‘ಕೋಮುವಾದಿ ರಾಜಕೀಯ ಮಂಡ್ಯದಲ್ಲಿ ನಡೆಯಲ್ಲ’: ಜನಪರ ಸಂಘಟನೆಗಳ ಎಚ್ಚರಿಕೆ

Date:

Advertisements
ಪೊಲೀಸರ ಅನುಮತಿ ನಿರಾಕರಣೆ ನಡುವೆಯೇ ಜನಪರ ಸಂಘಟನೆಗಳ ಮುಖಂಡರು ಮದ್ದೂರು ಎಪಿಎಂಸಿ ಆವರಣದಲ್ಲಿ ಸೌಹಾರ್ದ-ಸಾಮರಸ್ಯದ ನಡಿಗೆಗೆ ಚಾಲನೆ ನೀಡಿದರು. ಕೋಮುವಾದಿ ರಾಜಕಾರಣಿಗಳ ಸ್ವಾರ್ಥದ ವಿರುದ್ಧ ಗುಡುಗಿದರು.

ಮಂಡ್ಯ ಜಿಲ್ಲೆಯಲ್ಲಿ ಕೋಮುವಾದಿ ಚಟುವಟಿಕೆಗಳನ್ನು ಉದ್ದೀಪಿಸಲು ನಡೆಸುತ್ತಿರುವ ಸಂಚುಗಳ ನಡುವೆ ಮಂಡ್ಯ ನೆಲದ ಅಸಲಿ ಸೌಹಾರ್ದತೆ, ಸಾಮರಸ್ಯ ಉಳಿಸುವ ಪ್ರಯತ್ನಗಳು ಬಿರುಸಾಗಿವೆ. ಇಂದು ಮದ್ದೂರಿನಲ್ಲಿ ಜನಪರ ಸಂಘಟನೆಗಳು ನಡೆಸಲು ಉದ್ದೇಶಿಸಿದ್ದ ಸೌಹಾರ್ದ- ಸಾಮರಸ್ಯದ ನಡಿಗೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದರೂ, ನೂರಾರು ಸಂಖ್ಯೆಯಲ್ಲಿದ್ದ ವಿವಿಧ ಜನಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಜಿಲ್ಲೆಯಲ್ಲಿ ಕೋಮುವಾದಿಗಳ ಸ್ವಾರ್ಥ ರಾಜಕೀಯಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಆ ಮೂಲಕ ಶಾಂತಿ-ಸೌಹಾರ್ದದ ಜಿಲ್ಲೆಯಲ್ಲಿ ಕೋಮುವಾದಿಗಳ ಸ್ವಾರ್ಥ ರಾಜಕೀಯವನ್ನು ಸೋಲಿಸುವುದಾಗಿ ಶಪಥ ಮಾಡಿದ್ದಾರೆ.

ಮದ್ದೂರಿನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ನಂತರ ಕೆಲವು ನಾಯಕರು ಸೇರಿದಂತೆ ಕೋಮುವಾದಿ ಸಂಘಟನೆಗಳ ಮುಖಂಡರು ಕೋಮು ದ್ವೇಷ ಕೆರಳಿಸಿ, ಪ್ರಚೋದನೆಯ ಮಾತುಗಳನ್ನು ಆಡಿದ್ದರು. ಇದಕ್ಕೆ ಪ್ರತಿಯಾಗಿ ಜಿಲ್ಲೆಯ ಜನಪರ ಸಂಘಟನೆಗಳು ಇಂದು ಮದ್ದೂರಿನಲ್ಲಿ ಸೌಹಾರ್ದ ಸಾಮರಸ್ಯ ನಡಿಗೆ ನಡೆಸಲು ಆಯೋಜಿಸಿ, ಟಿ.ಬಿ. ವೃತ್ತದಲ್ಲಿರುವ ರೈತನಾಯಕ ಪ್ರೊ. ನಂಜುಂಡಸ್ವಾಮಿಯವರ ಪ್ರತಿಮೆಯಿಂದ ಮದ್ದೂರಿನ ವಿವಿಧ ಬೀದಿಗಳಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ನಂತರ ಐತಿಹಾಸಿಕ ಶಿವಪುರ ಸತ್ಯಾಗ್ರಹ ಸೌಧ ತಲುಪಲು ಮುಂದಾಗಿದ್ದರು. ಆದರೆ ಸೌಹಾರ್ದ-ಸಾಮರಸ್ಯದ ನಡಿಗೆಯಿಂದ ಮತ್ತೆ ಗಲಭೆ ಸಂಭವಿಸಬಹುದು ಎಂಬ ಕಾರಣ ನೀಡಿದ ಪೋಲೀಸರು ಅನುಮತಿ ನಿರಾಕರಿಸಿದರು.

ಜನಪರ ಸಂಘಟನೆಗಳ ಮುಖಂಡರು ಎಪಿಎಂಸಿ ಆವರಣದಲ್ಲಿಯೇ ಸೌಹಾರ್ದ-ಸಾಮರಸ್ಯದ ನಡಿಗೆಗೆ ಚಾಲನೆ ನೀಡಿ ಕೋಮುವಾದಿ ರಾಜಕಾರಣಿಗಳ ಸ್ವಾರ್ಥ ರಾಜಕೀಯದ ವಿರುದ್ಧ ಗುಡುಗಿದ್ದಾರೆ.

mandya 4 2

ಮದ್ದೂರು ಪುರಸಭೆ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು ಮಾತನಾಡಿ, ಮಂಡ್ಯ ಜಿಲ್ಲೆ ಶಾಂತಿ- ಸಾಮರಸ್ಯಕ್ಕೆ ಹೆಸರಾಗಿದೆ. ಇಂತಹ ನಾಡಿನಲ್ಲಿ ಕೆಲವರು ಕೋಮುಗಲಭೆ ಮೂಲಕ ಅಧಿಕಾರ ಹಿಡಿಯಲು ಬಂದಿದ್ದಾರೆ. ಜನಪರ ಸಂಘಟನೆಗಳ ನಾವೆಲ್ಲರೂ ಸೌಹಾರ್ದ ಸಾಮರಸ್ಯದ ನಡಿಗೆ ಮಾಡುತ್ತಿದ್ದು, ಇದಕ್ಕೆ ಪೊಲೀಸರು ಅನುಮತಿ ನೀಡಿಲ್ಲದಿರುವುದು ಬೇಸರ ತಂದಿದೆ. ಸಮಾಜದಲ್ಲಿ ಶಾಂತಿ ನೆಲೆಸಬೇಕು. ಎಲ್ಲಾ ಸಮುದಾಯಗಳು ಸೌಹಾರ್ದವಾಗಿ ಅನ್ಯೋನ್ಯತೆಯಿಂದ ಬಾಳಬೇಕು ಎಂಬುದು ನಮ್ಮೆಲ್ಲರ ಉದ್ದೇಶ. ಅದಕ್ಕಾಗಿ ಸೌಹಾರ್ದ-ಸಾಮರಸ್ಯ ನಡಿಗೆ ಆಯೋಜಿಸಿದ್ದೇವೆ. ಇಲ್ಲಿ ಬಂದಿರುವ ಒಬ್ಬರು ನೂರು ಮಂದಿಗೆ ಸಮ. ಕೋಮುವಾದಗಳಿಗೆ ಮದ್ದೂರು ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ ನೆಲೆ ಕೊಡಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಕರೆನೀಡಿದರು.

ಬಿಜೆಪಿಯವರ ಮಕ್ಕಳು ಬೀದಿಲಿದ್ದಾರಾ?: ಭೂಮಿ ಗೌಡ ಪ್ರಶ್ನೆ

ಸಾಹಿತಿ ಭೂಮಿ ಗೌಡ ಮಾತನಾಡಿ, “ಬಿಜೆಪಿ, ಆರ್‌ಎಸ್‌ಎಸ್ ಮುಖಂಡರು ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಮುಂದು ಮಾಡಿ ಚುನಾವಣೆಯನ್ನು ಎದುರಿಸುತ್ತಿಲ್ಲ. ಬದಲಿಗೆ ಧರ್ಮ- ಧರ್ಮಗಳ ನಡುವೆ ಒಡಕನ್ನು ಉಂಟು ಮಾಡಿ ಅದರಲ್ಲಿ ರಾಜಕೀಯ ಮಾಡಲು ಮದ್ದೂರಿಗೆ ಬಂದಿದ್ದಾರೆ. ತಳ ಸಮುದಾಯದ ಜನರ ಮೆದುಳಿನಲ್ಲಿ ಕೋಮು ವಿಷವನ್ನು ಸುರಿದು ಅವರನ್ನು ಗಲಭೆಗೆ ಪ್ರಚೋದಿಸುತ್ತಿದ್ದಾರೆ. ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದರೆ, ನಮ್ಮ ಶೂದ್ರ ಸಮುದಾಯದ ಯುವಕರು ಕೋಮುಗಲಭೆಯಲ್ಲಿ ಭಾಗಿಯಾಗಿ ಶಾಂತಿ ಕದಡಿ ಜೈಲು ಸೇರುತ್ತಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್ ನಾಯಕರ ಹುನ್ನಾರವನ್ನು ಜನರು ಅರಿತುಕೊಳ್ಳಬೇಕು” ಎಂದು ಮನವಿ ಮಾಡಿದರು.

mandya 2 2

ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಮಾತನಾಡಿ, ರೈತ ಸಂಘಟನೆಗಳು ಸೇರಿದಂತೆ ಶಾಂತಿ, ಸೌಹಾರ್ದತೆ ಬಯಸುವ ಎಲ್ಲಾ ಸಂಘಟನೆಗಳು ಬಸವಣ್ಣ ಹಾಗೂ ಗಾಂಧೀಜಿಯವರ ತತ್ವಗಳಿಂದಲೇ ನಡೆಯುತ್ತಿವೆ. ನಮ್ಮ ಸಂಘಟನೆಗಳಿಂದ ಯಾವುದೇ ರೀತಿಯ ಅಶಾಂತಿ ಇದುವರೆಗೂ ನಡೆದಿಲ್ಲ. ಈ ದೃಷ್ಟಿಯಿಂದ ಶಾಂತಿ- ಸಾಮರಸ್ಯ ನಡಿಗೆಗೆ ಪೊಲೀಸ್ ಇಲಾಖೆ ಅನುಮತಿ ಕೊಡಬೇಕಿತ್ತು. ಆದರೆ ಕೋಮು ಪ್ರಚೋದನೆ ಮಾಡುವ ಸಿ.ಟಿ. ರವಿ, ಬಸವನಗೌಡ ಯತ್ನಾಳ್ ಅವರಿಗೆ ಮದ್ದೂರಿಗೆ ಬರಲು ,ಕೋಮುದ್ವೇಷದ ಮಾತನಾಡಲು ಅನುಮತಿ ಇದೆ. ಆದರೆ ನಮ್ಮಂತ ಶಾಂತಿ ಪ್ರಿಯರಿಗೆ ಅನುಮತಿ ನಿರಾಕರಣೆ ಮಾಡಿರುವುದು ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಇದನ್ನೂ ಓದಿರಿ: ಕೆ.ಆರ್.ಪೇಟೆ | ರಾತ್ರೋರಾತ್ರಿ ಗಣಪತಿ ಇಟ್ಟು ವಿವಾದ ಸೃಷ್ಟಿಸಲು ಯತ್ನ?

ಜಿಲ್ಲೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಿ ಜಾತ್ಯತೀತತೆ ಎಂಬ ಪದಕ್ಕೆ ಅಪಮಾನ ಮಾಡಿದೆ. ಹಸಿರು ಟವೆಲ್ ಅನ್ನು ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ ರೈತರ ಮೇಲಿನ ಕಾಳಜಿಯಿಂದ ಹಾಕಿಲ್ಲ. ಅವರು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಹಸಿರು ಟವೆಲ್ ಹಾಕುತ್ತಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. 40 ವರ್ಷಗಳ ನಮ್ಮ ಸಂಘಟನೆ ಇತಿಹಾಸದಲ್ಲಿ ನಾವೆಲ್ಲರೂ ಕಾನೂನಿಗೆ ಅನುಗುಣವಾಗಿ, ಶಾಂತಿಯಿಂದ ಪ್ರತಿಭಟನೆ, ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕೋಮುವಾದಿಗಳೊಂದಿಗೆ ಕೈಜೋಡಿಸಿರುವ ಕುಮಾರಸ್ವಾಮಿ ಅವರು ನಮ್ಮ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿಲ್ಲ. ನಾವು ಏನು ಹೇಳಬೇಕೆಂದುಕೊಂಡಿದ್ದೇವೋ ಅದನ್ನು ಹೇಳಿದ್ದೇವೆ. ಎಲ್ಲಾ ಜನಪರ ಸಂಘಟನೆಗಳು ಕೋಮು ದ್ವೇಷಕ್ಕೆ ಅವಕಾಶ ನೀಡುವುದಿಲ್ಲ. ಕೋಮುವಾದಿಗಳು ಇಲ್ಲಿ ಬೆಳೆಯುವುದನ್ನು ತಡೆದು ಮಂಡ್ಯ ಜಿಲ್ಲೆಯನ್ನು ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಕ್ರಿಮಿನಲ್‌ಗಳಿಗೆ ಅವಕಾಶ, ಸಜ್ಜನರಿಗೆ ತಡೆ: ಕೃಷ್ಣೇಗೌಡ

ಸಿಪಿಎಂ ಮುಖಂಡ ಕೃಷ್ಣೇಗೌಡ ಮಾತನಾಡಿ, ಮದ್ದೂರಿನಲ್ಲಿ ಗಣೇಶನ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದ ನಂತರ ಆದ ಗಲಭೆಯನ್ನು ಪೊಲೀಸರು ತಹಬಂದಿಗೆ ತಂದಿದ್ದಾರೆ. ಅದನ್ನು ನಾವು ಸ್ವಾಗತಿಸಿ ಅಭಿನಂದಿಸುತ್ತೇವೆ. ಆದರೆ ಶಾಂತಿ ಬಯಸುವ ನಮಗೆ ಶಾಂತಿ-ಸೌಹಾರ್ದ ಸಾಮರಸ್ಯದ ನಡಿಗೆ ನಡೆಸಲು ಅನುಮತಿ ನೀಡದಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಕೋಮುವಾದಿಗಳ ಜೊತೆ ಆಟವಾಡುತ್ತಿದೆ. ಸಿ.ಟಿ.ರವಿ, ಯತ್ನಾಳ್, ಪ್ರತಾಪ ಸಿಂಹವನ್ನು ಮದ್ದೂರಿಗೆ ಬಿಟ್ಟುಕೊಳ್ಳುತ್ತಾರೆ. ಆದರೆ ಶಾಂತಿ ಬಯಸುವ ನಾಗರಿಕರನ್ನು ಬಿಡಲು ನಿರಾಕರಿಸುತ್ತಾರೆ. ಪೊಲೀಸರಿಗೆ ಯಾರು ಕ್ರಿಮಿನಲ್‌ಗಳು, ಯಾರು ಸಜ್ಜನರು ಎಂಬುದನ್ನು ತಿಳಿದುಕೊಳ್ಳುವಷ್ಟು ಅಜ್ಞಾನ ಇರುವುದನ್ನು ನಾನು ಖಂಡಿಸುತ್ತೇನೆ. ನಾವು ಮುಂದೆಯೂ ಕೂಡ ಸೌಹಾರ್ದ ಕೂಟ, ಸಮಾರಂಭ, ಜಾತ್ರೆ ಮಾಡುತ್ತೇವೆ. ಮದ್ದೂರಿನ ನೆಲದಲ್ಲಿಯೇ ನಾವಿಂದು ಸೌಹಾರ್ದ ಸಾಮರಸ್ಯದ ನಡಿಗೆ ನಡೆಸಿದ್ದೇವೆ. ಪೊಲೀಸರಿಗೆ ನಮ್ಮ ಕಾರ್ಯಕ್ರಮವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

mandya 3 3

“ಜಿಲ್ಲೆಯಲ್ಲಿ ಜೆಡಿಎಸ್ ನಾಶವಾಗುತ್ತಿದೆ. ಕೇಸರಿ ಹಾಕಿಕೊಂಡು ರಾಜಕೀಯ ಸ್ವಾರ್ಥಕ್ಕೆ ಇಳಿದಿರುವ ಜೆಡಿಎಸ್ ಪಕ್ಷ ರಾಜಕೀಯವಾಗಿ ಆತ್ಮಹತ್ಯೆಯ ಹಾದಿ ಹಿಡಿದಿದೆ” ಎಂದು ಅಭಿಪ್ರಾಯಪಟ್ಟರು.

ಜನವಾದಿ ಮಹಿಳಾ ಸಂಘಟನೆಯ ದೇವಿ ಮಾತನಾಡಿ, ಜೆಡಿಎಸ್-ಬಿಜೆಪಿ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಕೋಮುಗಳ ನಡುವೆ ಪ್ರಚೋದನೆ ನೀಡುತ್ತಿರುವುದರಿಂದ ಯಾವ ರೀತಿ ದುಷ್ಪರಿಣಾಮ ಬೀರಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಶಾಂತಿ- ಸೌಹಾರ್ದತೆಗೆ ಹೆಸರಾಗಿರುವ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಗಲಭೆ ರಾಜಕೀಯವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.

ಇದನ್ನೂ ಓದಿರಿ: ‘ಇಲ್ಲಿ ಯಾರೂ ಭಿನ್ನರಲ್ಲ, ಯಾರೂ ಪರಕೀಯರಲ್ಲ’: ಬಾನು ಮುಷ್ತಾಕ್ ಅವರ ದಸರಾ ಉದ್ಘಾಟನಾ ಭಾಷಣ

ದಲಿತ ಸಂಘಟನೆ ಮುಖಂಡ ಅಂದಾನಿ ಸೋಮನಹಳ್ಳಿ ಮಾತನಾಡಿ, “ಮಂಡ್ಯ ಜಿಲ್ಲೆಯಲ್ಲಿ ಕೋಮುವಾದಿಗಳು ತಮ್ಮ ಹೀನ ರಾಜಕೀಯ ಮಾಡಲು ಬಂದಿದ್ದಾರೆ. ಮೊದಲು ಶ್ರೀರಂಗಪಟ್ಟಣದಲ್ಲಿ ಕೋಮು ಗಲಭೆಯ ಹುನ್ನಾರ ನಡೆಯಿತು. ನಂತರ ಕೆರಗೋಡು, ನಾಗಮಂಗಲ, ಈಗ ಮದ್ದೂರಿನಲ್ಲಿ ಕೋಮುಗಲಭೆ ನಡೆಸಿ ರಾಜಕೀಯ ಮಾಡಲು ಬಂದಿದ್ದಾರೆ. ಶಾಂತಿ ಕದಡಲು ಬಂದಿರುವ ಇವರಿಗೆ ಮದ್ದೂರಿನ ಜನರೇ ನಿಂತು ಶಾಂತಿ-ಸಾಮರಸ್ಯದ ಮೂಲಕವೇ ಉತ್ತರ ನೀಡುತ್ತಾರೆ” ಎಂದು ತಿರುಗೇಟು ನೀಡಿದರು.

ಬರೆಹಗಾರರಾದ ಶಿವಸಂದರ್, ಮಳವಳ್ಳಿ ಎಂ.ವಿ ಕೃಷ್ಣ, ರಾಜೇಂದ್ರ ಪ್ರಸಾದ್, ಜನವಾದಿ ಸಂಘಟನೆಯ ಸಿ. ಕುಮಾರಿ, ಯಶ್ವಂತ್, ರಾಜಶೇಖರ್, ಕರ್ನಾಟಕ ಜನಶಕ್ತಿಯ ನಗರಗೆರೆ ಜಗದೀಶ್, ಸಿದ್ದರಾಜು, ಕೃಷ್ಣಪ್ರಕಾಶ್, ಸಂತೋಷ್, ಮಹಿಳಾ ಮುನ್ನಡೆಯ ಶಿಲ್ಪ, ಅಂಜಲಿ ಮತ್ತಿತರರು ಭಾಗವಹಿಸಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್‌ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X