ಶಾಲಾ ಮಕ್ಕಳಿಗೆ ಬಿಸಿಯೂಟ, ಮೊಟ್ಟೆಯನ್ನು ಸಮರ್ಪಕವಾಗಿ ವಿತರಿಸುವಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕಮಲನಗರ ತಾಲ್ಲೂಕಿನ ದಾಬಕಾ(ಸಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುನಂದಾ ಕೊಂಗೆ ಅವರನ್ನು ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಎಸ್.ಜಿ ಸುರೇಶ ಆದೇಶಿಸಿದ್ದಾರೆ.
ಔರಾದ್ (ಬಿ) ತಾಲ್ಲೂಕು ಹಿರಿಯ ಸಿವಿಲ್ ನ್ಯಾಯಾಧೀಶರು ದಾಬಕಾ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದಾಗ ʼಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ ಅವ್ಯವಸ್ಥೆ ಸೇರಿದಂತೆ ಬಿಸಿಯೂಟ ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ನ್ಯಾಯಾಧೀಶರಿಗೆ ತಿಳಿಸಿದರು. ಶಾಲೆಯ ಅವ್ಯವಸ್ಥೆ ಕಂಡು ನ್ಯಾಯಾಧೀಶರು ಶಾಲೆಯ ಮುಖ್ಯಗುರು ಹಾಗೂ ಅಡುಗೆ ಸಿಬ್ಬಂದಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದರು.
ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಆಧರಿಸಿ ಔರಾದ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತ್ರತ್ವದ ತಂಡ ಸೆ.17 ರಂದು ಶಾಲೆಗೆ ಭೇಟಿ ನೀಡಿತು, ʼ200 ಮಕ್ಕಳಿಗೆ ಅರ್ಧ ಕೆ.ಜಿ. ಟಮಾಟೋ ಬಳಕೆ ಮಾಡಿರುವುದು ಮತ್ತು ವಿದ್ಯಾರ್ಥಿಗಳು ಊಟ ಮಾಡಲು ಮನೆಯಿಂದಲೇ ತಟ್ಟೆ ಮತ್ತು ಲೋಟ ತರುವುದು, ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಇರುವುದು, ಬಿಸಿ ಊಟದಲ್ಲಿ ಹುಳುಗಳು ಬಂದರೆ ಅದನ್ನು ತೆಗೆದು ಊಟ ಮಾಡಲು ಮುಖ್ಯ ಶಿಕ್ಷಕರು ಮಕ್ಕಳಿಗೆ ತಿಳಿಸಿರುವುದುʼ ಕಂಡು ಬಂದಿದೆ.
ʼಒಂದೂವರೆ ತಿಂಗಳಿನಿಂದ ಮಕ್ಕಳಿಗೆ ಸರಿಯಾಗಿ ಮೊಟ್ಟೆ ನೀಡಿರುವುದಿಲ್ಲ. ಆಹಾರ ಧಾನ್ಯಗಳು ಹಾಗೂ ಹಾಲಿನ ಪುಡಿಯನ್ನು ಮುಖ್ಯ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಯವರು ಮನೆಗೆ ತೆಗೆದುಕೊಂಡು ಹೋಗುವುದು, ಶಾಲೆಯಲ್ಲಿ ಶೌಚಾಲಯದ ಕಟ್ಟಡವಿದ್ದರೂ ನೀರಿನ ಸೌಲಭ್ಯವಿಲ್ಲದೇ ಗಂಡು ಮಕ್ಕಳು ಬಯಲಿಗೆ ಹಾಗೂ ಹೆಣ್ಣು ಮಕ್ಕಳು ಮನೆ ಅಥವಾ ಪ್ರೌಢ ಶಾಲೆಯ ಶೌಚಾಲಯ ಬಳಸುತ್ತಿರುವ ಆರೋಪಗಳನ್ನು ಪ್ರಭಾರಿ ಮುಖ್ಯಶಿಕ್ಷಕಿ ಒಪ್ಪಿಕೊಂಡಿದ್ದಾರೆʼ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಬೀದರ್ | ಧಾರಾಕಾರ ಮಳೆ : ಮನೆಗೆ ನುಗ್ಗಿದ ನೀರು, ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್
ಪ್ರಭಾರಿ ಮುಖ್ಯಶಿಕ್ಷಕಿ ಸುನಂದಾ ಕೊಂಗೆ ಅವರು ವಿದ್ಯಾರ್ಥಿಗಳಿಗೆ ಹೊಡೆಯುವುದು, ಮಹತ್ವಕಾಂಕ್ಷಿ ಯೋಜನೆಯಾದ ಮಧ್ಯಾಹ್ನ ಬಿಸಿಯೂಟ ಮಕ್ಕಳಿಗೆ ಒದಗಿಸುವಲ್ಲಿ ವಿಫಲರಾಗಿ ಕರ್ತವ್ಯದಲ್ಲಿ ಲೋಪ, ಬೇಜವಾಬ್ದಾರಿ ಹಾಗೂ ದುರ್ನಡತೆ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಔರಾದ್ ಬಿಇಒ ಅವರು ನೀಡಿದ ಜಂಟಿ ಸಮೀಕ್ಷೆ ವರದಿ ಆಧರಿಸಿ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ