ಸರ್ಕಾರವು ಮಾನಸಿಕ ಅಸ್ವಸ್ಥರ ಆರೈಕೆಗಾಗಿ 2006ರಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ಮಾನಸದಾರ’ ಎಂಬ ಹಗಲು ಆರೈಕೆ ಕೇಂದ್ರವನ್ನು ಸ್ಥಾಪಿಸಿತು. ಅದರಂತೆ, ಕೊಡಗು ಜಿಲ್ಲೆ ಮಡಿಕೇರಿಯಲ್ಲಿದ್ದು ಸಾರ್ವಜನಿಕವಾಗಿ ಯಾವುದೇ ಮಾಹಿತಿ, ಸೇವೆ ಲಭ್ಯತೆ ಇರುವುದಿಲ್ಲ. ಇದರಿಂದಾಗಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಎಸ್ಡಿಪಿಐ ಮುಖಂಡರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ತನಿಖೆ ನಡೆಸುವಂತೆ ದೂರು ಸಲ್ಲಿಸಿದರು.
ಜಿಲ್ಲೆಯ ಸಾರ್ವಜನಿಕರಿಗಾಗಲಿ, ಅಸ್ವಸ್ಥ ಮನೋ ರೋಗಿಗಳ ಪೋಷಣೆಯಲ್ಲಿ ತೊಡಗಿಕೊಂಡಿರುವ ಪಾಲಕರಿಗಾಗಲಿ ಈ ಯೋಜನೆಯ ಮಾಹಿತಿ ಇಲ್ಲ. ಜಿಲ್ಲೆಯ ಕೇಂದ್ರ ಭಾಗವಾದ ಮಡಿಕೇರಿಯ ರಾಣಿ ಪೇಟೆಯಲ್ಲಿ ವಿಶ್ವನಾಥ್ ಎಂಬುವವರು ಸದ್ದಿಲ್ಲದೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿರುತ್ತದೆ. ಮಾನಸಿಕ ಕಾಯಿಲೆಯುಳ್ಳ ರೋಗಿಗಳ ಆರೈಕೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸ್ನೇಹಶ್ರಯ ಯೂಥ್ ಟ್ರಸ್ಟ್ ಮತ್ತು ಐಶ್ವರ್ಯ ಚಾರಿಟೇಬಲ್ ಟ್ರಸ್ಟ್ ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
ಈ ಯೋಜನೆಯ ಪ್ರಕಾರ ಸರಿಸುಮಾರು 40 ಜನ ಮನೋರೋಗಿಗಳು ನಾಲ್ಕು ಜನ ಸಿಬ್ಬಂದಿಗಳು ಸುಸರ್ಜಿತ ಕಟ್ಟಡದೊಂದಿಗೆ ಕಾರ್ಯನಿರ್ವಹಿಸಬೇಕಾಗಿರುತ್ತದೆ. ವಿಪರ್ಯಾಸವೆಂದರೆ ಇಲ್ಲಿ ಯಾವುದೇ ವೃತ್ತಿಪರ ಸಿಬ್ಬಂದಿಗಳಿಲ್ಲ. ಒಬ್ಬ ಅಡುಗೆ ಸಹಾಯಕ ಹಾಗೂ ಕೇವಲ 2 ರಿಂದ 3ಜನ ಬುದ್ಧಿಮಾಂದ್ಯ ಮಕ್ಕಳ ಹಾಜರಾತಿಯೊಂದಿಗೆ ದಿನ ಕಳೆಯುತ್ತಾ, ಮಾನಸಿಕ ಆರೋಗ್ಯ ಕಾಯಿದೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿದೆ.
ಆರೈಕೆ ಕೇಂದ್ರವನ್ನು ನಿರ್ವಹಿಸಲು ಸರಕಾರದಿಂದ ವಾರ್ಷಿಕವಾಗಿ ಲಕ್ಷಾಂತರ ಹಣವನ್ನು ಆರೋಗ್ಯ ಇಲಾಖೆ ನೀಡುತ್ತಿದೆ. ಆದರೆ, 2 ರಿಂದ 3 ಫಲಾನುಭವಿಗಳನ್ನಿಟ್ಟುಕೊಂಡು ಪ್ರತಿ ತಿಂಗಳಿಗೆ ಸರಿಸುಮಾರು 20 ರಿಂದ 30 ಫಲಾನುಭವಿಗಳ ಹಾಜರಾತಿಯನ್ನು ತೋರಿಸಿ, ಅವರಿಗೆ ತಗಲುವ ವೆಚ್ಚವನ್ನು ಸಂಸ್ಥೆಯ ಕಾರ್ಯನಿರ್ವಾಹಕ ಹಣ ಮಾಡುತ್ತಿದ್ದಾರೆ. ಇದಲ್ಲದೆ, 4 ಜನ ವೃತ್ತಿಪರ ಸಿಬ್ಬಂದಿಗಳು ಕೂಡ ಈ ಯೋಜನೆಯಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಆದರೆ, ಕೇವಲ ಒಬ್ಬ ಅಡುಗೆ ಸಹಾಯಕರನ್ನು ನೇಮಿಸಿ ಉಳಿದ ಸಿಬ್ಬಂದಿಗಳ ವೇತನವನ್ನು ಕೂಡ ದುರುಪಯೋಗ ಮಾಡುತ್ತಿರುವುದಾಗಿ ಗಂಭೀರ ಆರೋಪ ಮಾಡಿರುತ್ತಾರೆ.
ಸಂಸ್ಥೆಯಿಂದ ₹2,000 ರೂಪಾಯಿ ಪಿಂಚಣಿ ನೀಡಲಾಗುವುದು ಎಂದು ಮಡಿಕೇರಿ ತಾಲೂಕಿಗೆ ಸಂಬಂಧಪಟ್ಟ ಮಾನಸಿಕ ಅಸ್ವಸ್ಥರ ಪಾಲಕರಿಂದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಗಳನ್ನು ಪಡೆದು ಅವರ ಹೆಸರುಗಳನ್ನು ಫಲಾನುಭವಿಗಳು ಎಂದು ನೋಂದಾಯಿಸಿಕೊಂಡು ಅವರ ಹಾಜರಾತಿಯನ್ನು ದಿನನಿತ್ಯ ತೋರಿಸಿ ಅವರಿಗೆ ತಗಲುವ ಮಾಸಿಕ ವೆಚ್ಚವನ್ನು
ದುರುಪಯೋಗಪಡಿಸಿರುವುದು ವಿಷಾದನೀಯ ಸಂಗತಿ.
ಆರೋಗ್ಯ ಇಲಾಖೆಯ ವಾಹನದಲ್ಲೇ ಪ್ರತಿ ದಿನ ಇಬ್ಬರು ಫಲಾನುಭವಿಗಳನ್ನು ಕರೆದೋಯ್ದು ತಿಂಗಳಿಗೆ 20 ರಿಂದ 30 ಹಾಜರಾತಿಯನ್ನು ತೋರಿಸುತ್ತಿರುವುದು, ಇಲಾಖೆಯ ಯಾವೊಬ್ಬ ಅಧಿಕಾರಿಯ ಗಮನಕ್ಕೂ ಬಾರದಿರುವುದು ಅತ್ಯಂತ ಬೇಸರ ಸಂಗತಿ. ಹಾಗೂ ಆರೋಗ್ಯ ಇಲಾಖೆಯಿಂದ ಈ ಯೋಜನೆಯನ್ನು ಸತತ ನಾಲ್ಕು ವರ್ಷಗಳಿಂದ ಈ ಸಂಸ್ಥೆಗೆ ನೀಡುತ್ತಿದ್ದು ಯಾವುದೇ ಟೆಂಡರ್ ಗಳನ್ನು ಕರೆಯದೆ ಒಳ ಒಪ್ಪಂದ ನಡೆಸಿಕೊಂಡು ಬರುತ್ತಿದೆ. ಅಲ್ಲದೆ, ಈ ಆರೈಕೆ ಕೇಂದ್ರವು ರಾತ್ರಿ ವೇಳೆಗೆ ನಿರ್ವಾಹಕನ ವಾಸದ ಮನೆಯಾಗಿ ಬದಲಾಗುತ್ತದೆ. ಈ ಎಲ್ಲಾ ವಿಚಾರವೂ ಯಾವುದೇ ಇಲಾಖೆಗಳ ಗಮನಕ್ಕೆ ಬಂದಿರುವುದಿಲ್ಲ.
ಮಾನಸಿಕ ಆರೋಗ್ಯ ಕಾಯ್ದೆ, ಮಾನವ ಹಕ್ಕುಗಳ ಕಾಯ್ದೆ, ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆ ಉಲ್ಲಂಘನೆ ಆಗುತ್ತಿರುವುದು ಬಹಳ ಸ್ಪಷ್ಟವಾಗಿ ಕಾಣಬಹುದು. ಆದ್ದರಿಂದ, ಇಂತಹ ಭ್ರಷ್ಟ ಸಂಸ್ಥೆಗಳನ್ನು ಗುರುತಿಸಿ ಸೂಕ್ತ ತನಿಖೆಗೆ ಒಳಪಡಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಿಲ್ಲೆಯಿಂದ ಹೊರ ಹಾಕಿದ್ದಲ್ಲಿ ಮಾತ್ರ ಆರೋಗ್ಯ ಇಲಾಖೆಯ ‘ಎಲ್ಲರಿಗೂ ಆರೋಗ್ಯ- ಎಲ್ಲಡೆಯೂ ಆರೋಗ್ಯ’ ಎಂಬ ಘೋಷ ವಾಕ್ಯವು ಮನೋರೋಗಿಯ ಆರೈಕೆದಾರರ ಪಾಲಿಗೆ ಲಭ್ಯವಾಗಲಿದೆ ಎಂದು ಮುಖಂಡರುಗಳು ಜಿಲ್ಲಾಧಿಕಾರಿಯವರಲ್ಲಿ ಮಾಹಿತಿ ನೀಡಿರುತ್ತಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಜಾನಪದ ತವರೂರು ಚಾಮರಾಜನಗರದಲ್ಲಿಲ್ಲ ಈ ಬಾರಿಯ ದಸರಾ; ಕಲಾವಿದರ ಮರೆತ ಸರ್ಕಾರ
ನಿಯೋಗದಲ್ಲಿ ಎಸ್ಡಿಪಿಐ ನಗರಸಭೆ ಸದಸ್ಯರಾದ ಅಮೀನ್ ಮೊಹಿಸಿನ್, ಮನ್ಸೂರ್ ಅಲಿ, ನಗರಾಧ್ಯಕ್ಷ ಮಹಮ್ಮದ್ ಅಲಿ, ನಗರ ಪ್ರಧಾನ ಕಾರ್ಯದರ್ಶಿ ಉಬೈದ್ ಇದ್ದರು.