ಲಡಾಖ್‌ಗೆ ರಾಜ್ಯತ್ವ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಮತ್ತು ಅವರು ಸ್ಥಾಪಿಸಿದ ಸಂಸ್ಥೆಯ ವಿರುದ್ಧ ವಿದೇಶಿ ಹಣಕಾಸು ಕಾನೂನು ಉಲ್ಲಂಘನೆ ಆರೋಪದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಪ್ರಾಥಮಿಕ ವಿಚಾರಣೆ (ಪಿಇ) ನಡೆಸುತ್ತಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಇನ್ನು ಈ ಹಿಂದೆಯೇ ಈ ಬಗ್ಗೆ ಮಾತನಾಡಿರುವ ಸೋನಮ್ ವಾಂಗ್‌ಚುಕ್ ಅವರು ಸ್ಪಷ್ಟನೆಯನ್ನು ನೀಡಿದ್ದರು. “ಸಂಸ್ಥೆಯು ವಿದೇಶಿ ಹಣವನ್ನು ಪಡೆದಿರುವುದು ನಿಜ. ಆದರೆ ನಮ್ಮ ಸಂಸ್ಥೆಯ ಸಂಶೋಧನೆಯನ್ನು ವಿದೇಶದ ಸಂಸ್ಥೆಗೆ ಮಾರಾಟ ಮಾಡಿ ಅದರ ಪಾವತಿಯನ್ನು ಪಡೆದಿದ್ದೇವೆಯೇ ಹೊರತು, ದತ್ತಿ ಹಣವಲ್ಲ” ಎಂದು ತಿಳಿಸಿದ್ದರು. ಹಾಗೆಯೇ ಲಡಾಖ್ ಹೋರಾಟ ಆರಂಭಿಸಿದ ಬಳಿಕ ನಿರಂತರವಾಗಿ ಕೇಂದ್ರ ಸರ್ಕಾರ ತಮ್ಮನ್ನು ಗುರಿಯಾಗಿಸಿಕೊಂಡಿದೆ ಎಂದು ಸೋನಮ್ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಲಡಾಖ್ ಹಿಂಸಾಚಾರಕ್ಕೆ ಸೋನಮ್ ವಾಂಗ್‌ಚುಕ್ ಪ್ರಚೋದನಾಕಾರಿ ಹೇಳಿಕೆ ಕಾರಣ: ಕೇಂದ್ರ ಸರ್ಕಾರ
ಸುಮಾರು ಎರಡು ತಿಂಗಳ ಹಿಂದೆ ವಾಂಗ್‌ಚುಕ್ ಮತ್ತು ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ ಲಡಾಖ್ (ಎಚ್‌ಐಐಎಎಲ್) ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಸದ್ಯ ಲಡಾಖ್ ಹಿಂಸಾಚಾರದ ನಡುವೆ ಸುದ್ದಿ ಮುನ್ನಲೆಗೆ ಬಂದಿದೆ. ಸದ್ಯ ತನಿಖೆಯ ಭಾಗವಾಗಿ ಸಿಬಿಐ ಎಚ್‌ಐಐಎಎಲ್ ಮತ್ತು ವಾಂಗ್‌ಚುಕ್‌ನ ಹಣಕಾಸು ವಹಿವಾಟುಗಳನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
2022 ಮತ್ತು 2024ರ ನಡುವೆ ಪಡೆದ ವಿದೇಶಿ ನಿಧಿಗಳ ವಿವರಗಳನ್ನು ಪಡೆಯಲು ಸಿಬಿಐ ತಂಡವು ಕಳೆದ ವಾರ ಎಚ್‌ಐಐಎಎಲ್‌ಗೆ ಮತ್ತು ಲಡಾಖ್‌ನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿ (SECMOL) ಗೆ ಭೇಟಿ ನೀಡಿದೆ ಎಂದು ಸೋನಮ್ ತಿಳಿಸಿದ್ದಾರೆ.
“ವಿದೇಶಿ ನಿಧಿಗಳನ್ನು ಸ್ವೀಕರಿಸಲು ನಾವು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (FCRA) ಅಡಿಯಲ್ಲಿ ಅನುಮತಿ ಪಡೆದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಾವು ವಿದೇಶಿ ನಿಧಿಗಳ ಮೇಲೆ ಅವಲಂಬಿತರಾಗಲು ಬಯಸಲ್ಲ. ನಾನು ನಮ್ಮ ಯೋಜನೆಯನ್ನು ರಫ್ತು ಮಾಡಿ, ಆದಾಯವನ್ನು ಗಳಿಸಿದ್ದೇವೆ. ಅದನ್ನು ವಿದೇಶಿ ಕೊಡುಗೆ ಎಂದು ಭಾವಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
