“ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿದ್ದರೂ, ಯಾವುದೇ ಪಶು ಆಸ್ಪತ್ರೆ ಅಥವಾ ಚಿಕಿತ್ಸಾ ಕೇಂದ್ರ ಇಲ್ಲ. ಇದರಿಂದ ರೈತರು ದನಕರುಗಳು ಅನಾರೋಗ್ಯಕ್ಕೆ ಈಡಾದರೆ ತಾಲ್ಲೂಕು ಕೇಂದ್ರಕ್ಕೆ ಹೋಗುವಂತೆ ಸ್ಥಿತಿಯಾಗಿದೆ. ಕೂಡಲೇ ಪಶು ಆಸ್ಪತ್ರೆ ಸ್ಥಾಪನೆ ಮಾಡಬೇಕು” ಎಂದು ಸುತ್ತಮುತ್ತಲಿನ ಹಳ್ಳಿಗಳ ಜನರು ಒತ್ತಾಯಿಸಿದರು.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೊಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಕಲಿ, ಗೋವಿನಕೊಪ್ಪ, ನಾಗರಮಡವು, ತಂಗೋಡ ಗ್ರಾಮಗಳ ರೈತರು ಪಶುಗಳಿಗಾಗಿ ಪಶು ಆಸ್ಪತ್ರೆ ಸ್ಥಾಪನೆ ಮಾಡಬೇಕೆಂದು ಕೊಗನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
“ಜನರು ತಮ್ಮ ಜಾನುವಾರುಗಳಿಗೆ ಅನಾರೋಗ್ಯ ಕಾಣಿಸಿಕೊಂಡಾಗ ದೂರದ ಊರಿಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಇದೆ. ಇದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಜಾನುವಾರುಗಳು ಮೃತಪಟ್ಟ ಘಟನೆಗಳೂ ನಡೆದಿವೆ” ಎಂದು ಜನರು ಹೇಳಿದರು.
“ಈ ಸಮಸ್ಯೆಗಳನ್ನು ಪರಿಗಣಿಸಿ, ಕೂಡಲೇ ಕೊಗನೂರಿನಲ್ಲಿ ಪಶು ಆಸ್ಪತ್ರೆಯನ್ನು ಸ್ಥಾಪಿಸಬೇಕು” ಎಂದು ಒತ್ತಾಯಿಸಿದರು.
ಪಿಡಿಒ ಮನವಿ ಸ್ವೀಕರಿಸಿ, ಈ ಬೇಡಿಕೆಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಅಲ್ಲದೆ, ರೈತರ ಹಿತದೃಷ್ಟಿಯಿಂದ ಪಶು ಆಸ್ಪತ್ರೆ ಸ್ಥಾಪನೆಗೆ ಸರ್ಕಾರದ ನೆರವು ಪಡೆಯಲು ಪ್ರಯತ್ನಿಸುವುದಾಗಿ” ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಅನೇಕ ಯುವಕರು ರಾಖೇಶ ಬೂದಿಹಾಳ. ರಾಜು ಎಚ್, ನಾಗೇಂದ್ರ ಬೀರಬ್ಬಿ, ಶರಣಪ್ಪ ಎನ್ ಕೂರಗುಂದ, ಚನ್ನವೀರಯ್ಯ ಹಿರೇಮಠ, ಗಂಗಪ್ಪ ಇತರೆ ರೈತ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.