ಮುಂಡಗೋಡ: ನಾಳೆ ರಾಜ್ಯಾದ್ಯಂತ ಪೌರಕಾರ್ಮಿಕ ದಿನಾಚರಣೆ ನಡೆಯಲಿರುವ ಸಂದರ್ಭದಲ್ಲಿ, ಮುಂಡಗೋಡ ಪಟ್ಟಣ ಪಂಚಾಯಿತಿಯಲ್ಲಿ ವಿವಾದ ಎದ್ದಿದೆ. ಪೌರಕಾರ್ಮಿಕರಿಗಾಗಿ ವಿಶೇಷ ದಿನವನ್ನು ಆಚರಿಸಬೇಕು ಎಂಬ ಸರ್ಕಾರದ ನಿಯಮವಿದ್ದರೂ, ಮುಂಡಗೋಡ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಪೌರಕಾರ್ಮಿಕರನ್ನು ರಾತ್ರಿ ಪೂರ್ತಿ ಸ್ವಚ್ಛತಾ ಕಾರ್ಯಕ್ಕೆ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪ ತೀವ್ರ ಟೀಕೆಗೆ ಕಾರಣವಾಗಿದೆ.
ಇಂದು ಮುಂಡಗೋಡ ಪಟ್ಟಣದಲ್ಲಿ ಸಂತೆ ನಡೆದ ಹಿನ್ನೆಲೆ, ಪಟ್ಟಣದಲ್ಲಿ ಹೆಚ್ಚಿನ ಕಸದ ಬಾಕಿ ಉಳಿದಿದ್ದು, ನಾಳೆ ಪೌರಕಾರ್ಮಿಕರಿಗೆ ರಜೆ ಇರುವುದರಿಂದ ಇಂದು ರಾತ್ರಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಾದ ಅರ್ಜುನ ಬೆಂಡ್ಲಗಟ್ಟಿ, ವಿವೇಕ ಪಾಟೀಲ್ ಅವರು ಸೂಚಿಸಿರುವುದಾಗಿ ತಿಳಿದುಬಂದಿದೆ.
ಆದರೆ, “ಪೌರಕಾರ್ಮಿಕ ದಿನದಂದು ಅವರಿಗೆ ಸೂಕ್ತ ವಿಶ್ರಾಂತಿ ಸಿಗಬೇಕಿತ್ತು. ಬದಲಿಗೆ ರಾತ್ರಿಯೆಲ್ಲಾ ಅವರನ್ನು ದುಡಿಸಿಕೊಂಡು ಹೋಗುತ್ತಿದ್ದಾರೆ. ಇದು ಕಾರ್ಮಿಕರಿಗೆ ಆಗುತ್ತಿರುವ ನೇರ ಅನ್ಯಾಯ,” ಎಂದು ಪೌರಕಾರ್ಮಿಕರು ಹಾಗೂ ದಲಿತಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಸ್ವಚ್ಛತಾ ಕಾರ್ಯಕ್ಕಾಗಿ ಅಧಿಕಾರಿಗಳು ಅತಿಯಾದ ಒತ್ತಡ ಹೇರುತ್ತಿರುವುದರಿಂದ ಕಾರ್ಮಿಕರ ಮನೋಭಾವ ಕುಗ್ಗುತ್ತಿದೆ. ಶ್ರಮ ಕಾಯಿದೆ ಪ್ರಕಾರ ರಾತ್ರಿ ಹೊತ್ತು ಬಲವಂತದ ಕೆಲಸ ಮಾಡಿಸುವುದು ಕಾನೂನು ಬಾಹಿರವಾಗಿದ್ದು, ಪಟ್ಟಣ ಪಂಚಾಯಿತಿ ಪ್ರಕ್ರಿಯೆಯೇ ಪ್ರಶ್ನಾರ್ಥಕವಾಗಿದೆ ಎಂದು ವಲಯದಲ್ಲಿ ಚರ್ಚೆ ನಡೆಯುತ್ತಿದೆ.“ಪೌರಕಾರ್ಮಿಕರಿಲ್ಲದಿದ್ದರೆ ನಗರ ಸ್ವಚ್ಛತೆ ಅಸಾಧ್ಯ. ಆದರೆ ಅವರ ಹಕ್ಕನ್ನು ಕಿತ್ತುಕೊಂಡು ಪೌರಕಾರ್ಮಿಕ ದಿನವೇ ಅವರ ದುಡಿಮೆಗಾಗಿ ಬಳಸುತ್ತಿದ್ದೀರೆಂದರೆ ಇದು ದೊಡ್ಡ ಅಸಮಾನತೆ,” ಎಂದು ದಲಿತ ಮುಖಂಡ ಬಸವರಾಜ ಹಳ್ಳಮ್ಮನ್ನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.