ಛತ್ತೀಸ್‌ಗಢ | ಮದ್ಯ ಹಗರಣ: ಮಾಜಿ ಸಿಎಂ ಭೂಪೇಶ್ ಬಾಘೇಲ್ ಪುತ್ರ ಅರೆಸ್ಟ್‌!

Date:

Advertisements

ಛತ್ತೀಸ್‌ಗಢದಲ್ಲಿ ನಡೆದಿದೆ ಎನ್ನಲಾದ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ಪುತ್ರ ಚೈತನ್ಯ ಬಾಘೇಲ್ ಮತ್ತು ಮತ್ತೊಬ್ಬ ಆರೋಪಿಯನ್ನು ಎಸಿಬಿ/ಇಒಡಬ್ಲ್ಯೂ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 18 ರಂದು ಜಾರಿ ನಿರ್ದೇಶನಾಲಯವು ಚೈತನ್ಯ ಅವರನ್ನು ಬಂಧಿಸಿತ್ತು. ಅಂದಿನಿಂದ, ಚೈತನ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಲ್ಲಿದ್ದಾರೆ. ಇದೀಗ, ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ/ಆರ್ಥಿಕ ಅಪರಾಧಗಳ ವಿಭಾಗದ (ಎಸಿಬಿ/ಇಒಡಬ್ಲ್ಯೂ) ಅಧಿಕಾರಿಗಳು ಪ್ರೊಡಕ್ಷನ್ ವಾರಂಟ್ ಪಡೆದಿದ್ದು, ಅವರನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

“ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅವರನ್ನು ಮತ್ತು ಮತ್ತೊಬ್ಬ ಆರೋಪಿ ದೀಪೇನ್ ಚಾವ್ಡಾ ಅವರನ್ನು ಬಂಧಿಸಲಾಗಿದೆ. ಇಬ್ಬರನ್ನೂ ವಿಶೇಷ ನ್ಯಾಯಾಲಯಕ್ಕೆ (ಭ್ರಷ್ಟಾಚಾರ ತಡೆ ಕಾಯ್ದೆ) ಹಾಜರುಪಡಿಸಿ, ಅಕ್ಟೋಬರ್ 6ರವರೆಗೆ ಎಸಿಬಿ/ಇಒಡಬ್ಲ್ಯೂ ಕಸ್ಟಡಿಗೆ ಪಡೆಯಲಾಗಿದೆ” ಎಂದು ತನಿಖಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ,.

ಕಳೆದ ಜನವರಿಯಲ್ಲಿ ಚೈತನ್ಯ ವಿರುದ್ಧ ಮದ್ಯ ಹಗರಣ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಆಯಾಮಗಳ ಕುರಿತು ಎಸಿಬಿ/ಇಒಡಬ್ಲ್ಯೂ ತನಿಖೆ ನಡೆಸುತ್ತಿದೆ.

ಭೂಪೇಶ್ ಬಾಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 2019 ಮತ್ತು 2022ರ ನಡುವೆ 2,500 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಮದ್ಯ ಹಗರಣ ನಡೆದಿದೆ ಎಂದು ಆರೋಪಿಸಲಾಗಿದೆ.

ಆದಾಗ್ಯೂ, ಚೈತನ್ಯ ಅವರನ್ನು ಒತ್ತಡ ತಂತ್ರದ ಭಾಗವಾಗಿ ಬಂಧಿಸಲಾಗಿದೆ. ಅವರ ವಿರುದ್ಧದ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಚೈತನ್ಯ ಅವರ ವಕೀಲ ಫೈಸಲ್ ರಿಜ್ವಿ ಆರೋಪಿಸಿದ್ದಾರೆ.

” ಎಸಿಬಿ/ಇಒಡಬ್ಲ್ಯೂ ಈವರೆಗೆ ಸಲ್ಲಿಸಲಾಗಿರುವ ಮುಖ್ಯ ಆರೋಪಪಟ್ಟಿ ಮತ್ತು ಹಲವು ಪೂರಕ ಆರೋಪಪಟ್ಟಿಗಳಲ್ಲಿ ಚೈತನ್ಯ ಅವರ ಹೆಸರನ್ನು ಹೆಸರಿಸಲಾಗಿಲ್ಲ. ಆ ಆರೋಪಪಟ್ಟಿಗಳಲ್ಲಿ ಸುಮಾರು 45 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಆದರೆ, ಅವರಲ್ಲಿ 29 ಜನರನ್ನು ಯಾವತ್ತೂ ಬಂಧಿಸಲಾಗಿಲ್ಲ” ಎಂದು ಹೇಳಿದ್ದಾರೆ.

“ಛತ್ತೀಸ್‌ಗಢ ಹೈಕೋರ್ಟ್ ಚೈತನ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ, ಎಸಿಬಿ/ಇಒಡಬ್ಲ್ಯೂ ಅವರನ್ನು ಬಂಧಿಸಿದೆ. ವಿಶೇಷ ನ್ಯಾಯಾಲಯದ ಮುಂದೆ ಬಂಧನಕ್ಕೆ ಆಧಾರವಾಗಿ ಪ್ರಕರಣದ ಮತ್ತೊಬ್ಬ ಆರೋಪಿ ಲಕ್ಷ್ಮಿ ನಾರಾಯಣ್ ಬನ್ಸಾಲ್ ಅವರ ಹೇಳಿಕೆಯನ್ನು ಮಾತ್ರವೇ ಇಒಡಬ್ಲ್ಯೂ ನೀಡಿದೆ” ಎಂದು ರಿಜ್ವಿ ತಿಳಿಸಿದ್ದಾರೆ.

ಸೆಪ್ಟೆಂಬರ್ 15ರಂದು ರಾಯ್‌ಪುರದ ವಿಶೇಷ ನ್ಯಾಯಾಲಯಕ್ಕೆ ಇಒಡಬ್ಲ್ಯೂ ಸಲ್ಲಿಸಿದ ನಾಲ್ಕನೇ ಪೂರಕ ಪ್ರಾಸಿಕ್ಯೂಷನ್ ದೂರಿನಲ್ಲಿ (ಚಾರ್ಜ್‌ಶೀಟ್) ಚೈತನ್ಯ ಅವರು ಛತ್ತೀಸ್‌ಗಢದಲ್ಲಿ ನಡೆದ ‘ಮದ್ಯ ಹಗರಣ’ದ ಸಿಂಡಿಕೇಟ್‌ನ ಭಾಗವಾಗಿದ್ದರು. ಹಗರಣದಲ್ಲಿ ಬಂದ ಸುಮಾರು 1,000 ಕೋಟಿ ರೂ.ಗಳನ್ನು ವೈಯಕ್ತಿಕವಾಗಿ ಚೈತನ್ಯ ಅವರೇ ನಿರ್ವಹಿಸಿದ್ದಾರೆ ಎಂದು ಆರೋಪಿಸಿದೆ.

ಈ ಲೇಖನ ಓದಿದ್ದೀರಾ?: ಎಚ್1ಬಿ ವೀಸಾದಿಂದ ಅಮೆರಿಕಕ್ಕಾದ ಲಾಭವೇನು, ಭಾರತಕ್ಕಾದ ನಷ್ಟವೇನು?

ಕಳೆದ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಅನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದು ತಿಂಗಳ ಬಳಿಕ, 2024ರ ಜನವರಿ 17ರಂದು ‘ಮದ್ಯ ಹಗರಣ’ ಸಂಬಂಧ ಎಸಿಬಿ/ಇಒಡಬ್ಲ್ಯೂ ಎಫ್‌ಐಆರ್ ದಾಖಲಿಸಿತು. ಮಾಜಿ ಅಬಕಾರಿ ಸಚಿವ ಕವಾಸಿ ಲಖ್ಮಾ ಮತ್ತು ಮಾಜಿ ಮುಖ್ಯ ಕಾರ್ಯದರ್ಶಿ ವಿವೇಕ್ ಧಂಡ್ ಸೇರಿದಂತೆ 70 ವ್ಯಕ್ತಿಗಳು ಮತ್ತು ಕಂಪನಿಗಳನ್ನು ಆರೋಪಿಗಳೆಂದು ಪಟ್ಟಿ ಮಾಡಿದೆ.

ಲೆಕ್ಕಪತ್ರವುಳ್ಳ ಅಧಿಕೃತ ಮದ್ಯ ಮಾರಾಟ ಹಾಗೂ ಲೆಕ್ಕಪತ್ರವಿಲ್ಲದ ಅಕ್ರಮ ಮದ್ಯ ಮಾರಾಟದ ಮೇಲೆ ಕಮಿಷನ್ ಸಂಗ್ರಹಿಸುವುದರ ಜೊತೆಗೆ, ಛತ್ತೀಸ್‌ಗಢದಲ್ಲಿ ಕಾರ್ಯನಿರ್ವಹಿಸಲು ಮುಖ್ಯ ಡಿಸ್ಟಿಲ್ಲರ್‌ಗಳಿಂದ ‘ಕ್ವಿಡ್ ಪ್ರೊ ಕ್ವೋ’ (ಕೊಡು ಕೊಳ್ಳುವಿಕೆ) ರೂಪದಲ್ಲಿ ಆರೋಪಿಗಳು ಲಂಚವನ್ನೂ ಪಡೆದಿದ್ದಾರೆ ಎಂದು ಇಡಿ ಆರೋಪಿಸಿದೆ.

ಪ್ರಕರಣದ ತನಿಖೆಯ ಭಾಗವಾಗಿ ಮಾಜಿ ಅಬಕಾರಿ ಸಚಿವ ಮತ್ತು ಹಾಲಿ ಕಾಂಗ್ರೆಸ್ ಶಾಸಕ ಕವಾಸಿ ಲಖ್ಮಾ, ಅನ್ವರ್ ಧೇಬರ್, ಮಾಜಿ ಐಎಎಸ್ ಅಧಿಕಾರಿ ಅನಿಲ್ ತುತೇಜಾ, ಭಾರತೀಯ ದೂರಸಂಪರ್ಕ ಸೇವೆ (ಐಟಿಎಸ್) ಅಧಿಕಾರಿ ಅರುಣ್ಪತಿ ತ್ರಿಪಾಠಿ ಮತ್ತು ಇತರರನ್ನು ಇಡಿ ಬಂಧಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಅಗ್ರ ಕೋಟ್ಯಾಧಿಪತಿಗಳಲ್ಲಿ ಮಹಿಳೆಗೆ ಸ್ಥಾನ; ಅತೀ ಶ್ರೀಮಂತ ಮಹಿಳೆ ರೋಶ್ನಿ ಮಲ್ಹೋತ್ರಾ!

ಭಾರತದ ಬಿಲಿಯನೇರ್‌ಗಳ ಇತಿಹಾಸದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಹಬ್ಬದ ದಿನವೇ ಸಾರ್ವಜನಿಕರಿಗೆ ದರ ಏರಿಕೆಯ ಶಾಕ್‌; ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

ಆಯುಧ ಪೂಜೆ ಹಬ್ಬದ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ದರ...

ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ...

Download Eedina App Android / iOS

X