ಲಡಾಖ್‌ಗೆ ರಾಜ್ಯತ್ವ ಸ್ಥಾನಮಾನ ಸೇರಿದಂತೆ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರು ಬುಧವಾರ(ಸೆಪ್ಟೆಂಬರ್ 24) ಹಿಂಸಾಚಾರ ಉಂಟಾಗುತ್ತಿದ್ದಂತೆ 15ನೇ ದಿನಕ್ಕೆ ಉಪವಾಸ ನಿಲ್ಲಿಸಿದ್ದಾರೆ. ಆದರೆ ಲಡಾಖ್ ಹಿಂಸಾಚಾರಕ್ಕೆ ಅವರ ಪ್ರಚೋದನಾಕಾರಿ ಹೇಳಿಕೆಗಳೇ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಲಡಾಖ್‌ನ ಭೂಮಿ, ಸಂಸ್ಕೃತಿ ಮತ್ತು ಸಂಪನ್ಮೂಲಗಳ ರಕ್ಷಣೆಗಾಗಿ ಲಡಾಖ್ ಅನ್ನು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು, ಲಡಾಖ್‌ಗೆ ರಾಜ್ಯತ್ವ ಸ್ಥಾನಮಾನ ನೀಡಬೇಕು, ಸ್ಥಳೀಯ ಉದ್ಯೋಗಕ್ಕಾಗಿ ಸಾರ್ವಜನಿಕ ಸೇವಾ ಆಯೋಗ(ಪಿಎಸ್‌ಎ) ರಚಿಸಬೇಕು, ಲೇಹ್ ಮತ್ತು ಕಾರ್ಗಿಲ್‌ಗೆ ತಲಾ ಒಂದು ಲೋಕಸಭೆ ಸ್ಥಾನ ನೀಡಬೇಕು ಎಂಬ ಒಟ್ಟು ಪ್ರಮುಖ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟುಕೊಂಡು 2019ರಿಂದ ಲಡಾಖ್‌ನಲ್ಲಿ ನಿರಂತರ ಹೋರಾಟ ನಡೆಯುತ್ತಿದೆ. 2023ರ ಜನವರಿಯಿಂದ ಸೋನಮ್ ವಾಂಗ್‌ಚುಕ್ ಕೂಡಾ ಈ ಚಳವಳಿಯಲ್ಲಿ ಜತೆಯಾಗಿದ್ದಾರೆ.
ಇದನ್ನು ಓದಿದ್ದೀರಾ? ಹಿಂಸೆಗೆ ತಿರುಗಿದ ಲಡಾಖ್‌ನ ರಾಜ್ಯ ಸ್ಥಾನಮಾನದ ಕೂಗು; 5 ಸಾವು, 80ಕ್ಕೂ ಹೆಚ್ಚು ಗಾಯಾಳುಗಳು
ಬುಧವಾರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ವಾಹನಗಳಿಗೆ ಬೆಂಕಿ ಹಾಕಲಾಗಿದೆ. ಬಿಜೆಪಿ ಕಚೇರಿಯನ್ನೂ ಧ್ವಂಸಗೊಳಿಸಲಾಗಿದೆ. ಇದಾದ ಬೆನ್ನಲ್ಲೇ ಲೇಹ್‌ನಲ್ಲಿ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸದ್ಯ ಕಾರ್ಗಿಲ್ ಬಂದ್ ನಡೆಯುತ್ತಿದೆ. ಇವೆಲ್ಲವುದರ ನಡುವೆ ಈ ಹಿಂಸಾಚಾರಕ್ಕೆ ಸೋನಮ್ ವಾಂಗ್‌ಚುಕ್ ಕಾರಣ ಎಂದು ಕೇಂದ್ರ ಆರೋಪಿಸಿದೆ, ಇನ್ನೊಂದೆಡೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ದೂರಿದೆ.
ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಗಿಲ್ ಡೆಮಾಕ್ರೆಟಿಕ್ ಅಲಯನ್ಸ್‌ನ ನಾಯಕ ಸಜ್ಜದ್ ಕಾರ್ಗಿಲಿ, “ಲಡಾಖ್‌ನಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ. ಆರು ವರ್ಷದಿಂದ ತಮ್ಮ ಉದ್ಯೋಗ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಹೋರಾಡುತ್ತಿರುವ ಜನರಲ್ಲಿ ಅಭದ್ರತೆ ಕಾಡುತ್ತಿದೆ. ಲಡಾಖ್‌ನಲ್ಲಿ ಪ್ರಜಾಪ್ರಭುತ್ವವೇ ಇಲ್ಲದಂತಾಗಿದೆ. ಸೋನಮ್ ವಾಂಗ್‌ಚುಕ್ ಮತ್ತು ಬೆಂಬಲಿಗರು ಮೈದಾನದೊಳಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಹಿಂಸಾಚಾರ ನಡೆದಿರುವುದು ಪ್ರತಿಭಟನಾ ಸ್ಥಳದ ಹೊರಭಾಗದಲ್ಲಿ. ಸರ್ಕಾರ ಶೀಘ್ರವೇ ಮಾತುಕತೆ ನಡೆಸಬೇಕು ಎಂದು ಮನವಿ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಇನ್ನು ಲಡಾಖ್ ಹೋರಾಟದ ನಾಯಕರುಗಳು ಹೇಳುವಂತೆಯೇ ಈಗಾಗಲೇ ಕೇಂದ್ರ ಸರ್ಕಾರ ಲಡಾಖ್ ಜನರ ಪರವಾಗಿ ಹೋರಾಡುತ್ತಿರುವ ಸೋನಮ್ ವಾಂಗ್‌ಚುಕ್ ಅವರನ್ನು ಗುರಿಯಾಗಿಸಿಕೊಂಡಿದೆ, ಸಾಕಷ್ಟು ಒತ್ತಡ ಹೇರುತ್ತಿದೆ. ಸಿಬಿಐ, ಇಡಿ ದಾಳಿಗಳನ್ನು ನಡೆಸಿದೆ. ಸೋನಮ್ ಅವರೇ ಹೇಳುವಂತೆ ದೇಶದ್ರೋಹದ ಪ್ರಕರಣವೂ ದಾಖಲಿಸಲಾಗುತ್ತಿದೆ, ಇದರ ಪ್ರತಿ ಇನ್ನಷ್ಟೇ ಕೈಗೆ ಸಿಗಬೇಕಿದೆ.
