ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ, ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಐಟಿ ಸೆಲ್‌ನ ಪ್ರಖ್ಯಾತ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಕಳ ತಾಲೂಕಿನ ಈದು ಗ್ರಾಮದ ನಿವಾಸಿ ಪ್ರಖ್ಯಾತ್ ಬಿ.ಜೆ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ವಾಟ್ಸ್ಆಪ್, ಫೇಸ್ ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಸಿಎಂ ಸಿದ್ದರಾಮಯ್ಯ ಕುರಿತು ಸರಕಾರದ ಬೆಲೆ ಏರಿಕೆ ಬಿಸಿ ದೇವಸ್ಥಾನದ ಸೇವೆಗೂ ತಟ್ಟಿದೆ ಎಂದು ಸುಳ್ಳು ಸಂದೇಶ ಹಾಗೂ ಅವಹೇಳನಕಾರಿ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ, ಸಮಾಜದ ಸ್ವಾಸ್ಥ ಕೆಡಿಸುತ್ತಿದ್ದಾನೆ. ಈ ಹಿಂದೆಯೂ ಈತ ಹಲವು ಬಾರಿ ರಾಷ್ಟ್ರ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಕುರಿತು ಅವಹೇಳನ ಪದಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಾ ಬಂದಿರುತ್ತಾನೆ ಎಂದು ತಿಳಿದುಬಂದಿದೆ. ಈ ಹಿಂದೆ ಈತನ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಬಗ್ಗೆ ಕೂಡಲೇ ಆತನನ್ನು ವಿಚಾರಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕಾರ್ಕಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ ದೂರಿನಲ್ಲಿ ತಿಳಿಸಿದ್ದಾರೆ.
ಪತ್ರಕರ್ತರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದಲ್ಲಿ ಪ್ರಖ್ಯಾತ ಬಿ.ಜೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಎಎಸ್ಪಿ ಅವರಿಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.