ಎರಡೂವರೆ ವರ್ಷದ ಹಿಂದೆ ಅಪಘಾತವಾಗಿದ್ದ ಹಿನ್ನೆಲೆ ಎಡಗಾಲಿಗೆ ಅಳವಡಿಸಿದ್ದ ರಾಡ್ ತೆಗೆಯಲು ಹೋದ ವೈದ್ಯರೊಬ್ಬರು ಎಡವಟ್ಟು ಮಾಡಿದ್ದು, ಬಲಗಾಲನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿರುವ ಘಟನೆ ಹಾಸನದ ಹಿಮ್ಸ್‌ನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಬೂಚನಹಳ್ಳಿ ಕಾವಲು ಗ್ರಾಮದ ಜ್ಯೋತಿ ಎಂಬ ಮಹಿಳೆಗೆ ಎರಡು ಬಾರಿ ಆಘಾತಕಾರಿ ಅನುಭವವಾಗಿದ್ದು, ಎರಡೂವರೆ ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ತೀವ್ರಗಾಯಗೊಂಡಿದ್ದರಿಂದ ಎಡಗಾಲಿಗೆ ರಾಡ್ ಅಳವಡಿಸಲಾಗಿತ್ತು. ಇತ್ತೀಚೆಗೆ ಆ ರಾಡ್‌ನಿಂದ ಉಂಟಾಗುತ್ತಿದ್ದ ನೋವಿನಿಂದಾಗಿ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ತೆರಳಿದಾಗ ವೈದ್ಯರು ರಾಡ್ ತೆಗೆಸುವುದಾಗಿ ಹೇಳಿದ್ದರು.
ವೈದ್ಯ ಸಂತೋಷ್ ಎಂಬುವವರ ನಿರ್ದೇಶನದ ಮೇರೆಗೆ ಜ್ಯೋತಿ ರಾಡ್ ತೆಗೆಸಲು ಮುಂದಾದಾಗ ಎಡಗಾಲಿನ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ನಿರ್ಲಕ್ಷ್ಯತೆ ಮೆರೆದಿದ್ದಾರೆ. ಇದೀಗ ಜ್ಯೋತಿಯವರ ಎರಡೂ ಕಾಲುಗಳಿಗೂ ಗಾಯಗಳಾಗಿದ್ದು, ಹಾಸಿಗೆ ಹಿಡಿಯುವಂತಾಗಿದೆ.
ಇದರಿಂದ ಆಘಾತಗೊಂಡ ವೈದ್ಯರು ತಪ್ಪನ್ನು ಒಪ್ಪಿಕೊಂಡು, ಶನಿವಾರ ಸಾಯಂಕಾಲ ಎಡಗಾಲಿನ ರಾಡ್‌ನ್ನೂ ತೆಗೆದರು. ಇದೀಗ ಎರಡೂ ಕಾಲುಗಳಲ್ಲೂ ಗಾಯಗಳಿಂದ ಬ್ಯಾಂಡೇಜ್ ಸುತ್ತಿಸಿಕೊಂಡಿರುವ ಜ್ಯೋತಿ, ಓಡಾಡಲು ಸಾಧ್ಯವಾಗದೆ ಹಿಮ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ತಪ್ಪಿನಿಂದ ಜ್ಯೋತಿಯ ಪರಿಸ್ಥಿತಿ ಹದಗೆಟ್ಟಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾವು ನಂಬಿಕೆಯಿಂದ ಬಂದಿದ್ದೆವು. ಆದರೆ ಇದು ಯಡವಟ್ಟು ಮಾತ್ರವಲ್ಲ, ನಮ್ಮ ಮಗಳ ಜೀವನವನ್ನೇ ಅಪಾಯಕ್ಕೆ ಒಡ್ಡಿದ್ದು, ಎರಡು ಕಾಲುಗಳನ್ನೂ ಹೀಗೆ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲೇ ಇಂತಹ ನಿರ್ಲಕ್ಷ್ಯವೇ?” ಎಂದು ಜ್ಯೋತಿಯ ಪೋಷಕರು ಕಣ್ಣೀರಿಟ್ಟರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಕಾರಾಗೃಹ ಬಂಧಿಗಳಿಗೆ ಮಾನಸಿಕ, ದೈಹಿಕ ಆರೋಗ್ಯ ಬಹುಮುಖ್ಯ: ರಾಮ್ ಎಲ್ ಅರಸಿದ್ದಿ
ಈ ಘಟನೆಯಿಂದ ಆಸ್ಪತ್ರೆಯಲ್ಲಿ ಚಿಂತೆಯ ವಾತಾವರಣವಿದ್ದು, ಡಾ. ಸಂತೋಷ್ ವಿರುದ್ಧ ಗಂಭೀರ ಆರೋಪಗಳು ಎದ್ದಿವೆ.
ಸ್ಥಳೀಯರು ಮತ್ತು ಆರೋಗ್ಯ ಸಂಘಟನೆಗಳು ಈ ಎಡವಟ್ಟಿನ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿವೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಮತ್ತು ಆಸ್ಪತ್ರೆ ನಿರ್ವಹಣೆಯ ಅಧಿಕಾರಿಗಳು ಈ ವಿಷಯದಲ್ಲಿ ತಕ್ಷಣ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜ್ಯೋತಿಯ ಚಿಕಿತ್ಸೆಗಾಗಿ ಆಸ್ಪತ್ರೆಯು ಉಚಿತ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಾಗದಂತೆ ಕಟ್ಟುನಿಟ್ಟು ವ್ಯವಸ್ಥೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ.