ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ದಸರಾ ಮಹೋತ್ಸವದ ಅಂಗವಾಗಿ ಉತ್ತನಹಳ್ಳಿ ಸಮೀಪದಲ್ಲಿ ಸೆ.23 ರಿಂದ ಜರುಗಲಿರುವ ಯುವದಸರಾ ಕಾರ್ಯಕ್ರಮದ ಸ್ಥಳವನ್ನು ಪರಿಶೀಲನೆ ಮಾಡಿದರು.
ಕಾರ್ಯಕ್ರಮದ ಆಯೋಜನೆಯ ರೂಪುರೇಷೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಕಳೆದ ಬಾರಿಯಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಬೇಕು. ಅತೀ ಹೆಚ್ಚು ಜನರು ಸೇರುವ ಯುವ ದಸರಾದಲ್ಲಿ ಯಾವುದೇ ಅನಾನುಕೂಲವಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಸೂಚಿಸಿದರು. ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಯುವದಸರಾ ಕಾರ್ಯಕ್ರಮ ವೀಕ್ಷಣೆಗೆಂದು ಆಗಮಿಸುವ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕು ಎಂದು ತಿಳಿಸಿದರು.

ಯುವ ದಸರಾಗೆ ಸಹಸ್ರಾರು ಸಂಖ್ಯೆಯಲ್ಲಿ ಯುವಸಮೂಹ ಆಗಮಿಸಿ ಸಂಭ್ರಮಿಸುತ್ತಾರೆ. ಬಹುಮುಖ್ಯವಾಗಿ ಮಹಿಳೆಯರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ರಾತ್ರಿ ವೇಳೆ ಕಾರ್ಯಕ್ರಮ ನಡೆಯುವುದರಿಂದ ಎಲ್ಲಾ ಬಗೆಯ ಸೂಕ್ತ ಕ್ರಮ ಅನುಸರಿಸಬೇಕು. ಬೀದಿದೀಪದ ವ್ಯವಸ್ಥೆ, ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಥಳ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿ ಮಾರ್ಗದರ್ಶನ ಮಾಡಬೇಕು ಎಂದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಜಾನಪದ ತವರೂರು ಚಾಮರಾಜನಗರದಲ್ಲಿಲ್ಲ ಈ ಬಾರಿಯ ದಸರಾ; ಕಲಾವಿದರ ಮರೆತ ಸರ್ಕಾರ
ಸ್ಥಳ ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಆರ್. ರಕ್ಷಿತ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.