ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ ಭಾರೀ ಹಿನ್ನಡೆಯಾಗಿದೆ. ಅವರೀಗ ಗಣೇಶನಿಗೆ ಗಂಟು ಬಿದ್ದಿದ್ದಾರೆ.
‘ಆರ್‌ಎಸ್‌ಎಸ್‌ನವರು ಮುಸ್ಲಿಮರಂತೆ ವೇಷ ಹಾಕಿ ಗಲಭೆ ನಡೆಸುವ ಹುನ್ನಾರ ನಡೆಸಿದ್ದಾರೆ. ದೇಶಾದ್ಯಂತ ಗಲಭೆ ಸೃಷ್ಟಿಸುವ ಯೋಜನೆಗಳು ಸಿದ್ಧವಾಗಿವೆ ಎಂಬ ಮಾಹಿತಿ ನನಗೆ ಬಂದಿದೆ’ ಎಂದು ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು, ಮಾರ್ಚ್ 1948ರಲ್ಲಿ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಪತ್ರ ಬರೆದಿದ್ದರು.
ಸಂಘದ ಸಮಾಜಘಾತಕ ಚಟುವಟಿಕೆಗಳ ಮೇಲಿನ ಕಳವಳದಿಂದಾಗಿ ಆರ್‌ಎಸ್‌ಎಸ್ ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿ 1948ರಲ್ಲಿಯೇ ನಿಷೇಧಿಸಲಾಗಿತ್ತು. ಅಂದರೆ, ಹಿಂದು-ಮುಸ್ಲಿಮರಲ್ಲಿ ಭಿನ್ನ ಬಗೆದು, ಕೋಮುದ್ವೇಷ ಬಿತ್ತಿ ದೇಶವನ್ನು ಒಡೆಯುವ ಕೃತ್ಯದಲ್ಲಿ ಆರ್‌ಎಸ್‌ಎಸ್ ಆಗಲೇ ಕಾರ್ಯಪ್ರವೃತ್ತವಾಗಿತ್ತು. ಸಂಘ ತನ್ನ ಮೇಲೆ ಅನುಮಾನ ಬರದಿರಲಿ, ವಿಧ್ವಂಸಕ ಕೃತ್ಯಗಳಿಗೆಲ್ಲ ಕಾರಣ ಮುಸ್ಲಿಮರು ಎಂದುಕೊಳ್ಳಲಿ ಎಂದು ವೇಷ ಹಾಕುವ ಕಲೆಯನ್ನೂ ಕರಗತ ಮಾಡಿಕೊಂಡಿತ್ತು.
ಭಾರತೀಯ ಜನತಾ ಪಕ್ಷಕ್ಕೆ ಸೈದ್ಧಾಂತಿಕ ತಳಹದಿಯನ್ನು ಹಾಕಿಕೊಟ್ಟಿದ್ದು ಹಾಗೂ ಸಂಘಟನಾ ಶಕ್ತಿಯನ್ನು ಒದಗಿಸಿದ್ದು ಮತ್ತು ಒದಗಿಸುತ್ತಿರುವುದು ಆರ್‌ಎಸ್‌ಎಸ್ ಎಂಬುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಹಾಗಾಗಿಯೇ ಆರ್‌ಎಸ್‌ಎಸ್‌ನ ಆ ವೇಷ ಹಾಕುವ ಕಾರ್ಯವಿಧಾನವನ್ನು ಬಿಜೆಪಿ ಈಗ, ಹೊಸ ಕಾಲಕ್ಕೆ ತಕ್ಕಂತೆ ಹಲವು ಸುಧಾರಿತ ರೂಪಗಳಲ್ಲಿ ಮುಂದುವರೆಸಿಕೊಂಡು ಬಂದಿದೆ. ಅದಕ್ಕೆ ಸಾಕ್ಷಿಯಾಗಿ ನೂರಾರು ಉದಾಹರಣೆಗಳನ್ನು ನೀಡಬಹುದಾಗಿದೆ.
ಕರ್ನಾಟಕದ ಮಟ್ಟಿಗೆ ನೋಡುವುದಾದರೂ, ಹಲವು ಘಟನೆಗಳನ್ನು ಉದಾಹರಿಸಬಹುದು. ಅಂಥದ್ದೇ ಒಂದು, ಮೊನ್ನೆ ಬೇಲೂರಿನಲ್ಲಿ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಘಟನೆ. ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಮುಂಭಾಗದ ಬೇಲೂರು ಪುರಸಭೆ ಆವರಣದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಬೆಳಗ್ಗೆ ಭಕ್ತರು ಕೈಮುಗಿಯಲು ಹೋದಾಗ ದೇವರಿಗೆ ಚಪ್ಪಲಿ ಹಾರ ಹಾಕಿದ್ದು ಕಂಡು ಹೌಹಾರಿದರು, ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ
ದೇವರಿಗೆ- ಗಣೇಶನಿಗೆ ಚಪ್ಪಲಿ ಹಾರ ಎನ್ನುವುದು ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ಘಾಸಿಗೊಳಿಸುವ ವಿಚಾರ. ಅದು ಬಿಜೆಪಿಗೆ ಬಹುಸಂಖ್ಯಾತರನ್ನು ಬಡಿದೆಬ್ಬಿಸಲು, ಬಳಸಿಕೊಳ್ಳಲು, ಅಲ್ಪಸಂಖ್ಯಾತರ ಮೇಲೆ ಎತ್ತಿಕಟ್ಟಲು ಬಹು ಸುಲಭವಾಗಿ ಸಿಗುವ ಸರಕು. ಅಂಥದ್ದೇ ಘಟನೆಯಾದ, ಮದ್ದೂರಿನ ಗಣೇಶನ ಮೆರವಣಿಗೆ ಮೇಲೆ ಕಲ್ಲು ಹೊಡೆದರು, ಉಗುಳಿದರು ಎಂಬುದನ್ನು ಮುಂದಿಟ್ಟುಕೊಂಡು, ಮದ್ದೂರನ್ನು ದ್ವೇಷದ ಮಡುವಿನಲ್ಲಿ ಮುಳುಗಿಸಿದ್ದರು.
ಅದೇ ಯೋಚನೆಯಲ್ಲಿ ಬಿಜೆಪಿಯ ನಾಯಕರು ನಾಲಗೆ ಮಸೆದುಕೊಂಡು, ‘ಚಪ್ಪಲಿ ಹಾರ ಹಾಕಿದವರ ಮನೆಯನ್ನು ಬುಲ್ಡೋಜರ್‍ನಿಂದ ನೆಲಸಮ ಮಾಡಬೇಕು’ ಎಂದು ಕೂಗಾಡಿದ್ದರು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮುಸ್ಲಿಮರ ಮನೆಗಳನ್ನು ಬುಲ್ಡೋಜರ್ ಬಳಸಿ ಕೆಡವಿದ ಕಾನೂನನ್ನು, ಇಲ್ಲಿಗೂ ತರಬೇಕೆಂದು ಕೆಂಡಕಾರಿದ್ದರು. ಆ ಕೆಂಡವನ್ನು ಬೆಂಕಿಯಾಗಿಸಿ ನಾಡಿಗೆ ಹಂಚಿದ್ದರು ಗೋದಿ ಮೀಡಿಯಾದ ಪತ್ರಕರ್ತರು.
ಶಿಲ್ಪಕಲೆಯ ಬೀಡಾದ ಬೇಲೂರು ಇನ್ನೇನು ಹೊತ್ತಿ ಉರಿಯಲಿದೆ ಎನ್ನುವಾಗ, ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ ಆರೋಪಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆಕೆ ಹಾಸನದ ವಿಜಯನಗರ ಬಡಾವಣೆ ನಿವಾಸಿ ಲೀಲಮ್ಮನಾಗಿದ್ದು, ಮಾನಸಿಕ ಅಸ್ವಸ್ಥೆ ಎಂದರು. ಆಕೆ ಹೆಂಗಸು, ಜೊತೆಗೆ ಹಿಂದೂ ಎನ್ನುವುದು ಬಿಜೆಪಿಗರ ಬೆಂಕಿಗೆ ತಣ್ಣೀರು ಸುರಿದಿತ್ತು. ಆದರೂ ಬಿಡದ ಬಿಜೆಪಿ ಶಾಸಕ ಸುರೇಶ್, ಬೇಲೂರು ಬಂದ್‌ಗೆ ಕರೆಕೊಟ್ಟರು, ಲೀಲಮ್ಮನ ಹಿಂದೆ ಬೇರೆ ಯಾರೋ ಇದ್ದಾರೆ ಎಂದು ವಿಷಬೀಜ ಬಿತ್ತಲು ಹವಣಿಸಿದರು.
ಇದು ಬೇಲೂರಿನ ಕತೆಯಾದರೆ, ಇದೇ ರೀತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿಯೂ ರಾತ್ರೋರಾತ್ರಿ ಸರ್ಕಾರಿ ಜಾಗದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಸಾಲದು ಎಂದು, ‘ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡುವ ಸಲುವಾಗಿ ಸ್ವಚ್ಛತಾ ಕಾರ್ಯ ಮಾಡುವಾಗ ಪುರಾತನ ಕಾಲದ ಗಣಪತಿ ವಿಗ್ರಹ ಸಿಕ್ಕಿದೆ. ಅದನ್ನು ಜೀರ್ಣೋದ್ಧಾರ ಮಾಡುವ ಸಲುವಾಗಿ ಭಕ್ತಾದಿಗಳೆಲ್ಲರೂ ಸೇರಬೇಕಾಗಿ ವಿನಂತಿ’ ಇದು ಕೆ.ಆರ್.ಪೇಟೆ ನಾಗರಿಕರ ವೇದಿಕೆ ಎಂಬ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಮೊನ್ನೆ ಸಂದೇಶ ಹರಿದಾಡಿತ್ತು.
ತಕ್ಷಣ ಪುರಸಭೆ ಮುಖ್ಯಾಧಿಕಾರಿ, ಪೊಲೀಸ್ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಅನಧಿಕೃತ ವಿಗ್ರಹವನ್ನು ತೆರವುಗೊಳಿಸಲು ಸೂಚಿಸಿದರು. ಅನುಮತಿ ಇಲ್ಲದೆ ವಿಗ್ರಹವನ್ನು ತಂದು ಇಟ್ಟಿದ್ದವರೇ ಸ್ವಯಂಪ್ರೇರಿತವಾಗಿ ತೆರವು ಮಾಡಿದರು. ಮಂಡ್ಯ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಕೋಮು ಪ್ರಯೋಗಗಳ ಭಾಗವಾಗಿ ಕೆ.ಆರ್. ಪೇಟೆಯಲ್ಲಿ ಗಣಪತಿ ಉದ್ಭವದ ಕಥೆ ಹುಟ್ಟಿದೆ. ಬಹುಸಂಖ್ಯಾತರನ್ನು ಸೆಳೆಯಲು ಸಂಘಪರಿವಾರದ ವಾಟ್ಸ್ಯಾಪ್ ಗುಂಪು ಜಾಗೃತವಾಗಿದೆ. ಮುಂದಾಗಬಹುದಾಗಿದ್ದ ಭಾರೀ ಅನಾಹುತವನ್ನು ಅರಿತ ಅಧಿಕಾರಿಗಳು, ಕೋಮುದಳ್ಳುರಿಯಿಂದ ಕೆ.ಆರ್. ಪೇಟೆಯನ್ನು ಬಚಾವು ಮಾಡಿದರು.
ಶ್ರೀರಂಗಪಟ್ಟಣ, ಕೆರಗೋಡು, ನಾಗಮಂಗಲ, ಮದ್ದೂರು- ಈ ಎಲ್ಲ ಕಡೆ ಧರ್ಮದ ಹೆಸರಲ್ಲಿ ಸಂಘರ್ಷ ಸೃಷ್ಟಿ ಮಾಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಕೆ.ಆರ್.ಪೇಟೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಏಕೆಂದರೆ, ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ ಮತ್ತು ದಸರಾದಲ್ಲಿ ಭಾರೀ ಹಿನ್ನಡೆಯಾಗಿದೆ. ಅವರೀಗ ಗಣೇಶನಿಗೆ ಗಂಟುಬಿದ್ದಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ?: ‘ಇಲ್ಲಿ ಯಾರೂ ಭಿನ್ನರಲ್ಲ, ಯಾರೂ ಪರಕೀಯರಲ್ಲ’: ಬಾನು ಮುಷ್ತಾಕ್ ಅವರ ದಸರಾ ಉದ್ಘಾಟನಾ ಭಾಷಣ
ಹಾಗಾಗಿಯೇ, ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ ಗಲಭೆಗಳು ಸಾಮಾನ್ಯವಾಗುತ್ತಿವೆ. ಬಿಜೆಪಿ ಮತ್ತು ಸಂಘಪರಿವಾರ ಧರ್ಮದ ಆಧಾರದ ಮೇಲೆ ಮನಸ್ಸುಗಳನ್ನು ಒಡೆದಾಳುತ್ತಿವೆ. ಅದನ್ನು ಸಂಯಮದಿಂದ ನೋಡಿ, ನಿಜ ನುಡಿಯಬೇಕಾದ ಕನ್ನಡದ ಸುದ್ದಿ ಮಾಧ್ಯಮಗಳು ಹೇಗೆ ವರ್ತಿಸುತ್ತಿವೆ ಮತ್ತು ಯಾವ ಬಗೆಯ ಅಭಿಪ್ರಾಯ ರೂಪಿಸುತ್ತಿವೆ ಎನ್ನುವುದು ತೀರಾ ಆತಂಕಕಾರಿಯಾಗಿದೆ. ಸಹಬಾಳ್ವೆ, ಸೌಹಾರ್ದ, ಸಮಾನತೆ ಬಗ್ಗೆ ಮಾತನಾಡುವವರನ್ನು ಹಾಗೂ ಅನ್ಯಾಯಗಳನ್ನು ಪ್ರಶ್ನಿಸುತ್ತಿರುವವರನ್ನು ಧರ್ಮದ್ರೋಹಿಗಳನ್ನಾಗಿ ಮಾಡಿವೆ. ದುರಾಚಾರಗಳ ಹಿಂದಿರುವ ಪ್ರಭಾವಿಗಳನ್ನು ಸಮರ್ಥಿಸುವುದು ದಿನನಿತ್ಯದ ದಂಧೆಯನ್ನಾಗಿಸಿಕೊಂಡಿವೆ.
ಈಗಲೂ ನಾವು, ಇದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನಾಗದೆ, ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯಬೇಕಿದೆ. ನಮ್ಮನ್ನು ಕಾಪಾಡಬೇಕಾಗಿದ್ದ ದೇವರು, ರಕ್ಷಿಸಬೇಕಾಗಿದ್ದ ಧರ್ಮಗಳು ಇಂದು ನಮ್ಮನ್ನು ವಿಭಜಿಸಿರುವುದನ್ನು ಜನರಿಗೆ ಮನದಟ್ಟು ಮಾಡಿಸಬೇಕಾಗಿದೆ. ದೇವರು-ಧರ್ಮದ ದುರುಪಯೋಗದಿಂದ ಸಮಾಜಕ್ಕೆ ಎಂದೂ ಒಳಿತಾಗುವುದಿಲ್ಲ; ಚರಿತ್ರೆಯೂ ಅದನ್ನು ಹೇಳುತ್ತದೆ ಎಂಬುದನ್ನು ಗಟ್ಟಿಯಾಗಿ-ದಿಟ್ಟವಾಗಿ ಹೇಳುತ್ತಲೇ ಇರಬೇಕಾಗುತ್ತದೆ.
