ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಆರ್ಥಿಕ ಚೈತನ್ಯ ತುಂಬಿ ಸಶಕ್ತರನ್ನಾಗಿ ಮಾಡುವುದೇ ನಮ್ಮ ಸಹಕಾರಿ ಕ್ಷೇತ್ರದ ಆದ್ಯ ಕರ್ತವ್ಯವಾಗಿದ್ದು, ಆ ನಿಟ್ಟಿನಲ್ಲಿಯೇ ಕೆಲಸ ಮಾಡುತ್ತೇವೆ ಎಂದು ಹಾಸನದ ಡಿಸಿಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ರಾಂಪುರ ಶೇಖರಪ್ಪ ಹೇಳಿದರು.
ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ದೇಶಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಸಹಕಾರ ಸಂಘಗಳು ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಸಂಕಷ್ಟದ ಸಮಯದಲ್ಲಿ ನೆರವಿಗೆ ಬರುವ ರೈತರೇ ಕಟ್ಟಿ ರೈತರೇ ಬೆಳೆಸುವ ಕ್ಷೇತ್ರವಾಗಿದ್ದು, ರೈತರಿಗೆ ಆರ್ಥಿಕ ಚೈತನ್ಯ ನೀಡುವ ನಿಟ್ಟಿನಲ್ಲಿ ಜಿಲ್ಲಾ ಸಹಕಾರ ಸಂಘದ ಆಡಳಿತ ಮಂಡಳಿ ಭಾಗವಾಗಿ ರೈತರ ಪರವಾಗಿ ಕಾರ್ಯನಿರ್ವಹಿಸುವ ಕೆಲಸವನ್ನು ಮಾಡುತ್ತೇವೆ” ಎಂದರು.
“ರೈತರಿಗೆ ಕೃಷಿಗೆ ಅಗತ್ಯತೆಗೆ ತಕ್ಕಂತೆ ಸಾಲ ಸೌಲಭ್ಯ ಹಾಗೂ ರಸ ಗೊಬ್ಬರಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ನಿರ್ದೇಶಕರು ಹಾಗೂ ಅಧ್ಯಕ್ಷರನ್ನು ಒಳಗೊಂಡಂತೆ ಮಾಡುವ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದ ಅವರು ರೈತರಿಗೆ ಹಾಗೂ ಸಂಘದ ಸೇರುದಾರರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸವನ್ನು ಓರ್ವ ರೈತನ ಮಗನಾಗಿ ಮಾಡಲು ಸದಾ ಸಿದ್ಧನಿದ್ದು, ರೈತರ ಜೊತೆಯಲ್ಲಿಯೇ ಇರುವ ಕೆಲಸವನ್ನು ಮಾಡುತ್ತೇವೆ” ಎಂದರು.
ಸಂಘದ ಅಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, “ಪ್ರಾಥಮಿಕ ಕೃಷಿಪಟ್ಟಿನ ಸಹಕಾರ ಸಂಘದ ಧ್ಯೇಯೋದ್ದೇಶವೇ ನಮ್ಮ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದ್ದು, ರೈತರ ಶ್ರೇಯೋಭಿವೃದ್ಧಿಗೆ ಸಂಘ ಸದಾ ತನ್ನ ನೆರವನ್ನು ನೀಡಲು ಸಿದ್ಧವಿರುತ್ತದೆ, ನಾನು ಕೂಡ ಒಬ್ಬ ರೈತನಾಗಿದ್ದು ರೈತರ ಕಷ್ಟಸುಖಗಳ ಅರಿವು ನನಗಿದೆ, ಈ ನಿಟ್ಟಿನಲ್ಲಿ ರೈತರ ಪರವಾಗಿ ಹಾಗೂ ಸಹಕಾರಿಗಳ ಪರವಾಗಿ ಸಂಘದ ಮತ್ತು ರೈತರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ” ಎಂದರು.
ಇದನ್ನೂ ಓದಿ: ಹಾಸನ | ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಂ ಶಿವಣ್ಣ ನಿಧನ
“ಸಂಘದ ಅಭಿವೃದ್ಧಿ ನಿಟ್ಟಿನಲ್ಲಿ ಬೆಳೆ ಸಾಲದ ಜೊತೆಗೆ ಸಾದ್ಯವಾದರೆ ಇತರ ಸಾಲಗಳು ಹಾಗೂ ನೆರವುಗಳನ್ನು ಕೊಡುವ ಕೆಲಸಕ್ಕೆ ಮುಂದಿನ ದಿನಗಳಲ್ಲಿ ಚಾಲನೆ ನೀಡುವ ಚಿಂತನೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಕೆಲ ನಿರ್ಧಾರಗಳನ್ನು ನಿರ್ದೇಶಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಈ ವೇಳೆ ಸಂಘದ ವತಿಯಿಂದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ರಾಂಪುರ ಶೇಖರಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇನ್ನು ಜೆಡಿಎಸ್ ಮುಖಂಡರಾದ ದೇಶಾಣಿ ನಿಂಗರಾಜು, ಸಿದ್ದೇಶ್, ಆನಂದ್ ಸೇರಿದಂತೆ ಇತರರು ಉಪಾಧ್ಯಕ್ಷರನ್ನು ಸನ್ಮಾನಿಸಿದರು.
ಸಂಘದ ಉಪಾಧ್ಯಕ್ಷರು, ನಿರ್ದೇಶಕರು, ಷೇರುದಾರರು, ರೈತರು, ಗ್ರಾಮಸ್ಥರು ಹಾಗೂ ಸಿಬ್ಬಂದಿಗಳಾದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವಿಶ್ವನಾಥ, ಎಂ. ಆರ್. ಚೇತನ, ಸೇರಿದಂತೆ ಇತರರು ಉಪಸ್ಥಿತರಿದ್ದರು.