ಕೇಂದ್ರ ಸರ್ಕಾರವು ನೀತಿ ಆಯೋಗವನ್ನು ಮುಂದಿಟ್ಟುಕೊಂಡು ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದೆ ಎಂದು ರಾಷ್ಟ್ರೀಯ ಜನಾರೋಗ್ಯ ಅಭಿಯಾನದ ಮುಖಂಡ ಹಾಗೂ ಮಧ್ಯಪ್ರದೇಶದ ಸಾಮಾಜಿಕ ಚಿಂತಕ ಅಮೂಲ್ಯ ನಿಧಿ ಆರೋಪಿಸಿದರು.
ವಿಜಯಪುರ ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಖಾಸಗಿ ಸಹಭಾಗಿತ್ವ ಕೈಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಆಗ್ರಹಿಸಿ ಹೋರಾಟ ಸಮಿತಿಯು ನಡೆಸುತ್ತಿರುವ ಧರಣಿಯನ್ನು ಬೆಂಬಲಿಸಿ ಮಾತನಾಡಿದ ಅವರು, “ಕೋವಿಡ್ ನಂತರ ಆರೋಗ್ಯ ಸೇವೆಯನ್ನು ಒಂದು ಲಾಭದಾಯಕ ಉದ್ಯಮವಾಗಿ ಪರಿಗಣಿಸಿರುವ ಬಂಡವಾಳಶಾಹಿಗಳು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಗುಣಮಟ್ಟದ ಸರ್ಕಾರಿ ಆಸ್ಪತ್ರೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇಂಥ ಒಂದು ಕಾರ್ಯ ಯೋಜನೆ ಗುಜರಾತಿನಿಂದ ಪ್ರಾರಂಭವಾಗಿದೆ” ಎಂದು ಆರೋಪಿಸಿದರು.
“ಉತ್ತರ ಪ್ರದೇಶದಲ್ಲಿ 7 ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಒಡೆತನಕ್ಕೆ ಒಪ್ಪಿಸಲಾಗಿದೆ. ಮಧ್ಯಪ್ರದೇಶದಲ್ಲಿ 27 ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣಕ್ಕೆ ಜನರ ಪ್ರಬಲ ವಿರೋಧದಿಂದ ಬಿಜೆಪಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಇಂತಹ ಹುನ್ನಾರ ನಡೆಯುತ್ತಿದ್ದು, ಜನತೆ ಸರ್ಕಾರದ ನೀತಿಗಳಿಗೆ ಕಡಿವಾಣ ಹಾಕಬೇಕಿದೆ. ಇಲ್ಲವಾದರೆ ಬಡ ಜನರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ತುಂಬಾ ದುಬಾರಿಯಾಗಲಿದೆ” ಎಂದರು.
ಇದನ್ನೂ ಓದಿ: ವಿಜಯಪುರ | ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಅಗತ್ಯದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವೆ: ಸಚಿವ ಶಿವಾನಂದ ಪಾಟೀಲ
ಈ ವೇಳೆ ವೇದಿಕೆಯ ಮೇಲೆ ವಿಜಯಪುರದ ಹೋರಾಟ ಸಮಿತಿಯ ಅನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.