ರಾಜ್ಯ ಸರ್ಕಾರ ಸೆ.22 ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬೀದರ್ ಜಿಲ್ಲೆಯಲ್ಲಿ ಮೂರು ದಿನಗಳಿಂದ ಹಲವು ತೊಡಕುಗಳು ಎದುರಾದವು. ಸಮೀಕ್ಷೆಯ ಆ್ಯಪ್ ಡೌನ್‌ಲೋಡ್ ವಿಳಂಬ, ಕೈ ಕೊಟ್ಟ ಸರ್ವರ್, ಬಾರದ ಒಟಿಪಿ, ಬ್ಲಾಕ್ ಬಗ್ಗೆ ಗೊಂದಲದಿಂದ ಗಣತಿದಾರರು ಮನೆ-ಮನೆಗೆ ತೆರಳಿ ಹೈರಾಣುಗುತ್ತಿದ್ದಾರೆ.
ಬೆಳಿಗ್ಗೆಯಿಂದಲೇ ಸಮೀಕ್ಷೆಗೆ ಸಿದ್ಧರಾಗಿದ್ದ ಗಣತಿದಾರರಿಗೆ ಸಮೀಕ್ಷೆಯ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಲಿಂಕ್ ಒತ್ತಿದಾಗ ಹಲವರ ಸ್ಮಾರ್ಟ್‌ಫೋನ್‌ನಲ್ಲಿ ಆ್ಯಪ್ ಸರಿಯಾಗಿ ಡೌನ್‌ಲೋಡ್ ಆಗಲೇ ಇಲ್ಲ. ಕೆಲ ಗಣತಿದಾರರ ಬಳಿ 5ಜಿ ಬದಲು 4ಜಿ ಫೋನ್ ಇರುವುದು ಹಾಗೂ ಸಮೀಕ್ಷೆಗೆ ತೆರಳಿದ್ದ ಸ್ಥಳದಲ್ಲಿ ನೆಟ್‌ವರ್ಕ್ ಸಿಗದಿರುವುದು ಸಹ ಆ್ಯಪ್ ಡೌನ್‌ಲೋಡ್ ವಿಳಂಬಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಗಣತಿದಾರರು ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುವಾಗ ಒಟಿಪಿ ಜನರೇಟ್ ಆಗುತ್ತಿಲ್ಲ. ಕೆಲಹೊತ್ತು ನಿಂತು ಸುಸ್ತಾದ ಸಿಬ್ಬಂದಿ ವಾಪಸ್ ಆಗುತ್ತಿದ್ದಾರೆ. ಈ ಬಗ್ಗೆ ಮೇಲ್ವಿಚಾರಕರಿಗೆ ದೂರು ನೀಡಲು ಕರೆ ಮಾಡಿದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಜಿಲ್ಲಾದ್ಯಂತ ಹಲವೆಡೆ ಇದೇ ಸಮಸ್ಯೆ ಎದುರಾಗಿದೆ ಎಂದು ಗಣತಿದಾರರು ʼಈದಿನ.ಕಾಮ್ʼ ಜೊತೆಗೆ ಮಾತನಾಡಿ ಗೋಳು ತೋಡಿಕೊಂಡರು.
3,382 ಸಿಬ್ಬಂದಿ ನಿಯೋಜನೆ :
ಬೀದರ್ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಒಟ್ಟು 3,69,557 ಕುಟುಂಬಗಳನ್ನು ಸಮೀಕ್ಷೆಗೆ ಗುರುತಿಸಿದ್ದು, ಒಟ್ಟು 3,382 ಗಣತಿದಾರರನ್ನು ನಿಯೋಜಿಸಲಾಗಿದೆ. ಸೆ.22 ರಿಂದ ಅ.7ರವರೆಗೆ ಸಮೀಕ್ಷೆ ನಡೆಯಲಿದ್ದು, ಒಟ್ಟು 60 ಪ್ರಶ್ನೆಗಳ ಮೂಲಕ ಕುಟುಂಬದ ಸಮಗ್ರ ಮಾಹಿತಿ ಪಡೆಯಲಾಗುತ್ತಿದೆ.

ಮೂರು ದಿನಗಳ ಸಮೀಕ್ಷೆ ವಿವರ :
ಜಿಲ್ಲೆಯ ಎಂಟು ತಾಲ್ಲೂಕು ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಮೊದಲ ಎರಡು ದಿನ ಗಣತಿದಾರರು ತಮ್ಮ ಬ್ಲಾಕ್ ಗುರುತಿಸಿಕೊಂಡು ಹೋಗಲು ತಡವಾಯಿತು. ಸೆ.23 ಮತ್ತು ಸೆ.24ರಂದು ಸಮೀಕ್ಷೆಗೆ ತೆರಳಿದ ಸಿಬ್ಬಂದಿ ಆ್ಯಪ್ ಓಪನ್ ಆಗದಿರುವುದು, ಲಾಗಿನ್ ಎರರ್, ಒಟಿಪಿ ಬಾರದಿರುವುದು, ಸರ್ವರ್ ಸಮಸ್ಯೆ ಎದುರಿಸಿದರು. ಹೀಗಾಗಿ ನಿರೀಕ್ಷೆಯಂತೆ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ಗಣತಿದಾರರ ಅಭಿಪ್ರಾಯ.
ಸಮೀಕ್ಷೆ ಆರಂಭವಾಗಿ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು ಸೆ.24ರ ಸಂಜೆಯವರೆಗೆ ಒಟ್ಟು 2,681 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಸೆ.22 ರಂದು 36, ಸೆ.23ರಂದು 207 ಹಾಗೂ (ಸೆ.24) ಮೂರನೇ ದಿನ ಒಟ್ಟು 1,739 ಗಣತಿದಾರರು ಕಾರ್ಯನಿರ್ವಹಿಸಿ 2,438 ಮನೆಗಳ ಸಮೀಕ್ಷೆ ನಡೆಸಿದ್ದಾರೆʼ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನೂ ಗೊತ್ತಾಗದ ʼಬ್ಲಾಕ್ʼ :
ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಕೆಲ ಸಮೀಕ್ಷೆಗೆ ತೆರಳಿದ ಗಣತಿದಾರರಿಗೆ ತಮ್ಮ ಬ್ಲಾಕ್ ಯಾವುದು ಯಾವ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕೆಂದು ತೋಚದೆ ಪರದಾಡಿ ಮೇಲ್ವಿಚಾರಕರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ನೆಟ್‌ವರ್ಕ್ ಸಮಸ್ಯೆ ಇರುವ ಸ್ಥಳಗಳಲ್ಲಿ ಬಿಸಿಎಂ ಇಲಾಖೆಯಿಂದ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಲು ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಸಿದ್ದರಾಮಯ್ಯ ʼನಗರ ನಕ್ಸಲ್ʼ ಎಂಬ ಖೂಬಾ ಹೇಳಿಕೆ : ʼಖಾಲಿ ಡಬ್ಬ ಹೆಚ್ಚು ಶಬ್ದ ಮಾಡುತ್ತೆʼ ಎಂದ ಈಶ್ವರ ಖಂಡ್ರೆ
ʼಜಿಲ್ಲಾದ್ಯಂತ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಮೊದಲ ದಿನ ಹೆಚ್ಚಿನ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಇದು ರಾಜ್ಯಾದ್ಯಂತ ಇರುವ ತಾಂತ್ರಿಕ ದೋಷ. ಟೆಕ್ನಿಕಲ್ ಟೀಮ್ ಎಲ್ಲವೂ ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದು, ದಿನಕಳೆದಂತೆ ಸೂಸೂತ್ರವಾಗಿ ನಡೆಯುತ್ತದೆʼ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುನೀತಾ ಶಿವಾನಂದ ʼಈದಿನʼಕ್ಕೆ ತಿಳಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.