ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ವಿಜಯಪುರ ಜಿಲ್ಲೆಯ ಇಂಡಿ ಗಡಿಭಾಗದ ಭೀಮಾ ನದಿ ಅರ್ಭಟ ಮುಂದುವರೆದಿದೆ. ಮಹಾರಾಷ್ಟ್ರದ ಉಜ್ಜನಿ, ಸಿನಾ, ವೀರ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದ್ದು, ಮಹಾರಾಷ್ಟ್ರ-ಕರ್ನಾಟಕ ನದಿಪಾತ್ರದ ಗ್ರಾಮಗಳ ಜನರಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಭೀಮಾ ನದಿಯ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಕರ್ನಾಟಕ- ಮಹಾರಾಷ್ಟ್ರ ಸಂಧಿಸುವ ದಕ್ಷಿಣ ಸೋಲಾಪುರ ತಾಲೂಕಿನ ವಡಕಬಳಿ ಮಧ್ಯದ ಸಿನಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ.
ಸಿನಾ, ಉಜ್ಜನಿ, ವೀರ ಜಲಾಶಯದಿಂದ ಭೀಮಾನದಿಗೆ ಮಂಗಳವಾರ 2.50 ಲಕ್ಷ ಕ್ಯುಸೆಕ್ ಅಧಿಕ ನೀರು ಹರಿಬಿಡಲಾಗಿದೆ. ಸಿನಾ ಮಹಾನೀರಿಗೆ ಮಹಾರಾಷ್ಟ್ರದ ಅನೇಕ ಗ್ರಾಮಗಳು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿವೆ. ಇಂಡಿ ತಾಲೂಕಿನ ಹಿಂಗಣಿ ಬ್ಯಾರೇಜ್‌ನಿಂದ ಕೆಳ ಭಾಗದ ಗ್ರಾಮಗಳಲ್ಲಿ ಪ್ರವಾಹ ಎದುರಾಗುವ ಆಂತಕ ಕಾಡುತ್ತಿದೆ.

ಭೀಮಾ ಪ್ರವಾಹದಿಂದ ಎರಡು ರಾಜ್ಯದ ನದಿ ತೀರದ ಸಾವಿರಾರು ಎಕರೆ ಜಮೀನದಲ್ಲಿನ ಕಬ್ಬು, ತೊಗರಿ, ಹತ್ತಿ, ಬಾಳೆ, ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಮತಕ್ಷೇತ್ರ ಶಾಸಕರು ಹಾಗೂ ಅಧಿಕಾರಿಗಳು ಭೇಟಿ ಪರೀಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಕೇಂದ್ರ ಸರ್ಕಾರ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದೆ: ಅಮೂಲ್ಯ ನಿಧಿ
ದಕ್ಷಿಣ ಸೋಲಾಪುರ ತಾಲೂಕಿನ ವಡಕಬಳಿ, ಹತ್ತೂರ ಸೇತುವೆ ಬಳಿ ಸಿನಾನದಿ ಹರಿವು ಹೆಚ್ಚಿದ್ದು, ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನುಗ್ಗಿದ ಹಿನ್ನೆಲೆ ಹೆದ್ದಾರಿ ನಡುವಿನ ಸಂಪರ್ಕ ಕಡಿತಗೊಂಡಿದೆ. ರಸ್ತೆ ಉದ್ದಕ್ಕೂ ವಾಹನಗಳು ನಿಂತುಬಿಟ್ಟಿವೆ.
ಗುರುವಾರ ಬೆಳಗ್ಗೆಯಿಂದ ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಸಾರಿಗೆ ಬಸ್ಸು ರಾಜ್ಯದ ಗಡಿಯವರಗೆ ಮಾತ್ರ ಸಂಚಾರಿಸಲು ಅವಕಾಶವಿದೆ. ರಾಜ್ಯದ ಒಳಗೆ ಮತ್ತು ಹೊರ ಸಂಚರಿಸುವ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ನೀರಿನ ಹರಿಯುವ ಮಟ್ಟ ಕಡಿಮೆಯಾಗುವ ಸಂಭವಿದೆ ಎಂದು ತಜ್ಞರು ಹೇಳಿದ್ದಾರೆ.