ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಕಾಮಕೃತ್ಯಗಳ ಲೈಂಗಿಕ ಹಗರಣ ಇಡೀ ದೇಶವನ್ನೇ ನಿಬ್ಬೆರಗುಗೊಳಿಸಿತ್ತು. ಇದೀಗ, ಅಂತಹದ್ದೇ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ದೈಹಿಕ ಶಿಕ್ಷಕನೊಬ್ಬ ಹಲವಾರು ಮಹಿಳೆಯರ ಸುಮಾರು 2,500 ಖಾಸಗಿ ವಿಡಿಯೋಗಳನ್ನು ತನ್ನ ಮೊಬೈಲ್‌ನಲ್ಲಿ ಕೊಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಖಾಸಗಿ ಶಾಲೆಯ ದೈಹಿಕ ಶಿಕ್ಷಕನಾಗಿರುವ ಮ್ಯಾಥ್ಯೂ ಎಂಬಾತನ ವಿರುದ್ಧ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಆರೋಪಿ ಮ್ಯಾಥ್ಯೂ ಹಲವು ಮಹಿಳೆಯರು ಮತ್ತು ಯುವತಿಯರ ಜೊತೆಗಿರುವ ಖಾಸಗಿ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ಆತನ ಫೋನ್‌ನಲ್ಲಿ ಸುಮಾರು 2,500 ಖಾಸಗಿ ವಿಡಿಯೋಗಳಿವೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ, ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ಆತನ ಕಾಮಕೃತ್ಯಕ್ಕೆ ತಾನೂ ತುತ್ತಾಗಿರುವುದಾಗಿ ದೂರುದಾರ ಮಹಿಳೆ ಹೇಳಿಕೊಂಡಿದ್ದಾರೆ. ದೂರಿನಲ್ಲಿ; “ನನ್ನನ್ನು ದೈಹಿಕವಾಗಿ ಮ್ಯಾಥ್ಯೂ ದುರ್ಬಳಕೆ ಮಾಡಿಒಂಡಿದ್ದಾನೆ. ಆಕೃತ್ಯವನ್ನು ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ಇದೇ ರೀತಿ, ಹಲವು ಮಹಿಳೆಯರು ಮತ್ತು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತನ್ನೆಲ್ಲ ಕೃತ್ಯಗಳನ್ನು ಆತ ವಿಡಿಯೋ ಮಾಡಿಕೊಂಡಿದ್ದಾನೆ. ಆತನ ಕೃತ್ಯದ ಹಲವು ಫೋಟೋಗಳು ಮತ್ತು ವಿಡಿಯೋಗಳನ್ನು ನಾನು ಸಂಗ್ರಹಿಸಿದ್ದೇನೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಸೌಜನ್ಯ ಕೊಲೆಯ ಪ್ರಮುಖ ಸಾಕ್ಷಿಯಾಗುವರೇ ಚಿನ್ನಯ್ಯ? ವಿಡಿಯೋದಲ್ಲಿದೆ ಅಚ್ಚರಿಯ ಹೇಳಿಕೆ
“ಮ್ಯಾಥ್ಯೂ ಮತ್ತು ನಾನು ಮದುವೆಯಾಗಿದ್ದೆವು. ಮದುವೆಯ ಬಳಿಕ ಆತನ ನಿಜ ರೂಪ ಗೊತ್ತಾಯಿತು. ಒಂದು ರಾತ್ರಿ ನಾನು ಮಲಗಿದ್ದಾಗ ನನ್ನ ಮೊಬೈಲ್ ಸಮೇತ ಆತ ಓಡಿಹೋಗಿದ್ದಾನೆ. ಆ ಮೊಬೈಲ್‌ನಲ್ಲಿ ಈತನ ಕೃತ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸಾಕ್ಷಿಗಳಿದ್ದವು” ಎಂದು ಮಹಿಳೆ ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ‘ಈದಿನ.ಕಾಮ್‘ ಜೊತೆಗೆ ಮಾತನಾಡಿದ ಕೋಣನಕುಂಟೆ ಪೊಲೀಸ್ ಠಾಣೆಯ ಸಿಬ್ಬಂದಿ, “ಮ್ಯಾಥ್ಯೂ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದೆ. ಆರೋಪಿಯನ್ನು ಇನ್ನೂ ವಶಕ್ಕೆ ಪಡೆಯಲಾಗಿಲ್ಲ” ಎಂದು ತಿಳಿಸಿದ್ದಾರೆ.