ಬೈಕ್ ಟ್ಯಾಕ್ಸಿಗಳಿಗೆ ರಾಜ್ಯದಲ್ಲಿ ನೀತಿ ರೂಪಿಸಲು ಒಂದು ತಿಂಗಳ ಕಾಲಾವಕಾಶ ನೀಡಿದರೂ ಸೂಕ್ತ ಕ್ರಮಕ್ಕೆ ಮುಂದಾಗದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ.
ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಓಲಾ, ಉಬರ್ ಮತ್ತು ರ್ಯಾಪಿಡೋ ಮಾತೃ ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿತು.
“ಬೈಕ್ ಟ್ಯಾಕ್ಸಿಗಳಿಗೆ ನೀತಿ ರೂಪಿಸಲು ಒಂದು ತಿಂಗಳು ಸಮಯ ನೀಡಲಾಗಿದೆ. ಆದರೆ, ಈವರೆಗೂ ಸರ್ಕಾರ ನೀತಿ ರೂಪಿಸಿಲ್ಲ. ಅಲ್ಲದೆ, ಬೈಕ್ ಟ್ಯಾಕ್ಸಿ ನಿರ್ಬಂಧಿಸಿರುವ ಸರ್ಕಾರದ ಕ್ರಮಕ್ಕೆ ತಡೆ ನೀಡುವ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಅಲ್ಲದೆ, ಮುಂದಿನ ವಿಚಾರಣೆ ವೇಳೆ ಬೈಕ್ ಟ್ಯಾಕ್ಸಿ ಬಗ್ಗೆ ನಿಮ್ಮ ವಾದವನ್ನು ಮಂಡಿಸಿ. ಬಳಿಕ ಸೂಕ್ತ ಆದೇಶ ಹೊರಡಿಸಲಾಗುವುದು” ಎಂದು ಅಸಮಾಧಾನ ವ್ಯಕ್ತಪಡಿಸಿ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ನಿಗದಿಪಡಿಸಿತು.
ವಿಚಾರಣೆ ವೇಳೆ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, “ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ನಿರ್ಬಂಧ ವಿಧಿಸಿದ್ದು, ಪ್ರಯಾಣಿಕರು ಬಳಸಲು ಅನುಮತಿ ನೀಡಿಲ್ಲ. ಕೇವಲ ಡೆಲಿವರಿಗಾಗಿ ಬಳಸಲು ಅವಕಾಶ ನೀಡಲಾಗಿದೆ. ಡೆಲಿವರಿಗಾಗಿ ಟ್ಯಾಕ್ಸಿ ಎಂದು ನೋಂದಣಿ ಮಾಡಿಸುವ ಅಗತ್ಯವಿಲ್ಲ. ಈ ಸಂಬಂಧ ನೀತಿ ರೂಪಿಸಿದ್ದೇವೆ. ಬೈಕ್ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶವಿಲ್ಲ. ಅನುಮತಿ ಇಲ್ಲದಿದ್ದರೂ ಬೈಕ್ ಟ್ಯಾಕ್ಸಿಗಳನ್ನು ಪ್ರಯಾಣಿಕರಿಗಾಗಿ ಬಳಸುತ್ತಿದ್ದಾರೆ. ಈ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಬೈಕ್ ಟ್ಯಾಕ್ಸಿ ಕಂಪನಿಗಳ ವಿರುದ್ಧ ಕ್ರಮಕ್ಕೆ ಅವಕಾಶ ನೀಡಬೇಕು” ಎಂದು ಮನವಿ ಮಾಡಿದರು.