ಉಡಾಳ ಸ್ವಾಮಿ ತಗೊಂಡು ಪೀಠ ಕಟ್ಟಲು ಆಗುತ್ತಾ? ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಗ್ಗೆ ಟ್ರಸ್ಟ್‌ ಮಾತು

Date:

Advertisements

ಲಿಂಗಾಯತ ಧರ್ಮ ವಿರೋಧಿ ಹೇಳಿಕೆ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಮುಂದಿಟ್ಟುಕೊಂಡು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಉಚ್ಚಾಟಿಸಿದೆ.

ಸೆ.21ರಂದು ಕೂಡಲಸಂಗಮದಲ್ಲಿ ನಡೆದ ಸಭೆಯಲ್ಲಿ ಸ್ವಾಮೀಜಿ ಅವರನ್ನು ಉಚ್ಚಾಟಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಇಲ್ಲಿಗೆ ರಾಜ್ಯದಲ್ಲಿರುವ ಮೂರೂ ಪಂಚಮಸಾಲಿ ಪೀಠಗಳ ಕಥೆ ಮೂರಾಬಟ್ಟೆ ಸಾಲಿಗೆ ಬಂದು ತಲುಪಿದೆ.

ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟಿತರಾಗಲು ಸ್ವಾಮೀಜಿಯ ಸ್ವಯಂಕೃತ ಅಪರಾಧವೇ ಕಾರಣ ಎನ್ನಲಾಗುತ್ತಿದೆ. ಅಗತ್ಯ ಮೀರಿ ರಾಜಕೀಯ ನಾಯಕರ ಜೊತೆ ಒಡನಾಟ ಇಟ್ಟುಕೊಳ್ಳುವ ಮೂಲಕ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ ಎನ್ನುವ ಮಾತುಗಳು ಸಮುದಾಯದೊಳಗೆ ವ್ಯಕ್ತವಾಗುತ್ತಿವೆ.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷರೂ ಆದ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಮೃತ್ಯುಂಜಯ ಸ್ವಾಮೀಜಿ ನಡುವೆ ಕಳೆದ ಜುಲೈನಲ್ಲಿ ಕಾಣಿಸಿಕೊಂಡ ಬಿರುಕು ಮೂರು ತಿಂಗಳಲ್ಲಿ ಬೃಹತ್‌ ಕಂದಕವನ್ನೇ ಸೃಷ್ಟಿಸಿದೆ. ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಮೃತ್ಯುಂಜಯ ಸ್ವಾಮೀಜಿಯೇ ಬೇಡ ಎನ್ನುವ ಟ್ರಸ್ಟ್‌ನವರ ಮಾತುಗಳು ನಿಜ ಸ್ವರೂಪ ಪಡೆದುಕೊಂಡಿವೆ.

ಪಂಚಮಸಾಲಿ ಸಮುದಾಯಕ್ಕೆ ‘2ಎ ಮೀಸಲಾತಿ’ ಕಲ್ಪಿಸಬೇಕು ಎಂದು ದೀರ್ಘಕಾಲದಿಂದಲೂ ಹೋರಾಟ ಮಾಡಿದ್ದರು. ಈ ಹೋರಾಟದಲ್ಲೇ ಅವರು ಸ್ವಾಮೀಜಿ ಎಂಬುದು ಮರೆತು ವಿವಿಧ ಪಕ್ಷದ ಮುಖಂಡರ ಜೊತೆ ವೇದಿಕೆ ಹಂಚಿಕೊಂಡು, ಕೆಲವೊಮ್ಮೆ ರಾಜಕೀಯ ನಾಯಕರ ಮುಖವಾಣಿಯಾಗಿ ಮಾತನಾಡಿ ಸುದ್ದಿಯಾಗಿದ್ದರು.

2008ರಲ್ಲಿ ಕೂಡಲಸಂಗಮದಲ್ಲಿ ಪಂಚಮಸಾಲಿಯ ಮೊದಲ ಪೀಠ ಸ್ಥಾಪನೆಯಾಗಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠಾಧ್ಯಕ್ಷರಾಗಿದ್ದರು. ಪಂಚಮಸಾಲಿ ಸಮುದಾಯ ಮೂಲತಃ ಕೃಷಿಕ ಹಿನ್ನೆಲೆಯವರು ಎನ್ನುವುದರ ಪ್ರಾತಿನಿಧಿಕವಾಗಿ ಸ್ವಾಮೀಜಿಯವರು ನೇಗಿಲನ್ನೇ ಕೈದಂಡವಾಗಿ ಮಾಡಿಕೊಂಡಿದ್ದರು. ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮದ ಪೀಠಾಧ್ಯಕ್ಷರಾಗುತ್ತಿದ್ದಂತೆ ಸಮಾಜದ ಗಮನ ಸೆಳೆಯುವ ಕೆಲಸಕ್ಕೆ ಕೈಹಾಕಿದ್ದು ಕಾಣಬಹುದು. 2012ರಲ್ಲಿ ‘ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ’ಯನ್ನು ಸ್ಥಾಪಿಸಿ, ಈವರೆಗೂ ಹೋರಾಟಗಾರ ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಮಾಣಿಕ್ ಸರ್ಕಾರ್, ಎಂ.ಎಸ್.ಸ್ವಾಮಿನಾಥನ್, ರಾಜೇಂದ್ರ ಸಿಂಗ್‌, ಪ್ರಕಾಶರಾವ್‌ ವೀರಮಲ್ಲ, ಶರದ್‌ ಪವಾರ್‌, ಆನಂದ್‌ ತೇಲ್ತುಂಬ್ಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಜನಮನ್ನಣೆ ಗಳಿಸಿದ್ದರು.

‘2ಎ ಮೀಸಲಾತಿ’ ಹೋರಾಟದಲ್ಲಿ ಜೊತೆಯಾಗಿ ಹೆಜ್ಜೆಹಾಕಿದ ವಿಜಯಾನಂದ ಕಾಶಪ್ಪನವರ ಈಗ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಮೃತ್ಯುಂಜಯ ಸ್ವಾಮೀಜಿಯೇ ಬೇಡ ಎನ್ನುವ ಸ್ಪಷ್ಟ ಅಭಿಪ್ರಾಯವನ್ನು ಮೂರು ತಿಂಗಳ ಹಿಂದೆ ಹೊರಹಾಕಿದ್ದರು. ಒಂದು ಹೆಜ್ಜೆ ಮುಂದಕ್ಕೆ ಹೋಗಿ, ”ಸ್ವಾಮೀಜಿ ಅವರು ತಾವಾಗಿಯೇ ಪೀಠ ತೊರೆದರೆ ಉತ್ತಮ” ಎನ್ನುವ ಎಚ್ಚರಿಕೆಯ ಮಾತುಗಳನ್ನು ಸಹ ಕಾಶಪ್ಪನವರ ಆಡಿದ್ದರು.

ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಸಮೀಕ್ಷೆ) ಬಗ್ಗೆ ಪಂಚಮಸಾಲಿ ಸಮುದಾಯದ ನಿರ್ಧಾರವನ್ನು ಬದಿಗೆ ಸರಿಸಿ, ಬಿಜೆಪಿ ನಿಲುವಿಗೆ ಬದ್ಧರಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಪೀಠದಿಂದ ಅವರನ್ನು ಪದಚ್ಯುತಿಗೊಳಿಸಲಾಗಿದೆ.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ನಿರ್ಧಾರ ಬಗ್ಗೆ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಅವರು ಈ ದಿನ.ಕಾಮ್‌ ಜೊತೆ ಮಾತನಾಡಿ, “ಸ್ವಾಮೀಜಿ ಇತ್ತೀಚೆಗೆ ಪಕ್ಕಾ ರಾಜಕಾರಣಿಯಾಗಿ ಬದಲಾಗಿದ್ದರು. ಟಿಕೆಟ್‌ ಕೊಡಿಸುತ್ತೇನೆ, ಪಂಚಮಸಾಲಿ ಮತ ಹಾಕಿ ಗೆಲ್ಲಿಸುತ್ತೇನೆ ಎಂದು ಬರೀ ಸುತ್ತಾಡುತ್ತಿದ್ದರು. ವಸೂಲಿ ಬಾಜಿಗೆ ಇಳಿದಿದ್ದರು. ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡುತ್ತೇನೆ ಅಂತ ಒಬ್ಬರ ಹತ್ತಿರ 50 ಲಕ್ಷ ಹೊಡೆದಿದ್ದಾರೆ. ದಾವಣಗೆರೆಯಲ್ಲಿ ಖಾಸಗಿಯಾಗಿ ಆಸ್ತಿ ಮಾಡಿದ್ದಾರೆ. ಇಂತಹ ನೂರಾರು ಪ್ರಕರಣಗಳು ಸಿಗುತ್ತವೆ. ಹೀಗಾಗಿ ನಮ್ಮ ಪೀಠಕ್ಕೆ ಸ್ವಾಮೀಜಿ ಸೂಕ್ತವಲ್ಲ ಎಂದು ಟ್ರಸ್ಟ್‌ ತೀರ್ಮಾನಿಸಿದೆ. ಹೀಗಾಗಿ ಅವರನ್ನು ನಾವು ಉಚ್ಚಾಟಿಸಿದ್ದೇವೆ” ಎಂದು ಹೇಳಿದರು.

“ಪಂಚಮಸಾಲಿ ಪೀಠವನ್ನು ನಾವು ಸ್ಥಾಪಿಸಿದ್ದು ಬಸವತತ್ವದ ಆಧಾರದ ಮೇಲೆ. ಸರ್ಕಾರದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಸಮುದಾಯದ ಮುಖಂಡರೆಲ್ಲ ಕುಳಿತು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ. ಆದರೆ ಈ ಸ್ವಾಮೀಜಿ ಬಿಜೆಪಿಯವರ ಅದರಲ್ಲೂ ಯತ್ನಾಳ್‌ ಅವರ‌ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಲು ಕರೆ ನೀಡಿದ್ದಾರೆ. ಇದು ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ. ಇವರು ಪಕ್ಕಾ ಉಡಾಳ ಸ್ವಾಮಿ. ಇವರನ್ನು ತಗೊಂಡು ಪೀಠ ಕಟ್ಟಲು ಆಗುತ್ತದಾ? ಇವರು ನಮಗೆ ಬೇಡ. ನಾವು ಉತ್ತಮ ಸ್ವಾಮೀಜಿಯನ್ನು ಶೀಘ್ರದಲ್ಲೇ ಪೀಠ ಸ್ಥಾನಕ್ಕೆ ಕರೆತರುತ್ತೇವೆ” ಎಂದು ತಿಳಿಸಿದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಮಾತನಾಡಿಸಿ ಅಭಿಪ್ರಾಯ ಪಡೆಯಲು ಅವರಿಗೆ ಕರೆ ಮಾಡಿದಾಗ, ”ಸದ್ಯಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿಗೆ ಬಂದ ವೇಳೆ ಮಾತನಾಡುವೆ” ಎಂದು ತಿಳಿಸಿದರು. ಹಾಗೆಯೇ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಕರೆ ಮಾಡಿದಾಗ, “ನಾನು ಜನರ ಜೊತೆ ಇರುವೆ. ಇದು ಮಾತನಾಡಲು ಸರಿಯಾದ ಸಮಯವಲ್ಲ. ಮತ್ತೆ ಮಾತನಾಡುವೆ” ಎಂದಷ್ಟೇ ಹೇಳಿದರು.

“ಸಮುದಾಯದ ನಿರ್ಧಾರವನ್ನು ಗೌರವಿಸಿ, ಅದಕ್ಕೆ ತಕ್ಕಂತೆ ನಡೆದುಕೊಂಡು ಹೋಗಿ ಎಂದು ಸಾಕಷ್ಟು ಸಲ ಸ್ವಾಮೀಜಿಗೆ ಮನವರಿಕೆ ಮಾಡಿದ್ದೆವು. ನಮ್ಮ ಮಾತಿಗೆ ಒಪ್ಪಿಗೆ ಸೂಚಿಸಿದ್ದ ಸ್ವಾಮೀಜಿ ಏಕಾಏಕಿ ಧರ್ಮದ ಕಾಲಂನಲ್ಲಿ ಹಿಂದೂ ಧರ್ಮ ಬರೆಸುವಂತೆ ಕರೆ ನೀಡಿದ್ದಾರೆ. ನಮಗಿರುವ ಮಾಹಿತಿ ಪ್ರಕಾರ ಯತ್ನಾಳ್‌ ಅವರು ಲಿಂಗಾಯತ ಬದಲು ಹಿಂದೂ ಎಂದು ಬರೆಸಲು ಕರೆ ನೀಡಬೇಕು ಎಂದು ಬೆದರಿಸಿದ್ದಾರಂತೆ. ಬಹಿರಂಗ ಸಭೆಯಲ್ಲಿ ಹಿಂದೂ ಬರೆಯಿಸಿ ಎಂದು ಹೇಳದಿದ್ದರೆ ಇಲ್ಲಿಗೆ ನಮ್ಮ ನಿಮ್ಮ ಸಂಬಂಧ ಮುಗಿಯಿತು ಎನ್ನುವ ಎಚ್ಚರಿಕೆ ನೀಡಿದ್ದರಂತೆ. ಹೀಗಾಗಿ ಯತ್ನಾಳ್‌ ಹಿಂದೆ ಬಿದ್ದು ಈಗ ಪೀಠ ಸ್ಥಾನಕ್ಕೆ ಕುತ್ತು ತಂದುಕೊಂಡರು” ಎನ್ನುತ್ತಾರೆ ಸ್ವಾಮೀಜಿಯ ಆಪ್ತರು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್‌ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X