ತುಮಕೂರು ತಾಲೂಕಿನ ಬಿದರೆ ಕಟ್ಟೆ ಯೂನಿವರ್ಸಿಟಿ ಕ್ಯಾಂಪಸ್ ಬಳಿ 20/09/2025 ರಂದು ನಡೆದಿದ್ದ ಕಾರು ಮತ್ತು ಶಾಲಾ ಬಸ್ ಅಪಘಾತ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಘಟಿಸಿದ್ದು, ಶಾಲಾ ಬಸ್ ನೋಂದಣಿಯಾಗದಿದ್ದರೂ ಮಕ್ಕಳ ಪ್ರಯಾಣ, ಶಾಲಾ ಬಳಕೆಗೆ ಉಪಯೋಗವಾಗುತ್ತಿದ್ದ ಬಗ್ಗೆ ಎಫ್‌ಐಅರ್ ನಲ್ಲಿಯೇ ಉಲ್ಲೇಖಿಸಲಾಗಿದೆ. ಅಪಘಾತ ನಡೆದ ನಂತರ ಹೆಬ್ಬೂರು ಪೊಲೀಸರು ಶಾಲಾ ಬಸ್ ಅನ್ನು ಸೀಜ಼್ ಮಾಡಿದ್ದರು. ಆದರೆ ಈ ಬಗ್ಗೆ ಹಲವು ಪೊಲೀಸರ ಮೇಲೆ ಹಲವು ಅನುಮಾನಗಳು ವ್ಯಕ್ತವಾಗಿವೆ.
ಅಪಘಾತದಲ್ಲಿ ಬಸ್ ನಜ್ಜುಗುಜಾಗಿತ್ತು. ಸಾರಿಗೆ ಇಲಾಖೆ ಆದೇಶವನ್ನು ಉಲ್ಲಂಘಿಸಿ ವಾಹನವನ್ನು ಬಳಸುತ್ತಿದ್ದರು ಎನ್ನಲಾಗಿದೆ. ಪ್ರಕರಣ ಇತ್ಯರ್ಥವಾಗುವವರೆಗೂ ವಾಹನವನ್ನು ರಿಲೀಸ್ ಮಾಡದಂತೆ ಸಾರಿಗೆ ಇಲಾಖೆ ಐಎಂಇ ನೀಡಿದ್ದರೂ ಕೂಡ ಪೊಲೀಸರು ಅಪಘಾತಕ್ಕೊಳಗಾಗಿದ್ದ ಶಾಲಾ ಬಸ್ ಅನ್ನು ಮೂರು, ನಾಲ್ಕು ದಿನದಲ್ಲಿ ಬಿಟ್ಟುಕಳುಹಿಸಲಾಗಿದೆ ಎನ್ನಲಾಗಿದೆ.
ಹೆಬ್ಬೂರು ಪೊಲೀಸರು ಬಸ್ ರಿಲೀಸ್ ಮಾಡುತ್ತಿದ್ದಂತೆಯೇ ಮಾಲೀಕ ಮಹಾಂತೇಶ್ ಶಾಲಾ ಬಸ್ ತೆಗೆದುಕೊಂಡು ಬೆಂಗಳೂರಿಗೆ ಪರಾರಿಯಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಬಸ್ ಚಾಲಕ ಹಾಗೂ ಶಾಲಾ ಮಕ್ಕಳಿಗೆ ತೀವ್ರತರವಾಗಿ ಗಾಯಗಳಾಗಿದ್ದರೂ ಸಹ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅಪಘಾತಕ್ಕೆ ಕಾರಣವಾದ ಕಾರು ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎನ್ನಾಗಿದ್ದು, ಈ ಪ್ರಕರಣವನ್ನು ಪೊಲೀಸರು ಮುಚ್ಚಿಹಾಕುವ ಯತ್ನದಲ್ಲಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಸಾರಿಗೆ ಇಲಾಖೆ ಆದೇಶವನ್ನು ಹೆಬ್ಬೂರು ಠಾಣಾಧಿಕಾರಿ ಧಿಕ್ಕರಿಸಿರುವುದು ಒಂದು ಕಡೆಯಾದರೆ, ವಶಕ್ಕೆ ಪಡೆದಿದ್ದ ಶಾಲಾ ಬಸ್ ಅನ್ನು ಅದರಲ್ಲೂ ನೋಂದಣಿಯೆರ ಆಗದ ಬಸ್ ಅನ್ನು ಪೊಲೀಸರು ಬಿಡುಗಡೆಗೊಳಿಸಿದ್ದು ಯಾವಕಾರಣಕ್ಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವವಾಗಿದೆ. ಠಾಣಾಧಿಕಾರಿ ಕರ್ತವ್ಯಲೋಪ ಎಸಗುವ ಮೂಲಕ ಪ್ರಕರಣವನ್ನೇ ದಿಕ್ಕು ತಪ್ಪಿಸಿ ಪ್ರಭಾವಿ ರಾಜಕಾರಣಿಯ ಕಾರ್ಯಕರ್ತರಂತೆ ವರ್ತಿಸಿದರೇ ಎಂಬ ಗುಮಾನಿ ಈಗ ಶುರುವಾಗಿದೆ.

ಪ್ರಕರಣದ ಹಿನ್ನೆಲೆ ಏನು?:
ಹೆಬ್ಬೂರು ತಿಮ್ಮಸಂದ್ರ, ಕರಡಿಗೆರೆ, ಗಂಗಸಂದ್ರ, ದೊಡ್ಡ ಸಾರಂಗಿ ಗ್ರಾಮಗಳಿಂದ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಪಿಕಪ್ ಮಾಡುವುದು ಚಾಲಕನ ಪ್ರತಿದಿನದ ಕೆಲಸ. ಸೆ.20ರ ಬೆಳಿಗ್ಗೆ ವಿದ್ಯಾರ್ಥಿಗಳನ್ನು 07-00 ಗಂಟೆಗೆ ಪಿಕ್ ಅಪ್ ಮಾಡಿಕೊಂಡು 8-45ರ ಹೊತ್ತಿಗೆ ಸ್ಕೂಲ್ ಗೆ ಬಿಡಲಾಗಿತ್ತು. ಮಕ್ಕಳನ್ನು ಬಿಟ್ಟ ನಂತರ ಚಾಲಕ ಗಿರೀಶ್ ಎಸ್ಎಂಎಲ್ (SML ISUZUMBUZT54XDK0329039 ಆಗಿದ್ದು, ಇಂಜಿನ್ ನಂಬರ್ SLT6DK318847)
ಕಂಪನಿಯ ಸ್ಕೂಲ್ ಬಸ್ ಅನ್ನು ತಮ್ಮ ಮನೆಯ ಬಳಿಯೇ ಬಿಟ್ಟುಕೊಂಡಿದ್ದರು. ಶಾಲೆ ಮುಗಿಸಿಕೊಂಡು ವಾಪಸ್ ಮಧ್ಯಾಹ್ನ 1-00 ಗಂಟೆಗೆ ಶಾಲೆಯಿಂದ ಹೊರಟು ಗಂಗಸಂದ್ರ, ಕರಡಿಗೆರೆ, ಬಿದರಕಟ್ಟೆ ಗ್ರಾಮಗಳಿಗೆ ಮಕ್ಕಳನ್ನು ಡ್ರಾಪ್ ಮಾಡಿ ತಿಮ್ಮಸಂದ್ರ ಗ್ರಾಮಕ್ಕೆ ಹೋಗಲು ಬಿದರಕಟ್ಟೆ ಗ್ರಾಮದ ಯೂನಿವರ್ಸಿಟಿ ಮುಂಭಾಗ ಬರುತ್ತಿದ್ದಾಗ ಮಧ್ಯಾಹ್ನ ಸುಮಾರು 02-30 ಗಂಟೆ ಸಮಯದಲ್ಲಿ ಯೂನಿವರ್ಸಿಸಿಟಿ ಒಳಗಡೆಯಿಂದ ಮುಖ್ಯ ರಸ್ತೆಗೆ ಬರಲು ಕಾರಿನ ಚಾಲಕನೊಬ್ಬ ತನ್ನ ಕಾರನ್ನು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಾಲಾ ಬಸ್‌ನ ಹಿಂಭಾಗದ ಬಲಭಾಗದ ಚಕ್ರಕ್ಕೆ ರಭಸವಾಗಿ ಗುದ್ದಿದ್ದರಿಂದ ಬಸ್ ನಿಯಂತ್ರಣ ತಪ್ಪಿ ಬಸ್ ಪಕ್ಕಕ್ಕೆ ಉರುಳಿಬಿದ್ದಿದೆ.

ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಬಂದು ಚಾಲಕ ಹಾಗೂ ಬಸ್ ನಲ್ಲಿದ್ದ ತಿಮ್ಮಸಂದ್ರ ಗ್ರಾಮದ 01 ನೇ ಪಿಯುಸಿ ವಿಧ್ಯಾರ್ಥಿಯಾದ ರೋಹಿತ್ 17 ವರ್ಷ ಈತನಿಗೆ ಎಡಗೈಗೆ ತುಂಬಾ ಪೆಟ್ಟಾಗಿ ರಕ್ತಗಾಯವಾಗಿತ್ತು. ಬಸ್ ನಲ್ಲಿದ್ದ ಆಯಾ ಅವರಿಗೆ, ಸ್ಕೂಲ್ ಮಕ್ಕಳಾದ ಮದನ್ ರಾಜ್, ಧನುಷ್, ರೋಹಿಣಿ ಅವರಿಗೆ ಯಾವುದೇ ಪೆಟ್ಟಾಗಿರಲಿಲ್ಲ. ಚಾಲಕನಿಗೆ ಮಾತ್ರ ಬಲಗಾಲು, ಬಲಗೈ ಹಾಗೂ ಎದೆಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ತಕ್ಷಣ ಸಾರ್ವಜನಿಕರು ವಿದ್ಯಾರ್ಥಿ ರೋಹಿತ್ ನನ್ನು ಬಸ್ ನಿಂದ ಹೊರಗೆ ಎಳೆದುಕೊಂಡು ಉಪಚರಿಸಿ ನಂತರ ಅಂಬುಲೆನ್ ಗೆ ಪೋನ್ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಅಪಘಾತಕ್ಕೆ ಕಾರಣವಾಗಿದ್ದ ಕಾರ್ ನ ಸಂಖ್ಯೆ KA- 16-M-9340 ಪೋರ್ಡ್ ಎಕೋ ಸ್ಪೋರ್ಟ್ ಕಾರು ಆಗಿದ್ದು, ಅಪಘಾತವಾದ ರಭಸಕ್ಕೆ ಕಾರಿನ ಮುಂಭಾಗ ಜಖಂ ಆಗಿತ್ತು. ಶಾಲಾ ಬಸ್ ನ ಹಿಂಭಾಗದ ಬಲಗಡೆಯ ಚಕ್ರ ಹಾಗೂ ಗಾಡಿ ಬಾಡಿ ಜಖಂ ಆಗಿತ್ತು. ನಂತರ ಸಾರ್ವಜನಿಕರು ಹಾಗೂ ಪೊಲೀಸರ ಸಹಾಯದಿಂದ ಬಸ್ ಅನ್ನು ಮೇಲಕ್ಕೆ ಎತ್ತಿ ನಂತರ ಬಸ್ ಹಾಗೂ ಕಾರನ್ನು ಹೆಬ್ಬೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಅಪಘಾತ ಆಗಿರುವ ವಾಹನ ಟೋಯಿಂಗ್ ಮಾಡಿಕೊಂಡು ಹೋಗಬೇಕು. ಆದರೆ ಡ್ರೖವ್ ಮಾಡಿಕೊಂಡು ಹೋಗುತ್ತಿದ್ದರಿಂದ ಮತ್ತೊಂದು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.