ಔರಾದ್ ಪಟ್ಟಣದ ಟೀಚರ್ ಬಡಾವಣೆಯ ಗೋದಾಮು, ಮನೆಯೊಂದರಲ್ಲಿ ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ ₹32 ಸಾವಿರಕ್ಕೂ ಅಧಿಕ ಮೌಲ್ಯದ ಪಟಾಕಿ ಜಪ್ತಿ ಮಾಡಿದ್ದು, ಮೂವರ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹೇಳಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಎಸ್ಪಿ ಪ್ರದೀಪ ಗುಂಟಿ ನೇತ್ರತ್ವದಲ್ಲಿ ಔರಾದ್ ಸಿಪಿಐ ರಘುವೀರಸಿಂಗ್ ಠಾಕೂರ, ಪಿಎಸ್‌ಐ ರೇಣುಕಾ, ಡಿಎಸ್‌ಬಿ ಘಟಕ ಎಎಸ್‌ಐ ಗುಂಡಪ್ಪಾ ಹಾಗೂ ಔರಾದ್ ಠಾಣೆಯ ಸಿಬ್ಬಂದಿ ದಾಳಿ ನಡೆಸಿ ಪಟಾಕಿ ಜಪ್ತಿ ಮಾಡಿದ್ದಾರೆ.
ಸರ್ಕಾರದಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆಯದೆ ಮನೆ,ಅಂಗಡಿ,ರಸ್ತೆ,ಗೋದಾಮ ಇತ್ಯಾದಿಗಳಲ್ಲಿ ಪಟಾಕಿಗಳನ್ನು ಸಂಗ್ರಹಣೆ ಅಥವಾ ಮಾರಾಟ ಮಾಡುವಂತಿಲ್ಲ. ಪಟಾಕಿ ಮಾರಾಟ ಮಾಡುವವರು ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣ ಪ್ರಮಾಣ ಪತ್ರ (ಎನ್‌ಒಸಿ) ಅನುಮತಿ ಪಡೆದಿರಬೇಕು. ಪಟಾಕಿಗಳನ್ನು ಸಂಗ್ರಹಣೆ, ಮಾರಾಟ ಮಾಡಲು ಅನುಮತಿ ಪಡೆದ ನಿಗದಿತ ಸ್ಥಳಗಳಲ್ಲಿ ಮಾತ್ರ ಅವಕಾಶ ಇದೆʼ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಪಟಾಕಿ ಮಾರಾಟ ಮಾಡಲು ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ವಯ ಸುರಕ್ಷತೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಜನರ ಆಸ್ತಿ, ಜೀವ ಹಾನಿಯುಂಟಾದಲ್ಲಿ ಅಂತಹ ಮಾಲೀಕರು, ಮಾರಾಟಗಾರರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದುʼ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ವಿರೋಧದ ನಡುವೆಯೂ ಕಾವೇರಿಗೆ ಕಾಂಗ್ರೆಸ್ಸಿಗರ ಮೊಂಡಾರತಿ
ಇದರ ಹೊರತಾಗಿಯೂ ಕಾನೂನಿನ ಉಲ್ಲಂಘನೆ ಮಾಡಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಹಾಗಾಗಿ ಅನಾವಶ್ಯಕವಾಗಿ ಸಾರ್ವಜನಿಕರು ಕಾನೂನಿನ ಸಂಘರ್ಷಕ್ಕೆ ಒಳಗಾಗಬಾರದು ಎಂದು ಎಸ್ಪಿ ಪ್ರದೀಪ ಗುಂಟಿ ಕೋರಿದ್ದಾರೆ.