ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಮತ್ತು ಆರನೇ ಪರಿಚ್ಚೇದಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ 14ನೇ ದಿನಕ್ಕೆ ಕಾಲಿಟ್ಟಿದೆ. ಲೇಹ್‌ನಲ್ಲಿ ಪ್ರಸ್ತುತ ಸ್ಥಿತಿ ಉದ್ವಿಗ್ನತೆಗೆ ತಿರುಗಿದ್ದು, ಲೇಹ್ ಹಿಲ್ ಕೌನ್ಸಿಲ್ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆದಿದೆ. ನಾಳೆ ಕಾರ್ಗಿಲ್ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಮುಖಂಡ ಸಜ್ಜದ್ ಕಾರ್ಗಿಲ್ ಈದಿನ ಡಾಟ್ ಕಾಮ್‌ಗೆ ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಇಬ್ಬರು ಮಹಿಳಾ ಪ್ರತಿಭಟನಾಕಾರರು ಅಸ್ವಸ್ಥರಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಮಂದಿಗೆ ಗಾಯವಾಗಿದ್ದು ಸದ್ಯ ಭದ್ರತಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ಉದ್ವಿಗ್ನತೆಗೆ ತಿರುಗುತ್ತಿದೆ.
ಇದನ್ನು ಓದಿದ್ದೀರಾ? ದೆಹಲಿ | ಲಡಾಖ್ ಭವನದಲ್ಲಿ ಉಪವಾಸ ಆರಂಭಿಸಿದ ಸೋನಮ್ ವಾಂಗ್‌ಚುಕ್
ಲಡಾಖ್‌ನ ಭೂಮಿ, ಸಂಸ್ಕೃತಿ ಮತ್ತು ಸಂಪನ್ಮೂಲಗಳ ರಕ್ಷಣೆಗಾಗಿ ಲಡಾಖ್ ಅನ್ನು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು, ಲಡಾಖ್‌ಗೆ ರಾಜ್ಯತ್ವ ಸ್ಥಾನಮಾನ ನೀಡಬೇಕು, ಸ್ಥಳೀಯ ಉದ್ಯೋಗಕ್ಕಾಗಿ ಸಾರ್ವಜನಿಕ ಸೇವಾ ಆಯೋಗ(ಪಿಎಸ್‌ಎ) ರಚಿಸಬೇಕು, ಲೇಹ್ ಮತ್ತು ಕಾರ್ಗಿಲ್‌ಗೆ ತಲಾ ಒಂದು ಲೋಕಸಭೆ ಸ್ಥಾನ ನೀಡಬೇಕು ಎಂಬ ಒಟ್ಟು ಪ್ರಮುಖ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟುಕೊಂಡು 2019ರ ನಂತರದಿಂದ ಲಡಾಖ್‌ನಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ.
ಕೇಂದ್ರ ಗೃಹ ಸಚಿವಾಲಯದೊಂದಿಗೆ ನಡೆದ ಹಲವು ಹಂತದ ಮಾತುಕತೆ ವಿಫಲವಾಗಿದ್ದು, ಸದ್ಯ ಅಕ್ಟೋಬರ್ 6ರಂದು ಲೇಹ್ ಅಪೆಕ್ಸ್ ಬಾಡಿ(ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್(ಕೆಡಿಎ) ಮುಖಂಡರೊಂದಿಗೆ ಕೇಂದ್ರ ಮಾತುಕತೆ ನಡೆಸಲಿದೆ. ಆದರೆ ಅಷ್ಟು ತಡ ಮಾಡದೆ ಶೀಘ್ರವೇ ಮಾತುಕತೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆ ಮಾತನಾಡಿರುವ ಸಜ್ಜದ್ ಕಾರ್ಗಿಲಿ, “ಚಳವಳಿಯು ವೇಗ ಪಡೆಯುತ್ತಿದ್ದು, ನಾಳೆ ಕಾರ್ಗಿಲ್ ಬಂದ್ ನಡೆಯಲಿದೆ” ಎಂದು ತಿಳಿಸಿದ್ದಾರೆ.
