ನಗರದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ (ಒಪೆಕ್) ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕ್ಯಾನ್ಸರ್ ರೋಗಿ ಶ್ರೀನಿವಾಸ (45) ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಘಟನೆಗೆ ಆಸ್ಪತ್ರೆಯ ವೈದ್ಯಾಧಿಕಾರಿ ಸೇರಿ ಮೂವರ ಮೇಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶ್ರೀನಿವಾಸ, ಉಸಿರಾಟದ ಸಮಸ್ಯೆಯಿಂದಾಗಿ ಸೆಪ್ಟೆಂಬರ್ 18ರಂದು ಬೆಳಿಗ್ಗೆ 11.30ಕ್ಕೆ ಒಪೆಕ್ ಆಸ್ಪತ್ರೆಗೆ ದಾಖಲೆಯಾಗಿದ್ದರು. ದಾಖಲಾದ ದಿನದಂದು ಆಸ್ಪತ್ರೆಯ ವಿಶೇಷಾಧಿಕಾರಿಯಾಗಿರುವ ಕ್ಯಾನ್ಸರ್ ತಜ್ಞ ಡಾ. ರಮೇಶ್ ಬಿ. ಸಾಗರ್ ಅವರು ಬೆಳಿಗ್ಗೆ ಚಿಕಿತ್ಸೆ ನೀಡಿದ್ದರು. ನಂತರ ಕೆಲವು ಪರೀಕ್ಷೆಗಳ ಸಲುವಾಗಿ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದ್ದು, ರೋಗಿ ತೀವ್ರ ಉಸಿರಾಟದ ತೊಂದರೆ ಅನುಭವಿಸಿದ್ದಾರೆ.
ಆಕ್ಸಿಜನ್ ಸರಬರಾಜು ಖಾಲಿಯಾಗಿದೆ ಎಂಬುದನ್ನು ಸರಿಯಾಗಿ ಪರಿಶೀಲಿಸದೇ, ತುರ್ತು ಚಿಕಿತ್ಸೆಗಾಗಿ ಅಗತ್ಯವಿದ್ದ ಆಕ್ಸಿಜನ್ ಸಹಾಯವಿಲ್ಲದೆ ರೋಗಿಯನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ರೋಗಿ ಕುಟುಂಬದವರು ಆಕ್ಸಿಜನ್ ಇಲ್ಲದೆ ಇರಲು ಸಾಧ್ಯವಿಲ್ಲ ಎಂದು ಬೇಡಿಕೊಂಡರೂ ಸಿಬ್ಬಂದಿ ಸ್ಪಂದಿಸದಂತಾಗಿದೆ. ನರ್ಸ್ ಹಾಗೂ ವಾರ್ಡ್ ಬಾಯ್ ಆಕ್ಸಿಜನ್ ತರಲು ಹೋಗಿ ಮರಳಿ ಬಾರದ ಕಾರಣ, 15 ನಿಮಿಷಗಳ ಕಾಲ ಸಹಾಯವಿಲ್ಲದೆ ನರಳಿದ ಶ್ರೀನಿವಾಸ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅನ್ನಭಾಗ್ಯ ಸಿಗದೆ ಪರದಾಟ : ವೃದ್ಧೆಯರ ಹಸಿವು ನೀಗಿಸುತ್ತಿದೆ ಶಾಲೆಯ ಬಿಸಿಯೂಟ
ಘಟನೆಯ ನಂತರ ಅಲ್ಲಿದ್ದ ವೈದ್ಯರು ಮತ್ತು ಸಿಬ್ಬಂದಿ ಸ್ಥಳ ತೊರೆದಿದ್ದಾರೆ ಎಂದು ಮೃತನ ತಂದೆ ಕೆ. ಮೂರಳಿಧರ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಮೇರೆಗೆ ಬಿಎನ್‌ಎಸ್‌ಎಸ್ ಕಾಯ್ದೆ 2023ರ ಕಲಂ 194ರಡಿ ಯುಡಿಆರ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ರೋಗಿಯು ರಾಯಚೂರು ನಗರದ ಎಲ್ ಬಿಎಸ್ ಏರಿಯಾದ ಯುವಕ ಎನ್ನಲಾಗಿದೆ.
