ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಾಶವಾಗಿದ್ದು, ರೈತರಿಗೆ ಎಕರೆಗೆ ₹25,000 ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ರೈತರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಪ್ರಕಾಶ್ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯಕ್ಕೆ ಆಗಮಿಸಿದ ರಾಷ್ಟ್ರೀಯ ರೈತರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಮುಂಗಾರು ಬೆಳೆಗಳಾದ ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಜಲಾವೃತವಾಗಿ ಹಾನಿಗೊಳಗಾದ ಬಗ್ಗೆ ತಹಶೀಲ್ದಾರರ ಗಮನ ಸೆಳೆದರು.
ರಾಜ್ಯ ಮಹಿಳಾ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, “ತೊಗರಿ ಬೆಳೆ ನೆಟೆ ರೋಗದಿಂದ, ಹತ್ತಿ ಬೆಳೆಗೆ ತಾಮ್ರ ರೋಗ ಹಾಗೂ ಕಾಂಡ ಕೊರೆಯುವ ಹುಳದ ಕಾರಣ ಹಾಗೂ ಮೆಕ್ಕೆಜೋಳ, ಹೆಸರು, ಉದ್ದು, ಅಲಸಂದಿ, ಶೇಂಗಾ, ಉಳ್ಳಾಗಡ್ಡಿ ಬೆಳೆಗಳು ಜಲಾವೃತವಾಗಿ ಸಂಪೂರ್ಣ ಹಾಳಾಗಿವೆ. ಬಿತ್ತಿದ ಬೆಳೆ ನಾಶದಿಂದ ಈಗ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ತಹಶೀಲ್ದಾರ್ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಉದ್ಯೋಗ ಮಾಹಿತಿ | ಕೆಎಂಎಫ್ ಶಿಮುಲ್‌ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್, “ತಾಲೂಕಿನಲ್ಲಿ ಈಗಾಗಲೇ ಹಾನಿಗೊಳಗಾದ ಬೆಳೆಯ ಸಮೀಕ್ಷೆ ಮಾಡಲಾಗಿದೆ. ಈಗ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು” ಎಂದು ಭರವಸೆ ನೀಡಿದರು.
ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸಂಗಮೇಶ ಹುಣಸಗಿ, ಹಣಮಂತರಾಯ ಪೋ. ಪಾಟೀಲ, ಅಶೋಕ ನಾಯ್ಕೋಡಿ, ಆಕಾಶ ಹುಲಸೂರ, ಅಕ್ಬರ್ ಅರಬ್, ಬಸವರಾಜ ಮಾರಾಠಿ, ಗಣೇಶ ಕನ್ನಳ್ಳಿ, ಶಕೀರ ಹೆಬ್ಬಳ್ಳಿ, ಅಡಿವೆಪ್ಪ ಬನ್ನಿಕಟ್ಟಿ, ಪ್ರವೀಣ ಹರಸುರ, ಶಿವಾನಂದ ಹೂಲ್ಲಾಸೂರ, ಅಂಬಾಜಿ ಮರಾಠಿ, ಕಲ್ಲಪ್ಪ ಗೌಡ ಪಾಟೀಲ ಇದ್ದರು.