ಸೋಮವಾರದಿಂದ (ಸೆ.22) ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷೆ ಆರಂಭಗೊಂಡಿದೆ. ರಾಜ್ಯಾದ್ಯಂತ ಸಮೀಕ್ಷೆಗಳು ನಡೆಯುತ್ತಿವೆ. ಆದರೆ, ಸಮೀಕ್ಷೆಯ ಉದ್ಯೋಗ ಕಾಲಂನಲ್ಲಿ ಎನ್‌ಜಿಒ ರೀತಿಯ ಸ್ವಯಂ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕುರಿತಾದ ಅಂಶವು ಬಿಟ್ಟುಹೋಗಿದೆ. ಹೀಗಾಗಿ, ಸ್ವಯಂ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ‘ಕಾಲಂ ನಂ.27ಸಿ’ನಲ್ಲಿ ಇತರೆ ಕ್ಷೇತ್ರಗಳ ಅಡಿಯಲ್ಲಿ ತಮ್ಮ ಉದ್ಯೋಗವನ್ನು ದಾಖಲಿಸಬೇಕೆಂದು ‘ಹಿಂದುಳಿದ ವರ್ಗಗಳ ಆಯೋಗ’ ಕರೆ ಕೊಟ್ಟಿದೆ.
ಸ್ವಯಂ ಸೇವಾ ಸಂಸ್ಥೆಗಳಲ್ಲಿ ಉದ್ಯೋಗ ಮಾಹಿತಿಯನ್ನು ಕೈಬಿಟ್ಟಿರುವ ಕುರಿತು ‘ಕರ್ನಾಟಕ ನಗರ ಮತ್ತು ಗ್ರಾಮಾ ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ (ಫೆ ವಾರ್ಡ್) ಮುಖಂಡರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯಕ್ ಅವರನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ. ಈ ವೇಳೆ, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಉದ್ಯೋಗ ಮಾಹಿತಿ ಬಿಟ್ಟುಹೋಗಿರುವ ಬಗ್ಗೆ ಆಯೋಗದ ಅಧ್ಯಕ್ಷರು ಗಮನಿಸಿದ್ದಾರೆ.
“ಎನ್‌ಜಿಒ ರೀತಿಯ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಅನುಭಂದ-1ರ ಕಾಲಂ-28ರಲ್ಲಿ ಉದ್ಯೋಗಿ ಎಂದು ನಮೂದಿಸಬೇಕು. ಅನುಬಂಧ-2ರ ಕಾಲಂ-27ಸಿನಲ್ಲಿ ಉದ್ಯೋಗದ 2ನೇ ಸಾಲಿನಲ್ಲಿ ಸ್ವಯಂ ಸೇವಾ ಕ್ಷೇತ್ರ ವಲಯ ಎಂದು ಬರೆಸಬೇಕು. ಅದೇ ಕಾಲಂನ 12ನೇ ಕ್ರಮ ಸಂಖ್ಯೆಯಲ್ಲಿ ‘ಇತರೆ ನಮೂದಿಸಿ’ ಪಟ್ಟಿಯಲ್ಲಿ ಸ್ವಯಂ ಸೇವಾ ಕ್ಷೇತ್ರವೆಂದು ದಾಖಲಿಸಿ, ಅದರಲ್ಲಿ, ಆಡಳಿತ ವರ್ಗ/ ತಾಂತ್ರಿಕ ವರ್ಗ/ ಸಿಬ್ಬಂದಿ ವರ್ಗ ಎಂಬಲ್ಲಿ ತಾವು ನಿರ್ವಹಿಸುತ್ತಿರುವ ಕೆಲಸ ಮಾಹಿತಿಯನ್ನು ದಾಖಲಿಸಬೇಕು” ಎಂದು ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ತಿಳಿಸಿದ್ದಾರೆ.

ಈ ಬಗ್ಗೆ, ‘ಈದಿನ.ಕಾಮ್’ ಜೊತೆ ಮಾತನಾಡಿದ ‘ಫೆ ವಾರ್ಡ್-ಕ’ ಕಾರ್ಯಕ್ರಮ ವ್ಯವಸ್ಥಾಪಕರಾದ ಕೃಷ್ಣಮೂರ್ತಿ ಎಂ.ಎಸ್ ಅವರು, “ಸಮೀಕ್ಷೆಯಲ್ಲಿ ಉತ್ಪಾದನಾ, ಉದ್ದಮೆದಾರ, ಹೋಟೆಲ್ ಉದ್ಯೋಗಿಗಳು, ಹಣಕಾಸು, ನಿರ್ಮಾಣ, ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ, ಭದ್ರತಾ ವಲಯ, ಮನೆಗೆಲಸ – ಎಲ್ಲ ಕ್ಷೇತ್ರಗಳ ಉದ್ಯೋಗಗಳ ಮಾಹಿತಿಯನ್ನು ಒಳಗೊಂಡಿದೆ. ಆದರೆ, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾತ್ತಿರುವವರನ್ನು ಉದ್ಯೋಗ ಮಾಹಿತಿ ಅನುಬಂಧದಲ್ಲಿ ಕೈಬಿಡಲಾಗಿದೆ. ಈ ಕುರಿತು ಆಯೋಗದ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಈ ಕ್ಷೇತ್ರವನ್ನು ಕೈಬಿಟ್ಟಿದ್ದೇವೆಂದು ಅವರಿಗೂ ಅನ್ನಿಸಿದೆ. ಹೀಗಾಗಿ, ಸ್ವಯಂ ಸೇವಾ ಕ್ಷೇತ್ರದಲ್ಲಿರುವವರ ಉದ್ಯೋಗ ಮಾಹಿತಿಯನ್ನು ಕಾಲಂ-27ಸಿನಲ್ಲಿ ನೋಂದಾಯಿಸಿಕೊಳ್ಳುವಂತೆ ಸಮೀಕ್ಷಾ ಸಿಬ್ಬಂದಿಗೆ ಸೂಚಿಸುತ್ತೇವೆ ಸ್ವಯಂ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೂ ಈ ಬಗ್ಗೆ ಮಾಹಿತಿ ಕೊಡಬೇಕು. ಅದಕ್ಕಾಗಿ ಪ್ರಚಾರ ಮಾಡಬೇಕೆಂದು ಆಯೋಗದ ಅಧ್ಯಕ್ಷರು ಸೂಚಿಸಿದ್ದಾರೆ” ಎಂದು ತಿಳಿಸಿದ್ದಾರೆ.