ತಿಯು ಪರಿಸ್ಥಿತಿಯ, ಪರಿಸರದ ಕೂಸು. ಹಾಗಾಗಿ ವ್ಯಕ್ತಿಗಳನ್ನು ರೂಪಿಸುತ್ತಿರುವ ಸಮಾಜದ ಬಣಗಳನ್ನು ಗಮನಿಸದೇ ಅದರಿಂದ ಹೊರನಿಂತು ಪಾತ್ರಗಳ ವ್ಯಾಖ್ಯಾನ ನಾನು ಮಾಡುವುದಿಲ್ಲ. ಹಾಗಾಗಿ ನನ್ನ ಚಿತ್ರಗಳಲ್ಲಿ ಖಳರೂ ಇರುವುದಿಲ್ಲ, ಆದರ್ಶಮಯ ಪಾತ್ರಗಳೂ ಇರುವುದಿಲ್ಲ. ರುದ್ರಿ ಕಳ್ಳತನ ಮಾಡಿದರೂ, ಮಠದಯ್ಯ ಸುಳ್ಳು ಹೇಳಿದರೂ ಅವುಗಳ ಹಿಂದಿನ ಒತ್ತಡಗಳೇನಿರುತ್ತವೆ ಎಂದು ಅರ್ಥ ಮಾಡಿಸುವಂತಹ ಚಿತ್ರಣ ನನ್ನ ಪ್ರಯತ್ನ. ಅಲ್ಲದೆ ತಬರನಾಗಲೀ, ರಂಗಜ್ಜಿ, ನಾಗಲಕ್ಷ್ಮಿ, ವೆಂಕಟಲಕ್ಷ್ಮಿ, ತಾಯಿ ಸಾಹೇಬ, ಅಪ್ಪಾ ಸಾಹೇಬ, ಶಂಭು, ಮೂಸಾ, ಆನಂದರಾಯರು- ಯಾರೂ ತಮಗೆ ತಾವೇ ಶ್ರೇಷ್ಠರೂ ಅಲ್ಲ. ಖಳರೂ ಅಲ್ಲ. ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಒತ್ತಡಗಳ ಉತ್ಪನ್ನಗಳು.’ ಈ ಅನುಭೂತಿ ವಿಶೇಷವಾದದ್ದು. ಈ ಕಾರಣದಿಂದ ಅವರು ಚಿತ್ರ ನಿರೂಪಣೆಯಲ್ಲಿ, ಮಾನವೀಯ ಕಾಳಜಿಗಳ ಶೋಧನೆಯಲ್ಲಿ ಸತ್ಯಜಿತ್ ರೇ ಅವರಿಗೆ ಹತ್ತಿರವೆನಿಸುತ್ತಾರೆ.

ಒಟ್ಟಾರೆಯಾಗಿ ತಮ್ಮ ಹದಿನಾಲ್ಕು ಕಥಾಚಿತ್ರ ಒಂದು ಟೆಲಿ ಚಿತ್ರ ಮತ್ತು ಒಂದು ಆರಂಭದ ಕಿರುಚಿತ್ರದ ಬಗ್ಗೆ ಅವರು ಹೇಳಿರುವ ಅಭಿಪ್ರಾಯ ಮಾಡಿರುವ ಚರ್ಚೆಗಳು ಇಡಿಯಾಗಿ ಸಿನೆಮಾ ಮೀಮಾಂಸೆಯೊಂದನ್ನು ಕಟ್ಟಿಕೊಡುತ್ತವೆ. ಜಾಗತಿಕ ಸಿನೆಮಾ, ಜಗತ್ತಿನ ಸಿನೆಮಾ ಆಚಾರ್ಯರ ಕೃತಿಗಳು, ಭಾರತೀಯ ಸಿನೆಮಾಗಳ ಹಿನ್ನೆಲೆಯಲ್ಲಿ ತಮ್ಮ ಚಿತ್ರಗಳ ಬಗ್ಗೆ ವ್ಯಕ್ತಪಡಿಸಿರುವ ಖಚಿತವಾದ ನಿಲುವು ಮತ್ತು ಸ್ಪಷ್ಟವಾದ ವಿಚಾರಗಳಿಂದ ಕೃತಿ ಆಕರ್ಷಿಸುತ್ತದೆ. ಇಲ್ಲಿ ಕಾಸರವಳ್ಳಿ ಅವರು ತಮ್ಮ ಸಿನೆಮಾಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಚರ್ಚಿಸುತ್ತಾರೆ. ಸಿನೆಮಾದ ರಚನೆ, ಭಾಷೆ ಅದರ ವ್ಯಾಕರಣ, ಸಿನೆಮಾ ಬೆಳವಣಿಗೆ, ಸಿನೆಮಾ ಮತ್ತು ವಿಮರ್ಶೆಯ ನಡುವಿನ ಸಂಬಂದ, ಹಿನ್ನೆಲೆ ಸಂಗೀತ, ಸಿನೆಮಾ ಪ್ರಯಾಣದಲ್ಲಿ ತಮ್ಮ ಸ್ಮೃತಿಯಲ್ಲಿ ನಿಂತ ನೆನಪುಗಳನ್ನು ಆಪ್ತವಾಗಿ ನಿರೂಪಿಸಿದ್ದಾರೆ. ಒಂದು ಮೂಲಕೃತಿಯನ್ನು ತೆರೆಗೆ ಅಳವಡಿಸುವಾಗ ನಿರ್ದೇಶಕ ಎದುರಿಸುವ ಸವಾಲುಗಳು, ಅದನ್ನು ಕಥನರೂಪಕ್ಕೆ ಒಗ್ಗಿಸಲು ಮಾಡಿಕೊಳ್ಳಬೇಕಾದ ಅನಿವಾರ್ಯ ಬದಲಾವಣೆಗಳು ಮತ್ತು ಒಂದು ಕಲಾಕೃತಿ ಮೂಲಕೃತಿಯ ಆಶಯಕ್ಕಿಂತ ಭಿನ್ನವಾಗಿ ಅದು ವಿಸ್ತರಿಸುವ ಸೊಬಗನ್ನು ವಿವರಿಸಿರುವುದು ಸಿನೆಮಾ ಬಗೆಗಿನ ಮೀಮಾಂಸೆಯಾಗಿ ಪರಿವರ್ತನೆಯಾಗಿದೆ. ಸಿನೆಮಾಗಳನ್ನು ನೋಡುವ ಆಸಕ್ತಿಯನ್ನು ಮೀರಿ ಸಿನೆಮಾದ ಬಗ್ಗೆ ತುಡಿಯುವರೆಲ್ಲರೂ ಅವಶ್ಯವಾಗಿ ಓದಬೇಕಾದ ಕೃತಿ ಇದು.

ತಾವು ಎಚ್ಚರದಿಂದ, ತಾತ್ವಿಕ ಸ್ಪಷ್ಟತೆಯಿಂದ ಚಿತ್ರಗಳನ್ನು ರೂಪಿಸಲು ಮಾಡಿದ ಪ್ರಯತ್ನಗಳೂ ಎಲ್ಲ ಕಾಲದಲ್ಲಿಯೂ ಯಶಸ್ವಿಯಾಗದ ಅಥವಾ ತಮ್ಮ ನಿರೀಕ್ಷೆಗೆ ತಕ್ಕಂತೆ ಚಿತ್ರ ಅರಳದೇ ಹೋದ ಅನೇಕ ಪ್ರಕರಣಗಳನ್ನು ಸಹ ಗಿರೀಶ್ ಈ ಸಂವಾದದಲ್ಲಿ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ತಮ್ಮ ವಿಫಲತೆ, ಲೋಪಗಳು. ನಿರೀಕ್ಷಿತ ಮಟ್ಟಕ್ಕೆ ಬಾರದ ಫಲಿತಾಂಶಗಳಿಗೆ ತಮ್ಮ ನಿರ್ಧಾರಗಳು, ಚಿತ್ರ ನಿರ್ಮಿತಿಯ ಮಿತಿಗಳು ಹೇಗೆ ಕಾರಣವಾಯಿತೆಂದು ಹೇಳಿದರೂ, ಹೊಣೆಗಾರಿಕೆಯನ್ನು ಅನ್ಯರ ಮೇಲೆ ಹೇರುವುದಿಲ್ಲ. ಆದರೆ ಸಿನೆಮಾ ವಿದ್ಯಾರ್ಥಿಗಳಿಗೆ ಇದೊಂದು ಕಲಿಕೆಯ ಪಾಠವೂ ಆಗಬಹುದು.

ಇದನ್ನು ಓದಿದ್ದೀರಾ?: ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ

ಇಲ್ಲಿನ ಚರ್ಚೆ ಅವರ ಹದಿನಾರು ಕೃತಿಗಳಿಗೆ ಸೀಮಿತವಾಗಿದೆ. ಅವರು ನಿರ್ದೇಶಿಸಿದ ಒಂದು ಟಿವಿ ಧಾರಾವಾಹಿ, ಪ್ರಶಸ್ತಿ ವಿಜೇತ ಮೂರು ಸಾಕ್ಷ್ಯ ಚಿತ್ರಗಳ ಬಗೆಗೂ ಚರ್ಚೆ ಇದ್ದರೆ ಪ್ರದರ್ಶನ ಕಲೆಯ ಭಿನ್ನ ಭಿನ್ನ ಮಾದರಿಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವಾಗ ಮಾಡಿಕೊಂಡ ಸಿದ್ಧತೆ ಇತ್ಯಾದಿಗಳ ಬಗ್ಗೆಯೂ ಒಂದು ಒಳನೋಟ ದೊರೆತು ಕೃತಿಗೊಂದು ಸಮಗ್ರತೆ ಸಿಗುತ್ತಿತ್ತೇನೋ ಅನಿಸುತ್ತದೆ. ಆದರೆ ಕೃತಿಯ ಪುಟಗಳನ್ನು ಮಿತಿಗೊಳಿಸಬೇಕಾದ ಕಾರಣದಿಂದ ಅವುಗಳನ್ನು ಕೈಬಿಡಬೇಕಾಯಿತೆಂದು ಅವರು ಹೇಳಿದ್ದಾರೆ

ಇನ್ನು ಸಂವಾದ ನಡೆಸಿದ ಗೋಪಾಲಕೃಷ್ಣ ಪೈ ಮತ್ತು ಗಿರೀಶ್ ಕಾಸರವಳ್ಳಿ ಅವರು ಇಲ್ಲಿ ಬಳಸಿರುವ ಭಾಷೆಯ ಲಾಲಿತ್ಯವನ್ನು ಓದಿಯೇ ಸವಿಯಬೇಕು. ಪಾರಿಭಾಷಿಕ ಪದಗಳ ಭಾರವಿಲ್ಲದೆ, ಪಠ್ಯಪುಸ್ತಕದ ನೀರಸ ಶೈಲಿಯನ್ನು ಬಿಟ್ಟು ಒಂದು ಮೀಮಾಂಸೆಯನ್ನು ಸುಲಲಿತ ಓದನ್ನಾಗಿ, ಆಸಕ್ತಿದಾಯಕವಾಗಿ ಹೇಗೆ ಕಟ್ಟಬಹುದು ಎಂಬುದಕ್ಕೆ ಬಿಂಬ-ಬಿಂಬನ ಒಂದು ಮಾದರಿ. ನಿರ್ದೆಶಕರ ಸರಣಿಯೊಂದನ್ನು ಕನ್ನಡ ಭಾಷೆಯಲ್ಲಿಯೇ ಮೊದಲ ಬಾರಿಗೆ ರೂಪಿಸಿದ ಇಬ್ಬರಿಗೂ ಅಭಿನಂದನೆಗಳು ಸಲ್ಲಬೇಕು. ಏಕೆಂದರೆ ಇದು ಭಾಷೆ ಮತ್ತು ಸಂಸ್ಕೃತಿಗಾದ ಲಾಭ. ಬೇರೆ ಬೇರೆ ಕ್ಷೇತ್ರದ ಪರಿಭಾಷೆಗಳು ಕನ್ನಡಕ್ಕೆ ಬಂದಾಗ ಭಾಷೆಯ ಕಸುವು ಹೆಚ್ಚುತ್ತದೆ. ಕನ್ನಡವನ್ನು ಬೆಳೆಸುವ ಇಂಥ ಪ್ರಯತ್ನಗಳು ಹೆಚ್ಚಾಗಬೇಕು. ಇಂಥ ಕೃತಿಯ ಪ್ರಕಟಣೆಗೆ ಮುಂದಾದ ವೀರಲೋಕ ಪ್ರಕಾಶನಕ್ಕೂ ಅಭಿನಂದನೆಗಳು ಸಲ್ಲಬೇಕು.

(ಬಿಂಬ-ಬಿಂಬನ-ಕಾಸರವಳ್ಳಿ ಚಿತ್ರಗಳ ಸಂಕಥನ, ಬೆಲೆ ರೂ. 350)

WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಇಂದಿನ ಸಮಾಜಕ್ಕೆ ವಿದ್ಯಾರ್ಥಿ ರಾಜಕೀಯ ಸಂಘಟನೆಗಳ ಅವಶ್ಯಕತೆ ಇದೆಯೇ?

ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ...

Download Eedina App Android / iOS

X