ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂಬ ಆಗ್ರಹ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಈ ಹಿನ್ನೆಲೆ ಮುದ್ದೇಬಿಹಾಳ ಪಟ್ಟಣದಲ್ಲಿ ಇಂದು ಭಾರೀ ಪ್ರತಿಭಟನೆ ನಡೆಯಲಿದೆ ಎಂದು ದಲಿತ ಮುಖಂಡ ಹರೀಶ ನಾಟೆಕರ ಹೇಳಿದರು.
ತಾಲೂಕಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ದಸಂಸ ಸಂಘಟನೆ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ದಲಿತ ಸಮುದಾಯದ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ. ಯತ್ನಾಳರು ದಸರಾ ಮಹೋತ್ಸವದ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕರನ್ನು ಆಹ್ವಾನಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಅವರು ಮಾಡಿದ ಹೇಳಿಕೆಗಳು ಸಂವಿಧಾನದ ಮೂಲಭೂತ ತತ್ವಗಳ ವಿರುದ್ಧವಾಗಿವೆ. ʼದಲಿತ ಸಮುದಾಯದ ಮಹಿಳೆಯರಿಗೆ ಅವಕಾಶವಿಲ್ಲʼ ಎಂಬ ಮಾತುಗಳಿಂದ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಿದ್ದು, ಸಮಾನತೆಯ ಸಿದ್ಧಾಂತವನ್ನು ಅವಹೇಳನಗೊಳಿಸುವಂತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕಾಶ ಸರೊರು ಮಾತನಾಡಿ, “ವಿಶ್ವಗುರು ಬಸವಣ್ಣನವರ ಕುರಿತು ಅಪಮಾನಕಾರಿ ಪದಗಳನ್ನು ಬಳಸಿರುವ ಉದಾಹರಣೆಗಳನ್ನು ಕೂಡ ಸಂಘಟನೆಯವರು ಮುಂದಿಟ್ಟಿದ್ದಾರೆ. “ಸಾಹಿತಿಗಳು ಮತ್ತು ಹೋರಾಟಗಾರರ ವಿರುದ್ಧ ತಿರಸ್ಕಾರವಾಗಿ ಮಾತನಾಡುವುದು ಯತ್ನಾಳರ ಚಾಳಿ, ಇವರ ವಿರುದ್ಧ ಸಾಕಷ್ಟು ಪ್ರಕರಣಗಳಿದ್ದರೂ ಜಿಲ್ಲಾಡಳಿತ ಮೌನ ವಹಿಸಿರುವುದು ಕಳವಳಕಾರಿ. ರಾಜ್ಯಪಾಲರು ಕೂಡಲೇ ಯತ್ನಾಳರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ. ಸಂವಿಧಾನದ ಗೌರವವನ್ನು ಕಾಪಾಡಬೇಕೆಂಬ ಆಗ್ರಹ ವ್ಯಕ್ತಪಡಿಸಲಾಗಿದೆ. ಜೊತೆಗೆ, ದಲಿತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕೆಂಬ ಬೇಡಿಕೆ ಮುಂದಿರಿಸಲಾಗಿದೆ. ಆಗ್ರಹಗಳನ್ನು ಪೂರೈಸದಿದ್ದಲ್ಲಿ, ಮುದ್ದೇಬಿಹಾಳ ಪಟ್ಟಣದಲ್ಲಿ ಶಾಸಕ ಯತ್ನಾಳರ ಪ್ರತಿಕೃತಿ ದಹಿಸಿ ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಗೆ ನೀಡಿದರು.
ಇದನ್ನೂ ಓದಿ: ವಿಜಯಪುರ | ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ; ಆಸ್ಪತ್ರೆ ಎದುರೇ ಹೆರಿಗೆ
ಪತ್ರಿಕಾಗೋಷ್ಠಿಯಲ್ಲಿ ದೇವರಾಜ ಹಂಗರಗಿ, ಪ್ರಶಾಂತ ಕಾಳೆ, ಸಂಗಮೇಶ ಲೇಬಗೇರಿ, ಆನಂದ ಮುದೂರ, ಬಸವರಾಜ ಚಲವಾದಿ, ಸಿದ್ದು ಚಲವಾದಿ, ಮಂಜುನಾಥ ತಿಳಿಗೋಳ, ಪರಸುರಾಮ ಮುರಾಳ ಸೇರಿದಂತೆ ಮತ್ತಿತರರು ಹಾಜರಿದ್ದರು.