15 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಸ್ವಾಮಿ ಚೈತನ್ಯಾನಂದ ಅಲಿಯಾಸ್ ಪಾರ್ಥಸಾರಥಿಯನ್ನು ಬಂಧಿಸುವುದು ದೆಹಲಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಆರೋಪಿಯು ಬಂಧನದಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ಸ್ಥಳದಿಂದ ಸ್ಥಳಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಪಾರ್ಥಸಾರಥಿ ದೆಹಲಿಯ ವಸಂತ ಕುಂಜ್ ಪ್ರದೇಶದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಸಂಸ್ಥೆ ‘ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್’ನ ವ್ಯವಸ್ಥಾಪಕನಾಗಿದ್ದಾರೆ. ಕಾಲೇಜಿನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನದ ಅಡಿಯಲ್ಲಿ ‘ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್’ (ಪಿಜಿಡಿಎಂ) ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ಆತ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆತನ ವಿರುದ್ಧ ಇತ್ತೀಚೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆತನ ಕಾಮಕೃತ್ಯಗಳಿಗೆ ಸುಮಾರು 12ರಿಂದ 15 ವಿದ್ಯಾರ್ಥಿನಿಯರು ತುತ್ತಾಗಿದ್ದಾರೆ ಎಂದು ಹೇಳಲಾಗಿದೆ.
ಆರೋಪಿ ವಿರುದ್ಧ ಶೃಂಗೇರಿ ಮಠ ಮತ್ತು ಮಠದ ಆಸ್ತಿಗಳ ಆಡಳಿತಾಧಿಕಾರಿ ಪಿ.ಎ ಮುರಳಿ ಅವರು 2025ರ ಆಗಸ್ಟ್ 4ರಂದು ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಮೊದಲ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಬಿಎನ್‌ಎಸ್ ಸೆಕ್ಷನ್ 75(2), 79 ಮತ್ತು 351(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ತನಿಖೆ ಆರಂಭಗೊಂಡ ಬಳಿಕ, ಪಾರ್ಥಸಾರಥಿಯ ಕಿರುಕುಳ/ದೌರ್ಜನ್ಯ ಪ್ರಕರಣವು ಗಂಭೀರ ಸ್ವರೂಪವನ್ನು ಪಡೆದುಕೊಂಡಿತು. ಪೊಲೀಸರ ಎದುರು ಹೇಳಿಕೆ ದಾಖಲಿಸಿದ 32 ವಿದ್ಯಾರ್ಥಿನಿಯರಲ್ಲಿ 17 ಮಂದಿ ತಮಗೆ ಪಾರ್ಥಸಾರಥಿ ವಾಟ್ಸ್‌ಆ್ಯಪ್ ಮತ್ತು ಎಸ್‌ಎಂಎಸ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದರು. ಅಲ್ಲದೆ, ಅಸಭ್ಯವಾಗಿ ಮುಟ್ಟುತ್ತಿದ್ದರು ಎಂದು ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.
ಆತನ ಬೇಡಿಕೆಯನ್ನು ಈಡೇರಿಸುವಂತೆ ಕೆಲವು ಅಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿಗಳು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದೂ ಕೆಲವು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
“ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಸಂಸ್ಥೆ ಮತ್ತು ಪಾರ್ಥಸಾರಥಿಗೆ ಸಂಬಂಧಿಸಿದ ಇತರ ವಿಳಾಸಗಳ ಮೇಲೆ ದಾಳಿ ನಡೆಸಲಾಗಿದೆ. ಸಂಸ್ಥೆಯಿಂದ ಹಾರ್ಡ್ ಡಿಸ್ಕ್‌ಗಳು ಮತ್ತು ಎನ್‌ವಿಆರ್‌ಗಳನ್ನು ವಶಕ್ಕೆ ಪಡೆದು, ಹೆಚ್ಚಿನ ಪರೀಶೀಲನೆಗಾಗಿ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಪಟಿಯಾಲದ ಜೆಎಂಎಫ್‌ಸಿ ಹೌಸ್ ನ್ಯಾಯಾಲಯದ ಎದುರು ಬಿಎನ್‌ಎಸ್‌ಎಸ್ ಸೆಕ್ಷನ್ 183 ಅಡಿಯಲ್ಲಿ 16 ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಸಂಸ್ಥೆಯ ನೆಲಮಾಳಿಗೆಯಲ್ಲಿ ನಿಲ್ಲಿಸಲಾಗಿದ್ದ ಆರೋಪಿಗಳಿಗೆ ಸೇರಿದ ದುಬಾರಿ ವೋಲ್ವೋ ಕಾರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ವಾಹನವು ನಕಲಿ ನಂಬರ್ ಪ್ಲೇಟ್ಅನ್ನು ಹೊಂದಿತ್ತು. ಈ ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಎಚ್1ಬಿ ವೀಸಾದಿಂದ ಅಮೆರಿಕಕ್ಕಾದ ಲಾಭವೇನು, ಭಾರತಕ್ಕಾದ ನಷ್ಟವೇನು?
ಸಂಸ್ಥೆಯಿಂದ ಪಾರ್ಥಸಾರಥಿಯನ್ನು ಹೊರಹಾಕಿರುವ ಶಾರದಾ ಪೀಠವು, ಆತನ ಕೃತ್ಯಗಳಿಗೂ ಸಂಸ್ಥೆಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ. ಅಲ್ಲದೆ, ಆತನ ಕೃತ್ಯಗಳನ್ನು ‘ಕಾನೂನುಬಾಹಿರ, ಅನುಚಿತ ಮತ್ತು ಪೀಠದ ಹಿತಾಸಕ್ತಿಗಳಿಗೆ ಹಾನಿಕಾರಕ’ ಎಂದು ಹೇಳಿದೆ.
ಚಿನ್ಮಯಾನಂದ ಸರಸ್ವತಿಯನ್ನು (ಪಾರ್ಥಸಾರಥಿ) ಪತ್ತೆಹಚ್ಚಲು ಪೊಲೀಸರು ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಅವರ ಬಂಧನಕ್ಕಾಗಿ ಯಾವುದೇ ಸುಳಿವು, ಮಾಹಿತಿ ಸಿಕ್ಕರೂ ಪೊಲೀಸ್ ಠಾಣೆಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನೂರಾರು ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಒಡೆದ ಕಿಟಕಿ ಇರುವ ಕಾರನ್ನು ಗುರುತಿಸಲಾಗಿದೆ. ಆ ವಾಹನದ ಅಧಿಕೃತ ಮಾಲೀಕರು ಎರಡು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದು, ಆ ಕಾರನ್ನು ಪಾರ್ಥಸಾರಥಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.