ಪುತ್ತೂರು ತಾಲೂಕಿನಲ್ಲಿ ತಿರಸ್ಕೃತಗೊಂಡ ಸುಮಾರು 8420 ’94 ಸಿ’ ಮತ್ತು ’94 ಸಿಸಿ’ ಕಡತಗಳನ್ನು ಮರುಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಶಾಸಕ ಅಶೋಕ್ ರೈ ಅವರು ಬುಧವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, “ಹಿಂದಿನ ದಿನಗಳಲ್ಲಿ ಸರಿಯಾದ ಪರಿಶೀಲನೆ ಇಲ್ಲದೆ ಕಡತಗಳನ್ನು ತಿರಸ್ಕರಿಸಲಾಗಿದೆ. ಈಗ ಆ ಅರ್ಜಿದಾರರ ಬಹುತೇಕರು ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದು, ಎಲ್ಲ ದಾಖಲೆಗಳನ್ನೂ ಹೊಂದಿದ್ದಾರೆ. ಆದರೆ ಹಕ್ಕುಪತ್ರ ಇಲ್ಲದಿರುವುದರಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಆನಡ್ಕ ಹಾಲು ಉತ್ಪಾದಕರ ಸಂಘಕ್ಕೆ ಜಮೀನು ಮಂಜೂರಾತಿ ಶಿಫಾರಸು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಂತಿಗೋಡು ಗ್ರಾಮದ ಆನಡ್ಕ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕಾಗಿ 0.15 ಸೆಂಟ್ಸ್ ನಿವೇಶನ ಮಂಜೂರಾತಿ ನೀಡಬೇಕು. ಹಲವಾರು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿರುವ ಈ ಸಂಘಕ್ಕೆ ಯಾವುದೇ ಸ್ಥಿರಾಸ್ತಿ ಇಲ್ಲ. ಪುತ್ತೂರು ತಾಲೂಕು ನರಿಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ.ನಂ: 249/1ಪಿಯಲ್ಲಿನ ಭೂಮಿಯನ್ನು ಸಂಘಕ್ಕೆ ನೀಡಬೇಕೆಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Breaking News | ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು!
15 ದಿನಗಳಲ್ಲಿ ಭೂಮಾಪಕರ ಬಾಕಿ ವೇತನ ಪಾವತಿಗೆ ಸೂಚನೆ: ಪುತ್ತೂರು ತಾಲೂಕಿನಲ್ಲಿ ದರ್ಖಸ್ತು ಪ್ರಕರಣಗಳ ಸರ್ವೇ ಕಾರ್ಯಕ್ಕಾಗಿ ನಿಯೋಜಿಸಲಾದ ಸುಮಾರು 40 ಲೈಸೆನ್ಸ್‌ಡ್ ಸರ್ವೇಯರ್‌ಗಳಿಗೆ ಮಾರ್ಚ್ 2025ರಿಂದ ಬಾಕಿ ಉಳಿದ ವೇತನವನ್ನು 15 ದಿನಗಳಲ್ಲಿ ಪಾವತಿಸುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಇಲಾಖೆಗೆ ಸೂಚನೆ ನೀಡಿದ್ದಾರೆ. ಭೂಮಾಪಕರು ಈ ಬಗ್ಗೆ ಶಾಸಕ ಅಶೋಕ್ ರೈ ಅವರ ಗಮನಕ್ಕೆ ತಂದ ಬಳಿಕ ಅವರು ವಿಷಯವನ್ನು ಸಚಿವರ ಮುಂದಿಟ್ಟಿದ್ದರು. ಮುಖ್ಯಮಂತ್ರಿಗಳ ಮಂಗಳೂರು ಭೇಟಿಯ ವೇಳೆ ಸುಮಾರು 1500 ಆರ್‌ಟಿಸಿ ದಾಖಲೆಗಳ ದುರಸ್ತಿ ಕೆಲಸವನ್ನು 3 ತಿಂಗಳೊಳಗೆ ಪೂರ್ಣಗೊಳಿಸಿದ್ದರೂ, ಪ್ರತಿ ಪ್ರಕರಣಕ್ಕೆ ನಿಗದಿಪಡಿಸಲಾದ ₹1200 ವೇತನ ಪಾವತಿಯಾಗಿರಲಿಲ್ಲ. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ವೇತನ ಪಾವತಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.