ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಿರಂತರ ಹೋರಾಟ ನಡೆಯುತ್ತಲೇ ಇದ್ದು, ಸೆ.22ರಿಂದ ರಿಂದ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಗಣತಿ ವೇಳೆ ಬಸವತತ್ವ ಪಾಲಕರೆಲ್ಲ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದೇ ಬರೆಯಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಬಾಗಲಕೋಟೆ ಜಿಲ್ಲಾಧ್ಯಕ್ಷ ಅಶೋಕ ಬರಗುಂಡಿ ಮನವಿ ಮಾಡಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಬಸವ ಸಂಸ್ಕೃತಿ ಪ್ರತಿಪಾದಕರು ಮೊದಲಿನಿಂದ ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಹೋರಾಡುತ್ತಲೇ ಬಂದಿದ್ದಾರೆ. ಸಮಸಮಾಜ ಸಿದ್ದಾಂತ ಲಿಂಗಾಯತ ಸಂಸ್ಕೃತಿ. ಇದು ಎಲ್ಲರನ್ನೂ ಒಳಗೊಳ್ಳುವ ಸಂಸೃತಿ ಆಗಿದೆ. ಲಿಂಗಾಯತ ಅಸ್ಮಿತೆ ಉಳಿಸಿಕೊಳ್ಳಲು ಗಣತಿ ವೇಳೆ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಬೇಕು. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ಜಾತಿ ಕಾಲಂನಲ್ಲಿ ಒಳ ಪಂಗಡ ಹೆಸರು ಬರೆಯಿಸಬೇಕು” ಎಂದು ಹೇಳಿದರು.
ಇದನ್ನೂ ಓದಿ: ಬಾಗಲಕೋಟೆ | ನವೆಂಬರ್‌ನಲ್ಲಿ ಚಾಲುಕ್ಯ ಉತ್ಸವ ಆಯೋಜನೆ: ಸಚಿವ ಆರ್ ಬಿ ತಿಮ್ಮಾಪೂರ
ಬಾಗಲಕೋಟೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ಅದ್ದೂರಿಯಾಗಿ ನಡೆದ ಹಿನ್ನೆಲೆ ಸಂಘಟಕರನ್ನು ಗೌರವಿಸಲು ಶೀಘ್ರ ಧನ್ಯತಾ ಸಮಾವೇಶ ನಡೆಯಲಿದೆ ಹಾಗೂ ಬೆಂಗಳೂರಿನಲ್ಲಿ ಅ.5ರಂದು ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ಅರಮನೆ ಮೈದಾನದಲ್ಲಿ ಜರುಗಲಿದ್ದು, ಬಸವಣ್ಣ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಿದ ಸರ್ಕಾರದ ಪ್ರತಿನಿಧಿಗಳಿಗೆ ಸನ್ಮಾನ ನಡೆಯಲಿದೆ ಎಂದು ಕಾರ್ಯದರ್ಶಿ ರವಿ ಯಡಹಳ್ಳಿ ಮಾಹಿತಿ ನೀಡಿದರು.
ಬಸವರಾಜ ಕಡಪಟ್ಟಿ, ಶ್ರೀಶೈಲ ಕರಿಶಂಕರಿ, ಗುರುಬಸವ ಸಿಂಧೂರ, ಬಸವರಾಜ ಅನಗವಾಡಿ, ಶೋಭಾ ಹುಲಗಬಾಳಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.