ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ ರಕ್ಷಣೆಗೆ ಆಯೋಗ ನಿಂತಿದೆಯೇ? ಹಾಗಾದರೆ ಯಾಕೆ ಕೆಲವು ಮಹತ್ವದ ಮಾಹಿತಿಗಳನ್ನು ಮುಚ್ಚಿಡುತ್ತಿದೆ?
ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಮತಗಳ್ಳತನದ ಸಂಚು ನಡೆದಿರುವ ಸಂಗತಿ 2023ರಲ್ಲೇ ಬಯಲಾಯಿತು. ಸಿಐಡಿ ತನಿಖೆಗೂ ಒಪ್ಪಿಸಲಾಯಿತು. ಆದರೆ ಚುನಾವಣಾ ಆಯೋಗ ಅಗತ್ಯ ದಾಖಲೆಗಳನ್ನು ಒದಗಿಸದೆ ತನಿಖೆ ನಿಂತ ನೀರಾಯಿತು. ಈ ಬಗ್ಗೆ ‘ದಿ ಹಿಂದೂ’ ಪತ್ರಿಕೆ ಇತ್ತೀಚೆಗೆ ವಿಸ್ತೃತವಾಗಿ ವರದಿ ಮಾಡಿದ ಬಳಿಕ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಮತ್ತೊಮ್ಮೆ ‘ಮತಗಳ್ಳತನ’ ಕುರಿತು ಪತ್ರಿಕಾಗೋಷ್ಠಿ ನಡೆಸಿದರು. ಆಳಂದ ಕ್ಷೇತ್ರದಲ್ಲಿ ಆಗಿರುವ ಅಧ್ವಾನಗಳನ್ನು ಪ್ರಶ್ನಿಸಿದರು. ಸೂಕ್ತ ಉತ್ತರ ಕೊಡಬೇಕಾದ ಆಯೋಗ, ಅರೆಬರೆ ಸತ್ಯಗಳನ್ನು ಹೇಳಿತು. ಆಯೋಗವನ್ನು ಪ್ರಶ್ನಿಸಿದರೆ, ಬಿಜೆಪಿಯವರು ಹರಿಹಾಯ್ದರು. ಆಯೋಗಕ್ಕೂ ಬಿಜೆಪಿಗೂ ಸಂಬಂಧವೇನು ಎಂಬುದಕ್ಕೆ ಉತ್ತರ ಸಿಗಬೇಕಾಗಿದೆ.
ಆಳಂದದಲ್ಲಿ ನಡೆದದ್ದು ಅಕ್ಷರಶಃ ದೊಡ್ಡ ಮತಗಳ್ಳತನದ ಸಂಚು. ಯಾರೋ ಒಬ್ಬ ಇನ್ನೊಬ್ಬರ ಹೆಸರನ್ನು ಮತಪಟ್ಟಿಯಿಂದ ಅಳಿಸಿ ಹಾಕುವಂತೆ ಫಾರ್ಮ್ 7 ಅರ್ಜಿಗಳನ್ನು ಸಲ್ಲಿಸುತ್ತಾನೆ; ಮತ ಅಳಿಸಿ ಹಾಕಲು ನಮೂದಿಸಲ್ಪಟ್ಟ ವ್ಯಕ್ತಿಯ ಹೆಸರು, ಮತಚೀಟಿಯ ಸಂಖ್ಯೆ, ವಿಳಾಸ ಸರಿಯಾಗಿರುತ್ತದೆ; ಆದರೆ ಅರ್ಜಿಯಲ್ಲಿ ಹಾಕಿದ ಮೊಬೈಲ್ ನಂಬರ್ ಮಾತ್ರ ಯಾರದ್ದೋ ಆಗಿರುತ್ತದೆ. ಇಂತಹದೊಂದು ಷಡ್ಯಂತ್ರ ಬಯಲಾಗಿದ್ದೇ ಆಕಸ್ಮಿಕವಾಗಿ. ಬಿಎಲ್ಒ ಒಬ್ಬರು ತಮ್ಮ ಸಹೋದರನ ಹೆಸರಲ್ಲಿ ಬಂದಿರುವ ಅರ್ಜಿಯನ್ನು ಗಮನಿಸುತ್ತಾರೆ. ಸಹೋದರನ ಬಳಿ ವಿಚಾರಿಸಲಾಗಿ, ‘ನಾನು ಈ ರೀತಿಯ ಯಾವುದೇ ಅರ್ಜಿ ಸಲ್ಲಿಸಿಲ್ಲ. ಯಾರೋ ಅನ್ಯ ವ್ಯಕ್ತಿ ನಡೆಸಿರುವ ಪಿತೂರಿ ಇದು’ ಎಂದು ಹೇಳುತ್ತಾನೆ. ಈ ರೀತಿಯಲ್ಲಿ ಸಲ್ಲಿಕೆಯಾಗಿರುವ ಫಾರ್ಮ್ 7 ಅರ್ಜಿಗಳನ್ನು ಪರಿಶೀಲಿಸಬೇಕೆಂಬ ಆಗ್ರಹಗಳು ಬರುತ್ತವೆ. ಕಾಂಗ್ರೆಸ್ ನಾಯಕರಾದ ಬಿ.ಆರ್.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ನಿರಂತರ ಪ್ರಶ್ನಿಸಿದ ಪರಿಣಾಮವಾಗಿ ಆಯೋಗವು ಸತ್ಯಾಂಶ ತಿಳಿಯಲು ಮುಂದಾಗುತ್ತದೆ. ಸಲ್ಲಿಕೆಯಾಗಿರುವ 6,018 ಅರ್ಜಿಗಳಲ್ಲಿ ಕೇವಲ 24 ಅರ್ಜಿಗಳು ಮಾತ್ರ ಅಸಲಿಯಾಗಿದ್ದು 5,994 ನಕಲಿಯಾಗಿರುತ್ತವೆ. ‘ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್’ (NVSP), ‘ಮತದಾರರ ಸಹಾಯವಾಣಿ ಅಪ್ಲಿಕೇಶನ್’ (VHA) ಮತ್ತು ಚುನಾವಣಾ ಆಯೋಗದ ‘ಗರುಡ ಅಪ್ಲಿಕೇಶನ್’ ಮೂಲಕ ಈ ಅರ್ಜಿಗಳನ್ನು ಹಾಕಿರುವುದು ಗೊತ್ತಾಗುತ್ತದೆ. ಅಂತಿಮವಾಗಿ ಮತದಾರರ ಹಕ್ಕು ಉಳಿದರೂ, ಈ ಅರ್ಜಿಗಳನ್ನು ಹಾಕಿದ ಖದೀಮರು ಯಾರೆಂದು ಈವರೆಗೆ ಪತ್ತೆಯಾಗಿಲ್ಲ. ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ಈವರೆಗೆ 18 ಪತ್ರಗಳನ್ನು ಬರೆದು, ಉತ್ತರ ನಿರೀಕ್ಷಿಸಿ ಸುಸ್ತಾಗಿದ್ದಾರೆ.
ರಾಹುಲ್ ಗಾಂಧಿ ಅವರು ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಕೊಟ್ಟಿರುವ ಅರೆಬರೆ ಉತ್ತರಗಳನ್ನು ಗಮನಿಸಿದರೆ ಅನುಮಾನಗಳು ದಟ್ಟವಾಗುತ್ತವೆ. ಭಾರತೀಯ ಚುನಾವಣಾ ಆಯೋಗ ಮತ್ತು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ನೀಡಿರುವ ಸ್ಪಷ್ಟನೆಯನ್ನು ಗಮನಿಸಿ: ”ರಾಹುಲ್ ಗಾಂಧಿ ತಪ್ಪಾಗಿ ಭಾವಿಸಿರುವಂತೆ ಯಾವುದೇ ಸಾರ್ವಜನಿಕರು ಆನ್ಲೈನ್ನಲ್ಲಿ ಯಾವುದೇ ಮತವನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. 2018ರಲ್ಲಿ ಸುಭಾಷ್ ಗುತ್ತೇದಾರ್ (ಬಿಜೆಪಿ) ಮತ್ತು 2023ರಲ್ಲಿ ಬಿ.ಆರ್.ಪಾಟೀಲ್ (ಕಾಂಗ್ರೆಸ್) ಅವರು ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ. 2022ರ ಡಿಸೆಂಬರ್ನಲ್ಲಿ NVSP, VHA, ಗರುಡ ಅಪ್ಲಿಕೇಶನ್ಗಳ ಮೂಲಕ 6,018 ಫಾರ್ಮ್ 7 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯ ಅರ್ಜಿಗಳ ನೈಜತೆಯನ್ನು ಅನುಮಾನಿಸಿ, ಚುನಾವಣಾ ಆಯೋಗ ಪರಿಶೀಲಿಸಿದೆ. ಭಾರತದ ಚುನಾವಣಾ ಆಯೋಗ ನೀಡಿದ ಸೂಚನೆಯ ಮೇಲೆ, ಕರ್ನಾಟಕದ ಮುಖ್ಯಚುನಾವಣಾಧಿಕಾರಿಯವರು ತಮ್ಮ ಬಳಿ ಲಭ್ಯವಿರುವ ಎಲ್ಲ ಮಾಹಿತಿಯನ್ನು 06.09.2023 ರಂದು ಕಲಬುರಗಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಿದ್ದಾರೆ. ಫಾರ್ಮ್ ಉಲ್ಲೇಖ ಸಂಖ್ಯೆ, ಆಕ್ಷೇಪಣೆ ಸಲ್ಲಿಸಿದವರ ಹೆಸರು, ಮತದಾರರ ಗುರುತಿನ ಚೀಟಿ ಸಂಖ್ಯೆ, ಲಾಗಿನ್ ಮಾಡಲು ಬಳಸಿದ ಮೊಬೈಲ್ ಸಂಖ್ಯೆ, ಪ್ರಕ್ರಿಯೆಗಾಗಿ ಆಕ್ಷೇಪಣೆ ಸಲ್ಲಿಸಿದವರು ಒದಗಿಸಿದ ಮೊಬೈಲ್ ಸಂಖ್ಯೆ, ಸಾಫ್ಟ್ವೇರ್ ಅಪ್ಲಿಕೇಶನ್ ಮೀಡಿಯಾ, ಐಪಿ ವಿಳಾಸ, ಅರ್ಜಿದಾರರ ಸ್ಥಳ, ಫಾರ್ಮ್ ಸಲ್ಲಿಕೆ ದಿನಾಂಕ ಮತ್ತು ಸಮಯ ಸೇರಿದಂತೆ ಆಕ್ಷೇಪಣೆದಾರರ ವಿವರಗಳನ್ನು ಹಂಚಿಕೊಳ್ಳಲಾಗಿದೆ. ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಯವರು ಈಗಾಗಲೇ ತನಿಖಾ ಸಂಸ್ಥೆಗೆ ಯಾವುದೇ ಇತರ ಸಹಾಯ, ಮಾಹಿತಿ, ದಾಖಲೆಗಳನ್ನು ಒದಗಿಸುತ್ತಿದೆ.” -ಇದು ಆಯೋಗದಿಂದ ಬಂದಿರುವ ಪ್ರತಿಕ್ರಿಯೆ. ಆದರೆ ಸಿಐಡಿ ತನಿಖೆಯು ಬಯಸುತ್ತಿರುವ ವಿವರಗಳನ್ನು ಇಲ್ಲಿ ಉಲ್ಲೇಖಿಸಿಯೇ ಇಲ್ಲ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ನ್ಯಾಯಾಲಯದ ವಿವೇಕದ ಮುಂದೆ ಬಯಲಾದ ಬಿಜೆಪಿ ನಾಯಕರ ಅವಿವೇಕ
ಆನ್ಲೈನ್ನಲ್ಲಿ ಮತಗಳನ್ನು ಅಳಿಸಬಹುದೆಂದು ರಾಹುಲ್ ಗಾಂಧಿಯವರು ಹೇಳಿಯೇ ಇಲ್ಲ. ಆದರೆ ಮತಗಳನ್ನು ಅಳಿಸುವಂತೆ ಅರ್ಜಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು ಎಂಬುದು ಸ್ಪಷ್ಟ. 5994 ಮತದಾರರ ನಕಲಿ ಫಾರ್ಮ್ 7 ಅರ್ಜಿಗಳನ್ನು ತಿರಸ್ಕರಿಸಲಾಯಿತು, ಆದ್ದರಿಂದ ಮತಗಳನ್ನು ಉಳಿಸಲಾಗಿದೆ. ಬಿ.ಆರ್. ಪಾಟೀಲ್ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದರೆ ಈ ಮತಗಳನ್ನು ಅಳಿಸಲು ಮಾಡಿದ ಕ್ರಿಮಿನಲ್ ಪ್ರಯತ್ನವನ್ನು ತನಿಖೆ ಮಾಡಬಾರದು ಎಂದಲ್ಲ. ‘ನಾವಾಗಿಯೇ ತನಿಖೆ ಮಾಡಲು ಮುಂದಾದೆವು’ ಎಂಬಂತೆ ಚುನಾವಣಾ ಆಯೋಗ ಬಿಂಬಿಸಿಕೊಳ್ಳಲು ಹೊರಟಿದೆ. ಬಿ.ಆರ್. ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ 2023ರ ಫೆಬ್ರವರಿಯಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ನಂತರವಷ್ಟೇ ವಿಚಾರಣೆ ನಡೆಸಲಾಯಿತು. ಆಳಂದದ ಚುನಾವಣಾಧಿಕಾರಿ ಮತ್ತು ಕಲಬುರಗಿಯ ಸಹಾಯಕ ಆಯುಕ್ತೆ ಮಮತಾ ದೇವಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, “ಆಳಂದ ವಿಧಾನಸಭಾ ಕ್ಷೇತ್ರದ 256 ಮತಗಟ್ಟೆಗಳಲ್ಲಿ 6670 ಮತಗಳನ್ನು ಅಕ್ರಮವಾಗಿ ಅಳಿಸಲಾಗಿದೆ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರು ಇಸಿಐಗೆ ದೂರು ನೀಡಿದ್ದಾರೆ. ಅದರ ಆಧಾರದ ಮೇಲೆ ಕಲಬುರಗಿ ಜಿಲ್ಲೆಯ ಉಪ ಆಯುಕ್ತರು ದೂರನ್ನು ಪರಿಶೀಲಿಸುವಂತೆ ಆಯೋಗ ನಿರ್ದೇಶಿಸಿದೆ. ಮೌಖಿಕ ಆದೇಶಗಳನ್ನು ನೀಡಿದೆ” ಎಂದು ಎಫ್ಐಆರ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 6, 2023ರಂದು ವಿವರಗಳನ್ನು ಒದಗಿಸಿರುವುದಾಗಿ ಆಯೋಗ ಹೇಳಿಕೊಂಡಿದೆ. ಆದರೆ ಒದಗಿಸಲಾದ ಐಪಿಗಳು ಡೈನಾಮಿಕ್ ಐಪಿಗಳಾಗಿದ್ದು, ಈ ನಕಲಿ ಫಾರ್ಮ್ 7ಗಳನ್ನು ರೂಪಿಸಲು ಬಳಸಿರುವ ಸಾಧನಗಳ ಜಿಯೋಲೋಕಲೈಸೇಶನ್ ಪತ್ತೆಹಚ್ಚುವುದು ಕಷ್ಟ. ಆದ್ದರಿಂದ ಫಾರ್ಮ್ 7 ಅರ್ಜಿಗಳನ್ನು ಹಾಕಲ್ಪಟ್ಟ ಅವಧಿಗಳ ಡೆಸ್ಟಿನೇಶನ್ ಐಪಿಗಳು ಮತ್ತು ಡೆಸ್ಟಿನೇಶನ್ ಪೋರ್ಟ್ಗಳನ್ನು ಕೋರಿ 2024ರ ಜನವರಿಯಿಂದ ಈವರೆಗೆ 18 ಪತ್ರಗಳನ್ನು ಸಿಐಡಿ ಅಧಿಕಾರಿಗಳು ಚುನಾವಣಾ ಅಧಿಕಾರಿಗೆ ಬರೆದಿದ್ದಾರೆ.
“ತನಿಖೆಯ ಸಮಯದಲ್ಲಿ, ಐಪಿ ಲಾಗ್ಗಳನ್ನು ಒದಗಿಸಲಾಗಿದೆ. ಪರಿಶೀಲಿಸಿದಾಗ ಡೆಸ್ಟಿನೇಶನ್ ಐಪಿ ಮತ್ತು ಡೆಸ್ಟಿನೇಶನ್ ಪೋರ್ಟ್ ಕಾಣೆಯಾಗಿದೆ. ಆದ್ದರಿಂದ, ಇವುಗಳನ್ನು ಒದಗಿಸಬೇಕೆಂದು ಸಂಬಂಧಪಟ್ಟವರಿಗೆ ನಿರ್ದೇಶಿಸಿ” ಎಂದು ಪತ್ರದಲ್ಲಿ ಬೇಡಿಕೊಳ್ಳಲಾಗುತ್ತಿದೆ. ಚುನಾವಣಾ ಆಯೋಗ ಇಲ್ಲಿಯವರೆಗೆ ಈ ಪತ್ರಗಳಿಗೆ ಉತ್ತರಿಸಿಲ್ಲ. ಮುಖ್ಯ ಚುನಾವಣಾ ಅಧಿಕಾರಿಗಳು ಅನುಕೂಲಕರವಾದ ಅರ್ಧ ಸತ್ಯಗಳನ್ನು ಹೇಳಿಕೊಂಡಿದ್ದಾರೆ. ಸಿಐಡಿಯಿಂದ ಬಂದ 18 ಪತ್ರಗಳ ಕುರಿತು ಉಸಿರೆತ್ತಿಲ್ಲ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮತಾಂತರ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆ ಮತ್ತು ವಾಸ್ತವ
ದೇಶದ ಉನ್ನತ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆ ಗುರುತರವಾದ ಆರೋಪಗಳು ಬಂದಿರುವಾಗ ಅರೆಬರೆ ಸತ್ಯಗಳನ್ನು ಹೇಳುವುದು ಸರಿಯಲ್ಲ. ಖಚಿತ ಆರೋಪಕ್ಕೆ ಖಚಿತ ಉತ್ತರವನ್ನು ನೀಡಬೇಕು. ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ ರಕ್ಷಣೆಗೆ ಆಯೋಗ ನಿಂತಿದೆಯೇ? ಹಾಗಾದರೆ ಯಾಕೆ ಕೆಲವು ಮಹತ್ವದ ಮಾಹಿತಿಗಳನ್ನು ಮುಚ್ಚಿಡುತ್ತಿದೆ? ರಾಹುಲ್ ಗಾಂಧಿಯವರು ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿಲ್ಲ. ದಾಖಲೆಗಳನ್ನು ಇಟ್ಟುಕೊಂಡು ಪ್ರಶ್ನಿಸುತ್ತಿದ್ದಾರೆ. ಅಧ್ಯಯನ ಮಾಡಿಕೊಂಡು ಬಂದು, ಹೊಸ ಮಾದರಿಯ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ಯಾರನ್ನೋ ರಕ್ಷಣೆ ಮಾಡಲು ಆಯೋಗ ಪ್ರಯತ್ನಿಸುತ್ತಿದೆ, ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂದು ಈ ದೇಶದ ಜನ ಅಂದುಕೊಳ್ಳಬಾರದೆಂದರೆ ಪಾರದರ್ಶಕವಾಗಿ ಆಯೋಗ ನಡೆದುಕೊಳ್ಳಬೇಕಾಗಿದೆ. ಇಲ್ಲವಾದರೆ ಚುನಾವಣೆಗಳು ದೊಡ್ಡ ಜೋಕ್ ಆಗಿ ಕಾಣಿಸಿಕೊಳ್ಳುತ್ತವೆ.
