ಧಾರವಾಡ ಜಿಲ್ಲೆಯ ತಾಲೂಕುಗಳ ಪೈಕಿ ಕುಂದಗೋಳ ಹಿಂದುಳಿದ ತಾಲೂಕು ಎನಿಸಿಕೊಂಡಿದೆ. ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಹಿಂದುಳಿದಿರುವ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರೂ ಹೆರಿಗೆ ವೈದ್ಯರಿಲ್ಲದೆ ಗರ್ಭಿಣಿಯರು ಪರದಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನೇ ದೇವಸ್ಥಾನಗಳಂತೆ ನೋಡುವ ಬಡ ರೋಗಿಗಳು ಸಣ್ಣ ಪುಟ್ಟ ಚಿಕಿತ್ಸೆಗೂ ನಗರದ ಕಡೆಗೆ ಓಡಬೇಕಾದ ಪರಿಸ್ಥಿತಿ ಇದೆ. ಈ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಈದಿನ.ಕಾಂ ಜೊತೆಗೆ ಸಾರ್ವಜನಿಕರು ತಮ್ಮ ಅಳಲು ಬಿಚ್ಚಿಟ್ಟಿದ್ದಾರೆ.
ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಒಬ್ಬರೇ ಒಬ್ಬ ಹೆರಿಗೆ ವೈದ್ಯರು ಇಲ್ಲದಿರುವುದಕ್ಕೆ ಸರ್ಕಾರವೇ ತಲೆತಗ್ಗಿಸುವ ಪರಿಸ್ಥಿತಿ ಎದುರಾಗಿದೆ. ಈ ಆಸ್ಪತ್ರೆಯಲ್ಲಿ ಒಬ್ಬರೇ ಒಬ್ಬ ಎಂಬಿಬಿಎಸ್ ಮುಗಿಸಿದ ವೈದ್ಯರಿಲ್ಲದ ಪರಿಣಾಮ; ರೋಗಿಗಳು, ಗರ್ಭಿಣಿಯರು ಹೆಚ್ಚಿನ ಚಿಕಿತ್ಸೆಗಾಗಿ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೋ ಅಥವಾ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೋ ಹೋಗಬೇಕಾಗುತ್ತದೆ. ಕೆಲವೊಮ್ಮೆ ಹುಬ್ಬಳ್ಳಿ ತಲುಪುವ ಮಾರ್ಗಮಧ್ಯದಲ್ಲಿಯೇ ಸಾವಿಗೀಡಾದ ಉದಾಹರಣೆಗಳಿವೆ ಎನ್ನುತ್ತಾರೆ ಸ್ಥಳೀಯರು. ಇನ್ನು ಸುತ್ತಮುತ್ತಲಿನ ಗ್ರಾಮಗಳ ಸರ್ಕಾರಿ ಆಸ್ಪತ್ರೆಯ ವೈದ್ಯರೂ ಅನಿವಾರ್ಯವಾಗಿ ಹುಬ್ಬಳ್ಳಿ ಕಿಮ್ಸ್‌ಗೆ ಬರೆದು ಕಳಿಸಿಕೊಡುವುದನ್ನು ರೂಢಿಸಿಕೊಂಡಿದ್ದಾರೆ. ಈ ಕುರಿತು ಇದುವರೆಗೂ ಯಾವುದೇ ಅಧಿಕಾರಿ, ಜನಪ್ರತಿನಿಧಿ ಅಥವಾ ಸರ್ಕಾರ ತಲೆಕೆಡಿಕೊಳ್ಳುತ್ತಿಲ್ಲವೇಕೆ? ಎಂಬುದು ಸಾರ್ವಜನಿಕರ ಪ್ರಶ್ನೆ.
ಈ ಕುರಿತು ಸ್ಥಳೀಯ ನಿವಾಸಿ ಮಂಜುನಾಥ ಕುರಬರ ಮಾತನಾಡಿ, “ರಾತ್ರಿ ಸಮಯದಲ್ಲಿ ರೋಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋದಾಗ; ರೋಗಿಗೆ ಗಂಭೀರ ಸ್ಥಿತಿಯಲ್ಲಿದ್ದಾಗ ನಮ್ಮಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ವೈದ್ಯಕೀಯ ಸಲಕರಣೆಗಳಿಲ್ಲ. ಹಾಗಾಗಿ ನೀವು ಕಿಮ್ಸ್‌ಗೆ ಹೋಗಲು ಬರೆದುಕೊಡುತ್ತಾರೆ. ಆಗ ಅನಿವಾರ್ಯವಾಗಿ ದೂರದ ಆಸ್ಪತ್ರೆಗೆ ಹೋಗಲೇಬೇಕು. ನಾವು ರೋಗಿಯನ್ನು ನೋಡುವುದಿಲ್ಲ ಎಂದಾಗ; ನಾವೇನಾದರೂ ಪ್ರತಿಭಟಿಸಿ ಮಾತನಾಡಬಹುದು. ಇಲ್ಲಿ ಹೆಚ್ಚಿನ ಸೌಲಭ್ಯಗಳೇ ಇಲ್ಲ ಎಂದು ಹೇಳಿದಾಗ ನಮಗೂ ಏನೂ ಮಾತನಾಡಲು ಆಗುವುದಿಲ್ಲ. ಈ ಮೊದಲು ಶಾರದಾ ಮೇಡಮ್ ಅಂತ ಎಂಬಿಬಿಎಸ್ ಮುಗಿಸಿದ ವೈದ್ಯರಿದ್ದರು. ಆದರೆ ಏನಾಯಿತೋ ಗೊತ್ತಿಲ್ಲ. ಇತ್ತೀಚೆಗೆ ಆ ವೈದ್ಯರೂ ಇಲ್ಲ. ಇದರಿಂದ ಗರ್ಭಿಣಿಯರಿಗಂತೂ ಬಹಳಷ್ಟು ಸಮಸ್ಯೆ ಉಂಟಾಗುತ್ತವೆ. ಈ ಸಮಸ್ಯೆಗೆ ಆದಷ್ಟು ಬೇಗನೆ ಪರಿಹಾರ ಕಂಡುಕೊಳ್ಳುವ ಕೆಲಸವಾಗಬೇಕಿದೆ” ಎಂದರು.

ಸಂಶಿ ನಿವಾಸಿ ರೇಣುಕಾ ಮಾತನಾಡಿ, “ಯಾವುದೇ ಹೆರಿಗೆ ಎಮರ್ಜೆನ್ಸಿ ಇದ್ದರೆ ಸಮಸ್ಯೆ ಉಂಟಾಗುತ್ತದೆ. ಮೊನ್ನೆ ತಾನೆ ಸಂಶಿ ಗ್ರಾಮದ ಓರ್ವ ಮಹಿಳೆಗೆ ಬಿಪಿ ಹೆಚ್ಚಾಗಿ ತಾಲೂಕು ಆಸ್ಪತ್ರೆಗೆ ಬರಲು, ಅಲ್ಲಿ ವೈದ್ಯರಿಲ್ಲದೆ ಪರದಾಡುವಂತಾಯಿತು. ಕೊನೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಆಟೋ ಮಾಡಿಕೊಂಡು ಹೋದರೆ; ತದನಂತರ ಹೊಟ್ಟೆಯಲ್ಲಿಯೇ ಕೂಸು ಸತ್ತುಹೋಗಿತ್ತು. ಈ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ರೋಗಿಯನ್ನು ಹುಬ್ಬಳ್ಳಿ ತನಕ ಕೊಂಡೊಯ್ಯುವ ಮಾರ್ಗಧ್ಯೆ ಏನಾದರೂ ಕೆಡಕಾದರೆ ಯಾರು ಹೊಣೆ? ಹೀಗಾಗಿ ಕುಂದಗೋಳ ತಾಲೂಕು ಆಸ್ಪತ್ರಯಲ್ಲಿ ಹೆರಿಗೆ ವೈದ್ಯರು ಇರುವಂತಾಗಲಿ ಮತ್ತು ಉಚಿತವಾಗಿ ಮಾಡಿಸಬಹುದಾದ ಸ್ಕ್ಯಾನಿಂಗ್ ವ್ಯವಸ್ಥೆಯೇ ಈ ದಾವಾಖಾನೆಯಲ್ಲಿ ಇಲ್ಲ. ಖಾಸಗಿ ಲ್ಯಾಬ್‌ಗಳಲ್ಲಿ ದುಬಾರಿ ಹಣಕೊಟ್ಟು ಸ್ಕ್ಯಾನ್ ಮಾಡಿಸಬೇಕು” ಎಂದರು.
ಇನ್ನು ಎಂಬಿಬಿಎಸ್ ಮುಗಿಸಿದವರು ಹೆಜ್ಜೆಗೊಬ್ಬರು ಕಂಡರೂ ಇಂತಹ ಸಮಸ್ಯೆಗಳು ಏಕೆ ಉಂಟಾಗುತ್ತಿವೆ? ಅವರೇಕೆ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸದೆ ಖಾಸಗಿ ಆಸ್ಪತ್ರೆ ಕಟ್ಟಿಕೊಂಡು ಬ್ಯುಸಿನೆಸ್ ಶುರು ಮಾಡುತ್ತಾರೆ? ಎಂಬ ಪ್ರಶ್ನೆಗಳು ಮೂಡುವುದು ಸಹಜವಾಗಿದೆ. ಗ್ರಾಮೀಣ, ಹೋಬಳಿ ಮತ್ತು ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ಹಿಂಜರಿಯುವ ವೈದ್ಯರು ಸರ್ಕಾರಕ್ಕೆ ಹಣ ಪಾವತಿಸಿ ಇಂತಹ ಆಸ್ಪತ್ರೆಗಳಿಂದ ದೂರವೇ ಉಳಿಯುತ್ತಾರೆ. ತಮ್ಮ ಸ್ವಂತದ ಕ್ಲಿನಿಕ್ ನಡೆಸುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಹೋದಾಗ; ಇದರಿಂದ ಜನರು ಚಿಕಿತ್ಸೆ ಪಡೆಯಲು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಮೊರೆಹೋಗುತ್ತಾರೆ.
ಈ ಕುರಿತು ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಆರ್ ಪಾಟೀಲ್ ಈದಿನ.ಕಾಂ ಜೊತೆಗೆ ಮಾತನಾಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೂ ವಿನಂತಿಸಲಾಗಿದೆ. ವಿಧಾನಸೌಧದಲ್ಲೂ ಧ್ವನಿಯೆತ್ತಿದರೂ ಸರ್ಕಾರ ಸ್ಪಂದನೆ ಸರಿಯಾಗಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಧಾರವಾಡ | ನಾರಿಯರು ಶಕ್ತರಾದರೆ, ಸಮಾಜ ಶಕ್ತಿಯುತವಾಗುತ್ತದೆ: ಗಿರೀಶಗೌಡ ಪಾಟೀಲ
ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಬರುವವರ ಪೈಕಿ ಬಹುತೇಕರು ಬಡವರೇ ಆಗಿರುತ್ತಾರೆ. ವೈದ್ಯರ ಕೊರತೆ ಸಮಸ್ಯೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕಿದೆ. ಮತ್ತು ಎಂಬಿಬಿಎಸ್ ಮುಗಿಸಿದ ಪ್ರತಿಯೊಬ್ಬರೂ ಗ್ರಾಮೀಣ, ಹೋಬಳಿ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವುದು ಕಡ್ಡಾಯ ಎಂದು ಹೇಳುವ ಕಠಿಣ ಕಾಯ್ದೆ ತರಬೇಕು ಎನ್ನುತ್ತಾರೆ ಸಾರ್ವಜನಿಕರು. ಒಟ್ಟಿನಲ್ಲಿ ಕುಂದಗೋಳ ತಾಲೂಕಿನ ಜನರು ವೈದ್ಯರಿಗಾಗಿ ಹುಡುಕಾಟ ನಡೆಸಿರುವುದಂತೂ ಸತ್ಯ. ಆದಷ್ಟು ಬೇಗನೇ ವೈದ್ಯರ ನೇಮಕವಾಗಲಿ ಎಂಬುದು ಜನರ ಒತ್ತಾಯ.