ದಸರಾ ಉತ್ಸವದ ಪ್ರಯುಕ್ತ ತುಮಕೂರು ನಗರದ ಟೌನ್‌ಹಾಲ್ ವೃತ್ತದ ಬಳಿ ಸೋಮವಾರ ಸಂಜೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ವಿಶೇಷ ದೀಪಾಲಂಕಾರಕ್ಕೆ ಚಾಲನೆ ನೀಡಿದರು.
ಝಗಮಗಿಸುತ್ತಿರುವ ತುಮಕೂರು ನಗರ : ತುಮಕೂರು ನಗರದ ಪ್ರಮುಖ ಬೀದಿ, ವೃತ್ತಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ. ಕಾಲ್‌ಟೆಕ್ಸ್ ಸರ್ಕಲ್‌ನಿಂದ ಟೌನ್‌ಹಾಲ್ ಸರ್ಕಲ್, ಭದ್ರಮ್ಮ ಸರ್ಕಲ್-ಟೌನ್ ಹಾಲ್ ಸರ್ಕಲ್, ಭದ್ರಮ್ಮ ಸರ್ಕಲ್-ಶಿವಕುಮಾರ ಸ್ವಾಮೀಜಿ ಸರ್ಕಲ್, ಟೌನ್ ಹಾಲ್ ಸರ್ಕಲ್-ಚರ್ಚ್ ಸರ್ಕಲ್, ಚರ್ಚ್ ಸರ್ಕಲ್-ಕೋಟೆ ಆಂಜನೇಯ ದೇವಸ್ಥಾನದ ರಸ್ತೆ, ಡಿಸಿ ಆಫೀಸ್ ಸರ್ಕಲ್-ಶಿವಕುಮಾರ ಸ್ವಾಮೀಜಿ ಸರ್ಕಲ್‌ವರೆಗೆ(ಅಮಾನಿಕೆರೆ ರಸ್ತೆ), ಶಿವಕುಮಾರ ಸ್ವಾಮೀಜಿ ಸರ್ಕಲ್-ಬಟವಾಡಿ ಸರ್ಕಲ್, ಎಂ.ಜಿ. ರಸ್ತೆ-ಗುಂಚಿ ಸರ್ಕಲ್, ಗುಂಚಿ ಸರ್ಕಲ್-ಕೋಟೆ ಆಂಜನೇಯ ದೇವಸ್ಥಾನದ ರಸ್ತೆ, ಚರ್ಚ್ ಸರ್ಕಲ್-ಡಿಸಿ ಆಫೀಸ್, ಕಾಲ್ ಟೆಕ್ಸ್ ಸರ್ಕಲ್-ಜೆಸಿ ರಸ್ತೆ-ಚರ್ಚ್ ಸರ್ಕಲ್, ಚರ್ಚ್ ಸರ್ಕಲ್- ಕೆಇಬಿ ಚೌಲ್ಟಿ, ಕಾಲ್‌ಟೆಕ್ಸ್ ಸರ್ಕಲ್-ವಾಲ್ಮೀಕಿ ಸರ್ಕಲ್-ಕುಣಿಗಲ್ ಗೇಟ್, ಗುಬ್ಬಿ ವೀರಣ್ಣ ಕಲಾಕ್ಷೇತ್ರದ ರಸ್ತೆ, ಕೋಟೆ ಆಂಜನೇಯ ದೇವಸ್ಥಾನ-ಕಾಳಿದಾಸ ಸರ್ಕಲ್, ಕಾಳಿದಾಸ ಸರ್ಕಲ್-ಡಿ.ಸಿ ಬಂಗ್ಲೆ, ರಾಧಾಕೃಷ್ಣ ರಸ್ತೆ, ಎಸ್.ಎಸ್. ಪುರಂ ರಸ್ತೆ-ಗಂಗೋತ್ರಿನಗರ ರಸ್ತೆ, ಬಾರ್ ಲೈನ್ ರಸ್ತೆ, ಕೋತಿ ತೋಪು ರಸ್ತೆ-ಹನುಮಂತಪುರ ಬ್ರಿಡ್ಜ್, ತಮ್ಮಯ್ಯ ಆಸ್ಪತ್ರೆ-ಶಿವಕುಮಾರ ಸ್ವಾಮೀಜಿ ಸರ್ಕಲ್, ಜೂನಿಯರ್ ಕಾಲೇಜು ಮೈದಾನದ ಒಳಗಡೆ, ರೈಲ್ವೆ ಸ್ಟೇಷನ್ ರಸ್ತೆ ಸೇರಿದಂತೆ ಸುಮಾರು 22.5 ಕಿ.ಮೀ. ವ್ಯಾಪ್ತಿಯಲ್ಲಿ ನಗರದ ಮುಖ್ಯ ರಸ್ತೆ, ಅಡ್ಡ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದೆ.

ಜನಾಕರ್ಷಿಸುತ್ತಿರುವ ವಿದ್ಯುತ್ ದೀಪಗಳ ಚಿತ್ತಾರ : ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಚಾಮುಂಡೇಶ್ವರಿ, ಕನ್ನಡಾಂಬೆ, ಕರ್ನಾಟಕ ಭೂಪಟ, ಶಿವಕುಮಾರ ಸ್ವಾಮೀಜಿ, ಗಾಂಧೀಜಿ, ಭಾರತ ಭೂಪಟ ಸೇರಿದಂತೆ ಹಲವಾರು ಚಿತ್ರಗಳು ಜನರನ್ನು ಆಕರ್ಷಿಸುತ್ತಿವೆ.

ನಗರದ ಟೌನ್ ಹಾಲ್ ಸರ್ಕಲ್ ಬಳಿ ಕರ್ನಾಟಕ ಭೂಪಟದೊಂದಿಗೆ ಕನ್ನಾಡಾಂಬೆ, ಭದ್ರಮ್ಮ ಸರ್ಕಲ್ ಬಳಿ ಚಾಮುಂಡೇಶ್ವರಿ ಹಾಗೂ ಕಂಬಳ, ಡಿ.ಸಿ. ಕಚೇರಿ ಮುಂಭಾಗ ಗಂಡು ಬೇರುಂಡ, ಸ್ವಾಮೀಜಿ ಸರ್ಕಲ್ ಬಳಿ ಶ್ರೀ ಶಿವಕುಮಾರ ಸ್ವಾಮೀಜಿರವರ ಭಾವಚಿತ್ರ, ಚರ್ಚ್ ಸರ್ಕಲ್ ಬಳಿ ಭಾರತ ಭೂಪಟದೊಂದಿಗೆ ಗಾಂಧೀಜಿ, ಕೋತಿ ತೋಪು ಸರ್ಕಲ್ ಗಾಂಧೀಜಿ ಭಾವಚಿತ್ರ, ಅಮಾನಿಕೆರೆ ಹತ್ತಿರ ಬೋಟ್ ಅಥವಾ ಹಡಗಿನ ಚಿತ್ರ, ಎಸ್.ಐ.ಟಿ. ಮುಂಭಾಗ ಕಮಲದ ಮೇಲೆ ಕುಳಿತಿರುವ ಗಣೇಶನ ಚಿತ್ರ, ಎಸ್.ಪಿ. ಕಚೇರಿ ಮುಂಭಾಗ ಕರ್ನಾಟಕ ಭೂಪಟದ ಚಿತ್ರ, ಎಸ್.ಎಸ್.ಐ.ಟಿ. ಮುಂಭಾಗ ಪೀಠದ ಮೇಲೆ ಕುಳಿತಿರುವ ಗಣೇಶನ ಚಿತ್ರವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.

ಅಂಬಾರಿ ಡಬಲ್ ಡೆಕ್ಕರ್ ಬಸ್ ಪ್ರಯಾಣಕ್ಕೆ ಚಾಲನೆ : ನಗರದಲ್ಲಿ ಅಕ್ಟೋಬರ್ 2ರವರೆಗೆ ಅದ್ದೂರಿಯಾಗಿ ಜರುಗಲಿರುವ ದಸರಾ ವೈಭವ ಹಾಗೂ ದೀಪಾಲಂಕಾರವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಲು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವ ಅಂಬಾರಿ ಡಬಲ್ ಡೆಕ್ಕರ್ ಬಸ್ಸಿಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಸೋಮವಾರ ಸಂಜೆ ಬಿ.ಜಿ.ಎಸ್. ವೃತ್ತದಲ್ಲಿ ಚಾಲನೆ ನೀಡಿದರು.

ಡಬಲ್ ಡೆಕ್ಕರ್ ಬಸ್ ಅಕ್ಟೋಬರ್ 2ರವರೆಗೆ ಪ್ರತಿ ದಿನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆಯವರೆಗೆ ಜೂನಿಯರ್ ಕಾಲೇಜು ಮೈದಾನ(ದಸರಾ ಉತ್ಸವ ಮೈದಾನದ ಸ್ಥಳ)ದಿಂದ ಬಿ.ಜಿ.ಎಸ್. ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ, ಆಂಜನೇಯ ಸ್ಟಾö್ಯಚು, ಅಮಾನಿಕೆರೆ, ಶಿವಕುಮಾರ ಸ್ವಾಮೀಜಿ ಸರ್ಕಲ್ ಮಾರ್ಗವಾಗಿ ಜೂನಿಯರ್ ಕಾಲೇಜು ಮೈದಾನದವರೆಗೆ ಕಾರ್ಯಾಚರಣೆ ಮಾಡಲಿದೆ. ಈ ಡಬಲ್ ಡೆಕ್ಕರ್ ಬಸ್ ಲಂಡನ್‌ನ ಬಿಗ್ ಬಸ್ ಶೈಲಿಯಲ್ಲಿದ್ದು, ಒಳಗೆ ಹಾಗೂ ಅದರ ಮೇಲೆ ತೆರೆದ ಆಸನಗಳನ್ನು ಒಳಗೊಂಡಿದೆ. ಮಳೆ ಬಂದರೆ ಒಳಗಿನ ಆಸನದಲ್ಲಿ ಕುಳಿತು ರಕ್ಷಣೆ ಪಡೆಯಬಹುದಾಗಿದೆ. ಮೇಲೆ ತೆರೆದ ಆಸನದ ವ್ಯವಸ್ಥೆ ಇರುವುದರಿಂದ ಸಾರ್ವಜನಿಕರು ಕುಳಿತುಕೊಂಡೇ ದಸರಾ ವೈಭವವನ್ನು ನೋಡಬಹುದಾಗಿದೆ.
ಪ್ರಯಾಣವು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಪ್ರಯಾಣ ವೆಚ್ಚ ಇರುವುದಿಲ್ಲ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.