ಸೌಜನ್ಯಪರ ಹೋರಾಟಗಾರರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿರುವ ಬೆಳ್ತಂಗಡಿಯ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಳ್ತಂಗಡಿ ಪೊಲೀಸರ ವರದಿ ಆಧರಿಸಿ ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರು ಈ ಆದೇಶ ಹೊರಡಿಸಿದ್ದಾರೆ. ಮುಂದಿನ ಒಂದು ವರ್ಷ ಕಾಲ ತಿಮರೋಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ ಎಂದು ನಿರ್ದೇಶಿಸಲಾಗಿದೆ. ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಸ್ಥಳಾಂತರಿಸಲಾಗಿದೆ.
ತಿಮರೋಡಿ ವಿರುದ್ಧ ಕೊಲೆ ಯತ್ನ, ಹಲ್ಲೆ, ಬೆದರಿಕೆ, ಸಾರ್ವಜನಿಕ ಆಸ್ತಿಗೆ ಹಾನಿ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಅವರ ಚಟುವಟಿಕೆಗಳು ಸಮಾಜಕ್ಕೆ ಅಪಾಯಕಾರಿ ಎಂದು ಬೆಳ್ತಂಗಡಿ ಪೊಲೀಸರು ವರದಿ ಮಾಡಿದ್ದರು. ಇದೇ ವರದಿಯನ್ನು ಆಧರಿಸಿ, ಜಿಲ್ಲಾಡಳಿತವು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆಯ ಸೆಕ್ಷನ್ 55ರ ಅಡಿಯಲ್ಲಿ ಗಡಿಪಾರು ಆದೇಶ ಹೊರಡಿಸಿದೆ.
ಈ ಆದೇಶದ ಪ್ರಕಾರ, ಮಹೇಶ ಶೆಟ್ಟಿ ತಿಮರೋಡಿ ಅವರು ಮುಂದಿನ ಒಂದು ವರ್ಷದ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಭಾಗಕ್ಕೆ ಪ್ರವೇಶಿಸುವಂತಿಲ್ಲ. ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Breaking News | ಆಳಂದ ಮತದಾರರ ಪಟ್ಟಿ ಅಕ್ರಮ; ತನಿಖೆಗೆ ಎಸ್‌ಐಟಿ ರಚನೆ ಸಾಧ್ಯತೆ
ಪುತ್ತೂರು ಸಹಾಯಕ ಆಯುಕ್ತ (ಎಸಿ) ಸ್ಟೆಲ್ಲಾ ವರ್ಗೀಸ್‌ಗೆ ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ವರದಿ ನೀಡಿದ್ದನ್ನು ಪರಿಶೀಲನೆ ನಡೆಸಿ ವರದಿಯ ಆಧಾರದಲ್ಲಿ ಸೆ.18 ರಂದು ಒಂದು ವರ್ಷಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಮಾಡಲಾಗಿದೆ.
ಗಡಿಪಾರು ಮಾಡಿದ ಆದೇಶ ಪ್ರತಿ ಬಂಟ್ವಾಳ ಉಪವಿಭಾಗ ಡಿವೈಎಸ್ಪಿಗೆ ತಲುಪಿದ ಬಳಿಕ ಗಡಿಪಾರು ಮಾಡುವ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಗುರುತಿಸಿ, ಅವರನ್ನು ಬಂಧಿಸಬೇಕು. ಸೌಜನ್ಯಳನ್ನು ಕೊಂದ ಆರೋಪಿಗಳಿಗೆ ಶಿಕ್ಷೆಯಾಗಬೇಕು, ಸೌಜನ್ಯಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಈ ಹೋರಾಟಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಮುಂಚೂಣಿಯಲ್ಲಿದ್ದಾರೆ. ಕರಾವಳಿ ಭಾಗದಲ್ಲಿ ಹೋರಾಟಗಳನ್ನು ಸಂಘಟಿಸುತ್ತಿದ್ದಾರೆ. ಇದೀಗ, ಧರ್ಮಸ್ಥಳದಲ್ಲಿನ ಸರಣಿ ಕೊಲೆ ಮತ್ತು ರಹಸ್ಯ ಅಂತ್ಯಕ್ರಿಯೆ ಆರೋಪ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ-ದೂರುದಾರನಾಗಿರುವ ಚಿನ್ನಯ್ಯ ಅವರನ್ನು ತಿಮರೋಡಿ ಅವರೇ ಕರೆತಂದು, ದೂರು ದಾಖಲಿಸಲು ನೆರವಾಗಿದ್ದರು. ಆದಾಗ್ಯೂ, ತಿಮರೋಡಿ ಅವರ ವಿರುದ್ಧ ಕೆಲವು ಗುಂಪುಗಳು ಮತ್ತು ಬಿಜೆಪಿಗರು ಭಾರೀ ಅಪಪ್ರಚಾರ, ಆರೋಪಗಳನ್ನು ಮಾಡಿದ್ದರು. ಇದೀಗ, ಅವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಲಾಗಿದೆ.