ಶ್ರೀ ಮಹರ್ಷಿ ವಾಲ್ಮೀಕಿ ಎಲ್ಲ ವರ್ಗಗಳಿಗೂ ಸೇರಿದ್ದು. ಅಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಅವರ ಮಾರ್ಗದರ್ಶನ, ತತ್ವಾದರ್ಶಗಳನ್ನು ಇಂದಿನ ಪೀಳಿಗೆಯು ಅರ್ಥಪೂರ್ಣವಾಗಿ ಅನುಕರಣೆ ಮಾಡುವ ರೀತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಬೇಕು ಎಂದು ಚಿಂತಾಮಣಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿಯ ಅಧ್ಯಕ್ಷ ತಹಶೀಲ್ದಾರ್ ಸುದರ್ಶನ್ ಯಾದವ್ ಕರೆ ನೀಡಿದರು.
ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನಲೆ ಸಮುದಾಯದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚಿಂತಾಮಣಿ ತಾಲೂಕು ಪಂಚಾಯತ್‌ನ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಲವು ಇಲಾಖೆಯ ಅಧಿಕಾರಿಗಳು ಗೈರು ಹಾಜರಿ ಆಗಿರುವುದಕ್ಕೆ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಗೈರು ಹಾಜರಾಗಿರುವ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಡೊಳ್ಳುಕುಣಿತ, ವೀರಗಾಸೆ, ಪೂರ್ಣಕುಂಭ ಕಳಶಗಳೊಂದಿಗೆ ಅದ್ದೂರಿಯಾಗಿ ಆಚರಿಸಲು ಸಮುದಾಯದವರು ಸಹಕಾರ ಅಗತ್ಯವೆಂದರು.
“ಎಸ್‌ಟಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಸರ್ಕಾರಿ ಕಚೇರಿಯಲ್ಲಿ ಜಯಂತಿ ಆಚರಣೆ ಮಾಡಿ ದೀಪಾಲಂಕಾರದ ವ್ಯವಸ್ಥೆಯನ್ನು ಕಲ್ಪಿಸಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹಾಗೂ ಸಮುದಾಯದ ಸಾಧಕರನ್ನು ಸನ್ಮಾನಿಸಲಾಗುವುದು” ಎಂದು ತಿಳಿಸಿದರು.
ಸಮುದಾಯದ ಯುವ ಮುಖಂಡ ಆನಂದ್ ಮಾತನಾಡಿ, “ಕುರುಬ ಜನಾಂಗವನ್ನು ಎಸ್‌ಟಿ ಪಂಗಡಕ್ಕೆ ಸೇರ್ಪಡೆ ಮಾಡುತ್ತಿರುವುದಕ್ಕೆ ತೀವ್ರ ಬೇಸರ ಉಂಟಾಗಿದೆ. ಪ್ರಬಲ ಸಮುದಾಯ ಸೇರ್ಪಡೆಯಿಂದಾಗಿ ತೀರಾ ಹಿಂದುಳಿದ ಎಸ್‌ಟಿ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಅದನ್ನು ಸರಿಪಡಿಸುವಂತೆ ಹಾಗೂ ಸರ್ಕಾರಕ್ಕೆ ನಮ್ಮ ಸಮುದಾಯದ ಪರವಾಗಿ ಮನವಿ ಸಲ್ಲಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಆರ್ಥಿಕ ಅಭಿವೃದ್ಧಿಗೆ ಸಹಕಾರ; ಕರ್ನಾಟಕ-ನ್ಯೂಜೆರ್ಸಿ ಒಪ್ಪಂದ: ಪ್ರಿಯಾಂಕ್ ಖರ್ಗೆ
ಈ ಸಂದರ್ಭದಲ್ಲಿ ಬಿಇಒ ಉಮಾದೇವಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಶ್ರೀನಿವಾಸ್‌ನಾಯಕ್, ಪೌರಾಯುಕ್ತ ಜಿ ಎನ್ ಚಲಪತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್ ಅಶೋಕ್‌ಕುಮಾರ್, ಪತ್ರಕರ್ತ ಹಾಗೂ ಸಮುದಾಯದ ಹಿರಿಯ ಮುಖಂಡ ರಾಧಾಕೃಷ್ಣ, ನಲ್ಲಗುಟ್ಟಹಳ್ಳಿ ಆನಂದ್, ಕೆ ಪಿ ನಾರಾಯಣಸ್ವಾಮಿ ಮಂಜುನಾಥ್, ಸುಬ್ರಮಣಿ, ವೇಣುಗೋಪಾಲ್, ವಕೀಲ ಮುನಿಕೃಷ್ಣ, ರವಿ, ಪಿ ಸಿ ಹಳ್ಳಿ ನಾಯಕ್, ಮುನಿವೆಂಕಟಪ್ಪ, ಮಾಡಿಕೆರೆ ಮಣಿಕಂಠ, ಶಂಕರ್, ನರೇಶ್, ನರಸಿಂಹ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಮುಖಂಡರು ಇದ್ದರು.