ರಾಜ್ಯ ಸರಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಳವಾರ ಜನಾಂಗದವರು ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ಅನುಬಂಧ ‘ಸಿ’ ಕ್ರಮ ಸಂಖ್ಯೆ 38 ರಲ್ಲಿರುವ ಕೋಡ್ ಸಂಖ್ಯೆ 13ರಲ್ಲಿ ಬರುವಂತೆ ಮುಖ್ಯ ಜಾತಿ ತಳವಾರ ಎಂದು ಕಡ್ಡಾಯವಾಗಿ ಬರೆಯಲು ತಳವಾರ ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಶರಣಪ್ಪ ಸುಣಗಾರ ಮನವಿ ಮಾಡಿದರು.
ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಖಾಸಗಿ ಹೋಟೆಲ್ ಸಭಾಭವನದಲ್ಲಿ ತಳವಾರ ಸಮಾಜ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, “ನಮ್ಮ ಸಮಾಜಕ್ಕೆ ಇವತ್ತಿಗೂ ರಾಜ್ಯದಲ್ಲಿ ಯಾವುದೇ ಕ್ಷೇತ್ರ ಅಥವಾ ರಂಗದಲ್ಲಾಗಲಿ ದೊರೆತ ಸಹಾಯ ಸಹಕಾರದ ಬಗ್ಗೆ ಗೊತ್ತಿದೆ. ಇಂದು ರಾಜ್ಯ ರಾಜಕೀಯ ಬೆಳವಣಿಗೆ ಮತ್ತು ಜಾಗತಿಕ ಬೆಳವಣಿಗೆಯಲ್ಲಿ ಎಲ್ಲಾ ಸಮುದಾಯಗಳು ಬದಲಾವಣೆ ಮತ್ತು ಪರಿವರ್ತನೆಯಾದಂತೆ ನಮ್ಮ ಸಮಾಜ ಬದಲಾವಣೆಯಾಗುವ ಅವಶ್ಯಕತೆ ಇದೆ. ನಮ್ಮ ಸಮಾಜಕ್ಕೆ ಇತಿಹಾಸವಿದೆ. ಇತಿಹಾಸ ಗೊತ್ತಿರದ ವ್ಯಕ್ತಿ ಇತಿಹಾಸ ಸೃಷ್ಟಿಸಲಾರ. ಹಾಗಾಗಿ ಸೆ.22 ರಿಂದ ನಡೆಯುವ ಸಮೀಕ್ಷೆಯಲ್ಲಿ ಪರಿಶಿಷ್ಟ ಪಂಗಡ ಪಟ್ಟಿ ಅನುಬಂಧ ‘ಸಿ’ ಕಾಲಂ ಸಂಖ್ಯೆ 9 ಕ್ರಮ ಸಂಖ್ಯೆ 38.13 ರಲ್ಲಿ ಮುಖ್ಯ ಜಾತಿ ತಳವಾರ ಎಂದು, ಕಾಲಂ ಸಂಖ್ಯೆ 10 ಉಪಜಾತಿ ಅನ್ವಯವಾಗುವುದಿಲ್ಲವೆಂದು, ಕಾಲಂ ಸಂಖ್ಯೆ 11ರಲ್ಲಿ ತಂತ್ರಾಂಶದಲ್ಲಿ ಸಮಾನಾರ್ಥಕ ಪದಗಳಿದ್ದಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಕಾಲಂ ಸಂಖ್ಯೆ 12 ಪ.ಪಂ ಜಾತಿ ಪ್ರಮಾಣ ಪತ್ರ ಪಡೆದಿದ್ದು ಹೌದು ಎಂದು, ಕಾಲಂ ಸಂಖ್ಯೆ 30 ಕುಲಕಸಬು ತಳವಾರ (64) ಎಂದು ಬರೆಯಿಸಬೇಕು” ಎಂದು ತಿಳಿಸಿದರು.
ತಾಲೂಕು ತಳವಾರ ಸೇವಾ ಸಮಿತಿ ಅಧ್ಯಕ್ಷ ಧರ್ಮರಾಜ ವಾಲಿಕಾರ ಮಾತಾನಾಡಿದ, “ನಮ್ಮ ಸಮಾಜ ಸುಮಾರು ವರ್ಷಗಳಿಂದ ಅನೇಕ ಕಾರಣಗಳಿಂದ ಅತ್ಯಂತ ಹೀನಾಯ ಪರಿಸ್ಥಿತಿ ಅನುಭವಿಸಿದ್ದೆವೆ. ಆದರೆ ಈಗ ಸಿಕ್ಕ ಸದೈವದ ಅವಕಾಶದಲ್ಲಿ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಂಡು ಸಮೀಕ್ಷೆ ಯಶಸ್ವಿಗೊಳಿಸಬೇಕು” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ಪರಿಹಾರ ನೀಡದೇ ಭೂ ಕಬಳಿಕೆ ಮಾಡಿದ ಅಧಿಕಾರಿಗಳ ವಜಾಕ್ಕೆ ರೈತರ ಆಗ್ರಹ
ಸಮುದಾಯದ ಜಿಲ್ಲಾಧ್ಯಕ್ಷ ಪ್ರಕಾಶ ಸೊನ್ನದ, ಉಪಾಧ್ಯಕ್ಷ ಅನಿಲ ಜಮಾದಾರ ಮಾತನಾಡಿ, “ನಮ್ಮ ಸಮಾಜಕ್ಕೆ ಇದೊಂದು ಸುವರ್ಣ ಅವಕಾಶ. ಈ ಹಿಂದಿನ ಸಮೀಕ್ಷೆಯಲ್ಲಿ ನಡೆದ ತಪ್ಪುಗಳು ಈ ಸಮೀಕ್ಷೆಯಲ್ಲಿ ನಡೆಯದಂತೆ ಜಾಗರೂಕತೆಯಿಂದ ಪಾಲ್ಗೊಳ್ಳಬೇಕು. ಈ ಸಮೀಕ್ಷೆಯಲ್ಲಿ ತಳವಾರ ಸಮಾಜದ ಜನಾಂಗದವರು ಶಾಲೆಯಲ್ಲಿ ಬರೆದಿರುವ ಜಾತಿಗಳ ಬಗ್ಗೆ ಮಹತ್ವ ನೀಡದೆ, ಸಾರ್ವಜನಿಕ ಬದುಕಿನಲ್ಲಿ ನಮ್ಮನ್ನು ಹೇಗೆ ತಳವಾರ ಎಂದು ಕರೆಯುತ್ತಾರೆಯೋ..! ಹಾಗೆ ನಾವು ಮುಖ್ಯ ಜಾತಿ ತಳವಾರ ಎಂದು ನಮೂದಿಸಿಬೇಕು. ಈ ಸಮೀಕ್ಷೆಯಿಂದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯ ಹಾಗೂ ಸರ್ವ ಕ್ಷೇತ್ರದಲ್ಲೂ ಸಮುದಾಯ ಏಳಿಗೆ ಕಾಣಲು ಸಾಧ್ಯ” ಎಂದು ಹೇಳಿದರು.