ಮಾನಸಿಕ ಒತ್ತಡದಿಂದ ಜರ್ಜರಿತರಾಗಿ ತಪ್ಪು ಮಾಡಿ ಅಪರಾಧಿಗಳಾಗುವ ಕಾರಾಗೃಹ ಸೇರುವವರಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಬಹಳ ಮುಖ್ಯವಾಗಿದ್ದು, ಅದು ಕ್ರೀಡೆಗಳಿಂದ ಮಾತ್ರ ಸಿಗಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ), ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಕೊಪ್ಪಳ ಇವರ ಸಹಯೋಗದಲ್ಲಿ ಜಿಲ್ಲಾ ಕಾರಾಗೃಹ ಬಂಧಿಗಳಿಗಾಗಿ ಹಮ್ಮಿಕೊಂಡಿದ್ದ ‘ಸ್ವಾಸ್ಥ್ಯ ಸಂಕಲ್ಪ’ ಎಂಬ ಕ್ರೀಡೋತ್ಸವದಲ್ಲಿ ಅವರು ಮಾತನಾಡಿದರು.
“ಮನಸ್ಸಿನ ಆಲೋಚನೆಗಳು ಸರಿ ಇಲ್ಲದಿರುವಾಗ ವ್ಯಕ್ತಿ ಅಪರಾಧಿಕ ಚಟುವಟಿಕೆಗಳ ಕಡೆ ಗಮನ ನೀಡುತ್ತಾನೆ. ಬಂಧಿಗಳು ತಿಳಿವಳಿಕೆಯಿಲ್ಲದೆ ಮಾಡಿದ ತಪ್ಪುಗಳನ್ನು ಮರೆತು ಮಾನಸಿಕವಾಗಿ ಸದೃಢರಾಗುವಲ್ಲಿ ಕ್ರೀಡೆಯು ಬಹಳ ಮುಖ್ಯ ಪಾತ್ರವಹಿಸುತ್ತದೆ. ಉಳಿದಂತೆ ಸಖಿ ಒನ್ ಸ್ಟಾಪ್ ಸೆಂಟರ್ ನ ಅಧಿಕಾರಿ ಯಮುನಾ ಬೆಸ್ತರ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ತಪ್ಪುಗಳು ಆಗುವುದು ಸಹಜ ಆದರೆ, ಸಿಟ್ಟಿನ ಕೈಗೆ ಬುದ್ದಿ ಕೊಡದೇ ಅಪರಾಧದಂತ ತಪ್ಪುಗಳನ್ನು ಮಾಡಬೇಡಿ” ಎಂದು ಕೈದಿಗಳಿಗೆ ಕಿವಿಮಾತು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, “‘ಸಖಿ ಒನ್ ಸ್ಟಾಪ್ ಸೆಂಟರ್’ ಸಂಸ್ಥೆಯ ಮೂಲಕ ಕಾರಾಗೃಹದಲ್ಲಿ ಬಂಧಿತರಾದವರಿಗೆ ಕ್ರೀಡೆಗಳನ್ನು ಆಡಿಸುವುದರ ಮೂಲಕ ಅವರ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡಲಾಗುತ್ತದೆ. ಯಾರೂ ತಪ್ಪು ಮಾಡಬೇಕೆಂದು ಮಾಡುವುದಿಲ್ಲ. ಸಮಯ ಹಾಗೂ ಸಂದರ್ಭ ಅವರನ್ನು ಆವೇಶಕ್ಕೆ ದೂಡುತ್ತವೆ. ಆಗ ಅವರು ಆರೋಪಿ ಸ್ಥಾನದಲ್ಲಿ ನಿಲ್ಲುತ್ತಾರೆ. ನಿರಂತರವಾಗಿ ಪ್ರೇರಣೆ ಮತ್ತು ಮನಪರಿವರ್ತನೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಂತಹ ಕ್ರೀಡಾ ಕಾರ್ಯಕ್ರಮಗಳು ನಡೆಯುತ್ತಿರಬೇಕು ಆಗುತ್ತಿರಬೇಕು” ಎಂದು ಹೇಳಿದರು.
ಇದನ್ನೂ ಓದಿ: ಕೊಪ್ಪಳ | ಎಂಎಸ್ಪಿಎಲ್ ಕಾರ್ಖಾನೆ ವಿಸ್ತರಣೆ: 27 ಹೊಗೆ ಕೊಳವೆ ಬರುವುದಾಗಿ ಅಲ್ಲಮಪ್ರಭು ಬೆಟ್ಟದೂರು ಕಳವಳ
ಕಾರ್ಯಕ್ರಮದಲ್ಲಿ ಕೊಪ್ಪಳದ ಸರಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಬಸವರಾಜ್, ಜಿಲ್ಲಾ ಕಾರಾಗೃಹದ ಅಧೀಕ್ಷಕ ಅಂಬರೀಶ್ ಎಸ್ ಪೂಜಾರ್, ಬಳ್ಳಾರಿಯ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಗಾಯತ್ರಿ, ನಗರ ಪೊಲೀಸ್ ಠಾಣೆೈ ಪೊಲೀಸ್ ಇನ್ಸ್ಪೆಕ್ಟರ್ ಜೈಪ್ರಕಾಶ್, ಬಿ ಸಿ ಟ್ರಸ್ಟ್ನ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಶ್ರೀದೇವಿ, ಮಹಿಳಾ ಸಬಲೀಕರಣ ಘಟಕದ ಫಾತಿಮಾ, ಸಖಿ ಒನ್ ಸ್ಟಾಪ್ ಸೆಂಟರ್ ಘಟಕ ಆಡಳಿತಾಧಿಕಾರಿ ಯಮುನಾ, ಹುಲಿಗೆಮ್ಮ, ಕು ನಿರ್ಮಲಾ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಕಾರಾಗೃಹ ಸಿಬ್ಬಂದಿ ಇದ್ದರು.